ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಹೆಂಡ್ತಿಗೂ ಬಸ್ಸಲ್ಲಿ ಫ್ರೀ: ಸಿದ್ದರಾಮಯ್ಯ

‘ಯಜಮಾನಿ ಒಬ್ಬರೆ, ಅತ್ತೆ–ಸೊಸೆ ಪ್ರಶ್ನೆ ಇಲ್ಲ‘
Published 2 ಜೂನ್ 2023, 16:13 IST
Last Updated 2 ಜೂನ್ 2023, 16:13 IST
ಅಕ್ಷರ ಗಾತ್ರ

ಬೆಂಗಳೂರು: ಗ್ಯಾರಂಟಿ ಜಾರಿ ನಿರ್ಣಯವನ್ನು ಪ್ರಕಟಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕಿಕ್ಕಿರಿದು ಸೇರಿದ್ದರು. ಸಚಿವ ಸಂಪುಟದ ಬಹುತೇಕ ಸಚಿವರು ಭಾಗವಹಿಸಿದ್ದರು. ಸುದ್ದಿಗಾರರ ಎಲ್ಲ ಪ್ರಶ್ನೆಗಳಿಗೂ ಅವರು ಹಾಸ್ಯ ಮಿಶ್ರಿತ ಧಾಟಿಯಲ್ಲೇ ಉತ್ತರಿಸಿದರು.

ಪದೇ ಪದೇ ‘ಅರ್ಥ ಆಯ್ತಾ’ ಎಂದು ಸಿದ್ದರಾಮಯ್ಯ ಕೇಳಿದಾಗ, ಸುದ್ದಿಗಾರರು ಸಂದೇಹಗಳನ್ನು ಮುಂದಿಟ್ಟಾಗ, ‘ನಾನು ಮೇಸ್ಟ್ರು ಆಗಿದ್ದೆ ಕಣ್ರೀ... ನಿಮಗೆ ಅರ್ಥ ಮಾಡಿಸಬೇಕಲ್ಲ’ ಎಂದೂ ಹೇಳಿದರು.

ಅತ್ತೆ– ಸೊಸೆ ಪ್ರಶ್ನೆ ಇಲ್ಲ: ‘ಗೃಹ ಲಕ್ಷ್ಮಿ ಯೋಜನೆಯಡಿ ಮಾಧ್ಯಮಗಳಲ್ಲಿ ಬಿಂಬಿಸಿದಂತೆ  ಅತ್ತೆ– ಸೊಸೆ ಪ್ರಶ್ನೆ ಉದ್ಭವಿಸುವುದಿಲ್ಲ. ಮನೆ ಯಜಮಾನಿಯನ್ನು ಮನೆಯವರೇ ತೀರ್ಮಾನಿಸಿಕೊಳ್ಳಬೇಕು. ಯಾರ ಖಾತೆಗೆ ಹಣ ಪಾವತಿ ಮಾಡಬೇಕು ಎಂಬುದನ್ನೂ ಅವರೇ ತೀರ್ಮಾನಿಸಿ ಅರ್ಜಿ ಸಲ್ಲಿಸಬೇಕು. ಬ್ಯಾಂಕ್‌ ಖಾತೆ ಮತ್ತು ಆಧಾರ್‌ ಕಾರ್ಡ್‌ ಕಡ್ಡಾಯವಾಗಿ ಕೊಡಬೇಕು’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ನಮ್ಮದು ನುಡಿದಂತೆ ನಡೆದ ಸರ್ಕಾರ. ನಮ್ಮ ಯೋಜನೆಗಳ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕ ಅಧಿಕಾರವಿಲ್ಲ. ಅವರ ಸರ್ಕಾರ ಇದ್ದಾಗ ಪ್ರಣಾಳಿಕೆಯಲ್ಲಿ ನೀಡಿದ್ದ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ’ ಎಂದು ಪ್ರಶ್ನಿಸಿದರು.

ವಿದ್ಯುತ್‌ ಬಿಲ್‌ಗೆ ಸಂಬಂಧಿಸಿದಂತೆ ಹಳೆಯ ಬಾಕಿಗಳನ್ನೆಲ್ಲಾ ಪಾವತಿಸಬೇಕು ಎಂದೂ ಅವರು ಹೇಳಿದರು.

ನನ್ನ ಹೆಂಡ್ತಿಗೂ ಫ್ರೀ: ಬಸ್‌ ಪ್ರಯಾಣ ‘ನನ್ನ ಹೆಂಡ್ತಿಗೂ ಫ್ರೀ’... ಹೀಗೆಂದು ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು.

ತಮ್ಮ ಅಕ್ಕ ಪಕ್ಕದಲ್ಲಿದ್ದ ಸಚಿವರನ್ನು ನೋಡಿ ಅವರು ಈ ರೀತಿ ಹೇಳಿದರು. ‘ಎಲ್ಲ ಮಹಿಳೆಯರಿಗೂ ಉಚಿತ’ ಎಂದು ಮತ್ತೆ ಮತ್ತೆ ಹೇಳಿದರು.

ಆಗ ಸುದ್ದಿಗಾರರು ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ, ‘ನಿಮ್ಮ ಪತ್ನಿಯೂ ಫ್ರೀಯಾಗಿ ಬಸ್ಸಲ್ಲಿ ಹೋಗ್ತಾರ’ ಎಂದು ಪ್ರಶ್ನಿಸಿದರು. ನಗುವೇ ಶಿವಕುಮಾರ್‌ ಅವರ ಉತ್ತರವಾಗಿತ್ತು.

ರಾಜಹಂಸನೂ ಫ್ರೀ ಕೊಟ್ಟುಬಿಡ್ರಿ: ಉಚಿತ ಬಸ್‌ ಪ್ರಯಾಣದ ವಿವರವನ್ನು ನೀಡುವ ಸಂದರ್ಭದಲ್ಲಿ ‘ರಾಜಹಂಸ ಬಸ್‌ಗಳಲ್ಲೂ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು’ ಎಂದು ಸಿದ್ದರಾಮಯ್ಯ ಹೇಳಿದರು.

ಇದರಿಂದ ಪೇಚಿಗೆ ಸಿಲುಕಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ರಾಜಹಂಸ ಉಚಿತ ಅಲ್ಲ’ ಎಂದರು. ಆಗ ಸಿದ್ದರಾಮಯ್ಯ, ‘ರಾಜಹಂಸದಲ್ಲೂ ಉಚಿತವಾಗಿ ಓಡಾಡಲಿ ಬಿಡ್ರಿ’ ಎಂದರು. ‘ಅವಕಾಶ ಕೊಟ್ಟರೆ, ಎಲ್ಲರೂ ಅದಕ್ಕೆ ನುಗ್ಗುತ್ತಾರೆ’ ಎಂದು ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT