ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋರಾಟ’ ಮುಗಿಸಿದ ನಾಗನಗೌಡ: ದೇವೇಗೌಡ, ರಾಮಕೃಷ್ಣ ಹೆಗಡೆಯವರೊಂದಿಗೆ ಒಡನಾಟ

ಎಂ.ಪಿ.ಚಪೆಟ್ಲಾ
Published 28 ಜನವರಿ 2024, 9:47 IST
Last Updated 28 ಜನವರಿ 2024, 9:47 IST
ಅಕ್ಷರ ಗಾತ್ರ

ಗುರುಮಠಕಲ್: ಜೆಡಿಎಸ್ ಪಕ್ಷದ ಆರಂಭದಿಂದಲೂ ಜಿಲ್ಲೆಯಲ್ಲಿ ಪಕ್ಷ ಸಂಘಟನೆ, ಕಾರ್ಯಕರ್ತರ ಜತೆಗೂಡಿ ಹೋರಾಟಗಳನ್ನು ಕಟ್ಟಿ, ಹೋರಾಟಗಳ ಮೂಲಕವೇ ಹೆಗ್ಗುರುತು ಮೂಡಿಸಿಕೊಂಡಿದ್ದ ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ ಮುತ್ಸದ್ಧಿ ರಾಜಕಾರಣಿ, ಮಾಜಿ ಶಾಸಕ ನಾಗನಗೌಡ ಕಂದಕೂರ (73) ತಮ್ಮ ಬದುಕಿನ ‘ಹೋರಾಟ’ವನ್ನು ಭಾನುವಾರ (ಜ.28) ಬೆಳಿಗ್ಗೆ 10-30ಕ್ಕೆ ಮುಗಿಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಒಡನಾಡಿಯಾಗಿದ್ದ ನಾಗನಗೌಡ ಕಂದಕೂರ ಅವರು ಹಲವು ರಾಜಕೀಯ ಏಳುಬೀಳುಗಳನ್ನು ಕಂಡವರು. ನಿರಂತರ ಸೋಲಿನಲ್ಲೂ ಕಾರ್ಯಕರ್ತರಿಗೆ ಧೈರ್ಯ ತುಂಬುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ತಮ್ಮಿಡಿ ಜೀವನವನ್ನು ಒಂದೇ ಪಕ್ಷದಲ್ಲಿ ಕಳೆಯುತ್ತೇನೆ ಎಂದು ಪದೇ ಪದೆ ಹೇಳುತ್ತಿದ್ದ ಅವರು, ಜೆಡಿಎಸ್ ಪಾಳಯ ಮತ್ತು ದೇವೇಗೌಡ ಕುಟುಂಬದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದರು.

ಅಣ್ಣ ಸದಾಶಿವರೆಡ್ಡಿ ಕಂದಕೂರ ಅವರಿಂದ ಪ್ರೇರಿತರಾಗಿ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡ ಅವರು ರಾಜ್ಯದಲ್ಲಿ ಮೊದಲ ಕಾಂಗ್ರೆಸೇತರ ಸರ್ಕಾರ ರಚಿಸಿದ ದೇವೇಗೌಡ, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಅವರೊಂದಿಗೆ ಒಡನಾಟ ಬೆಳೆಸಿದರು. ರೈತಪರ ಹೋರಾಟಗಳಲ್ಲಿ ದೇವೇಗೌಡರೊಂದಿಗೆ ಪಾಲ್ಗೊಳ್ಳುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡರು.

ಪಕ್ಷನಿಷ್ಠೆಗೆ ಹೆಸರು: ಜನತಾಪಕ್ಷದೊಂದಿಗೆ ಹೆಜ್ಜೆಹಾಕಿದ್ದ ನಾಗನಗೌಡರು ಮತಕ್ಷೇತ್ರದಲ್ಲಿ ಜನಾಂದೋಲನಗಳನ್ನು ರೂಪಿಸುವುದು ಕಾರ್ಯಕರ್ತರ ಕಷ್ಟಗಳಲ್ಲಿ ಜತೆಯಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದರು. ಜನತಾಪಕ್ಷವು ಬಿರುಕು ಬಿಟ್ಟ ನಂತರ ಎಚ್.ಡಿ.ದೇವೇಗೌಡರ ಜನತಾದಳ (ಜ್ಯಾತ್ಯತೀತ)ದೊಂದಿಗೆ ಸಾಗಿದರು. ಸವಾಲುಗಳಿಗೆ, ಬದಲಾದ ಪರಿಸ್ಥಿತಿಗಳಿಗೆ ಎದೆಗುಂದದಿರುವ ಅವರ ‘ಪಕ್ಷನಿಷ್ಠೆಯ’ನ್ನು ಎದುರಾಳಿಗಳೂ ಮೆಚ್ಚಿಕೊಂಡಿದ್ದಿದೆ.

ನಾಗನಗೌಡ ಕಂದಕೂರ ಅವರ ಹೆಜ್ಜೆಗಳು

ನಾಗನಗೌಡ ಕಂದಕೂರ ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.ಕಂದಕೂರ ಕ್ಷೇತ್ರದಿಂದ 1986 ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ, ಜಿಲ್ಲಾ ಪಂಚಾಯಿತಿಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದು ಅವರ ಮೊದಲ ರಾಜಕೀಯ ಮೆಟ್ಟಿಲು.

  • 1998 ರಲ್ಲಿ ಎಪಿಎಂಸಿ ಸದಸ್ಯರಾಗಿ ಆಯ್ಕೆ, 2003 ರ ವರೆಗೆ ಯಾದಗಿರಿ ಎಪಿಎಂಸಿ ಅಧ್ಯಕ್ಷರಾಗಿ ಅಧಿಕಾರ.


  • 2007 ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಕೆ.ಡಿ.ಬಿ (ಕೆ.ಕೆ.ಆರ್.ಡಿ.ಬಿ) ಅಧ್ಯಕ್ಷರಾಗಿ ನೇಮಕ,


  • 2008 ರಿಂದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆ, 2008ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧೆ 9208 ಮತಗಳ ಅಂತರದಿಂದ ಸೋಲು


  • 2013ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಮರು ಸ್ಪರ್ಧೆ, 1650 ಮತಗಳಿಂದ ಸೋಲು


  • 2018ರಲ್ಲಿ ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ 24480 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ ಚಿಂಚನಸೂರ ವಿರುದ್ಧ ಗೆಲುವು (ಶೇ 52.40 ಮತಗಳೊಂದಿಗೆ), ಮೊದಲಬಾರಿ ಶಾಸಕರಾಗಿ ಆಯ್ಕೆ.


  • 2019ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT