ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ಮೀಟರ್‌ ಹೆಜ್ಜೆ ಹಾಕಿ ದಶಪಥಕ್ಕೆ ಮೋದಿ ಚಾಲನೆ: ಪ್ರತಾಪ್‌ ಸಿಂಹ

ಗೆಜ್ಜಲಗೆರೆ ಕಾಲೊನಿಯಲ್ಲಿ ಪ್ರಧಾನಿ ಕಾರ್ಯಕ್ರಮದ ವೇದಿಕೆ ಅನಾವರಣ
Last Updated 9 ಮಾರ್ಚ್ 2023, 13:08 IST
ಅಕ್ಷರ ಗಾತ್ರ

ಮಂಡ್ಯ: ‘ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 12ರಂದು ಮಧ್ಯಾಹ್ನ 12 ಗಂಟೆಗೆ ಎಕ್ಸ್‌ಪ್ರೆಸ್‌ ವೇಯಲ್ಲಿ 50 ಮೀಟರ್‌ನಷ್ಟು ಹೆಜ್ಜೆ ಹಾಕುವ ಮೂಲಕ ದಶಪಥ ಕಾಮಗಾರಿಗೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ’ ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹ ಗುರುವಾರ ಹೇಳಿದರು.

ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಕಾಲೊನಿಯಲ್ಲಿ ನಡೆಯಲಿರುವ ಪ್ರಧಾನಿ ಸಮಾವೇಶದ ಸಿದ್ಧತೆ ಪರಿಶೀಲಿಸಿ, ವೇದಿಕೆ ಅನಾವರಣಗೊಳಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಅಂದು ಬೆಳಿಗ್ಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಬಂದಿಳಿಯುತ್ತಾರೆ. ಬೆಳಿಗ್ಗೆ 11.35ಕ್ಕೆ ಪಿಇಎಸ್‌ ಕಾಲೇಜು ಹೆಲಿಪ್ಯಾಡ್‌ನಲ್ಲಿ ಇಳಿಯುತ್ತಾರೆ. ನಂತರ ಮಂಡ್ಯ ಪ್ರವಾಸಿ ಮಂದಿರ ಸರ್ಕಲ್‌ನಿಂದ 1.8 ಕಿ.ಮೀ ರೋಡ್‌ ಶೋ ನಡೆಸಲಿದ್ದಾರೆ. ನಂತರ ಅಮರಾವತಿ ಹೋಟೆಲ್‌ ಮುಂದಿನ ಸ್ಥಳದಲ್ಲಿ ಅವರು ಮೈಸೂರು– ಬೆಂಗಳೂರು ದಶಪಥ ಪ್ರವೇಶಿಸಲಿದ್ದಾರೆ’ ಎಂದರು.

‘ಹೆದ್ದಾರಿಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, 50 ಮೀಟರ್‌ಗಳವರೆಗೆ ಹೆಜ್ಜೆಹಾಕಿ ದಶಪಥಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ನಂತರ ಮಧ್ಯಾಹ್ನ 12.05ಕ್ಕೆ ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಕಾಲೊನಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಕಾರ್ಯಕ್ರಮದಲ್ಲಿ ₹ 5,700 ಕೋಟಿ ವೆಚ್ಚದ ಕುಶಾಲನಗರ– ಮೈಸೂರು ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ, ಮಂಡ್ಯದ ₹ 137 ಕೋಟಿ ವೆಚ್ಚದ ಕುಡಿಯುವ ನೀರು ಕಾಮಗಾರಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ’ ಎಂದರು.

‘ರೋಡ್‌ ಶೋ ವೇಳೆ 40 ಸಾವಿರ ಜನ, ಸಮಾವೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿ ಒಟ್ಟಾರೆ 3 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಸಮಾವೇಶದ ನಂತರ ಗೆಜ್ಜಲಗೆರೆ ಕಾಲೊನಿ ಬಳಿಯ ಪ್ರತ್ಯೇಕ ಹೆಲಿಪ್ಯಾಡ್‌ ಮೂಲಕ ಧಾರವಾಡಕ್ಕೆ ತೆರಳಲಿದ್ದಾರೆ’ ಎಂದರು.

ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಕಾಲೊನಿಯಲ್ಲಿ ಪ್ರಧಾನಿ ಮೋದಿ ಸಮಾವೇಶಕ್ಕೆ ಸಿದ್ಧಗೊಳ್ಳುತ್ತಿರುವ ವೇದಿಕೆ
ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಕಾಲೊನಿಯಲ್ಲಿ ಪ್ರಧಾನಿ ಮೋದಿ ಸಮಾವೇಶಕ್ಕೆ ಸಿದ್ಧಗೊಳ್ಳುತ್ತಿರುವ ವೇದಿಕೆ

‘ಹೆದ್ದಾರಿ ನಾಮಕರಣ ಸಂಬಂಧ ಯಾವುದೇ ನಿರ್ಧಾರವಾಗಿಲ್ಲ, ಈ ವಿಚಾರದಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಇಡೀ ದೇಶದಲ್ಲಿ ಹೆದ್ದಾರೆಗೆ ವ್ಯಕ್ತಿಯ ಹೆಸರಿಟ್ಟ ಉದಾಹರಣೆಗಳಿಲ್ಲ, ಪವಿತ್ರ ನದಿಗಳ ಹೆಸರಿಟ್ಟಿದ್ದಾರೆ. ಮಂಡ್ಯ, ಮೈಸೂರು, ಬೆಂಗಳೂರು ಸುಭಿಕ್ಷವಾಗಲು ಕಾವೇರಿ ನದಿ ಕಾರಣ, ಹೀಗಾಗಿ ಕಾವೇರಿ ಹೆಸರಿಡಲು ಸೂಚಿಸಿದ್ದೇನೆ, ಅದೂ ಅಂತಿಮಗೊಂಡಿಲ್ಲ’ ಎಂದರು.

‘ಕೆಲವರು ಒಡೆಯರ್‌ ಹೆಸರು ಹೇಳುತ್ತಿದ್ದಾರೆ. ಮೈಸೂರು ವಿಮಾನ ನಿಲ್ದಾಣ ₹ 319 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳ್ಳುತ್ತಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿಡಲಾಗುತ್ತಿದೆ, ರೈಲು ನಿಲ್ದಾಣಕ್ಕೆ ಚಾಮರಾಜ ಒಡೆಯರ್‌ ಹೆಸರಿಡಲಾಗಿದೆ’ ಎಂದರು.

2,400 ಪೊಲೀಸ್‌ ಸಿಬ್ಬಂದಿ ನಿಯೋಜನೆ: ‘ವಿವಿಧ ಜಿಲ್ಲೆಗಳಿಂದ ಬರುವ 2,400 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಪ್ರಧಾನಿ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಮಾಹಿತಿ ನೀಡಿದರು.

ಮೋದಿ ಎದುರು ರಾಹುಲ್‌, ಸೋನಿಯಾ ನಿಲ್ಲಲ್ಲ: ಸವಾಲು
‘ನರೇಂದ್ರ ಮೋದಿ ಅವರು ನಮ್ಮ ದೇಶದ ಜಗದೇಕವೀರ. ಅವರೆದುರು ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ನಿಲ್ಲಲು ಸಾಧ್ಯವಿಲ್ಲ. ಮೋದಿ ಬಂದಾಗ ಎಷ್ಟು ಜನ ಬರುತ್ತಾರೆ, ಕಾಂಗ್ರೆಸ್‌ ನಾಯಕರು ಬಂದಾಗ ಎಷ್ಟು ಜನರನ್ನು ಸೇರಿಸುತ್ತಾರೆ ಎಂಬುದನ್ನು ನೋಡಿಯೇ ಬಿಡೋಣ’ ಎಂದು ಪ್ರತಾಪ್‌ ಸಿಂಹ ಸವಾಲು ಹಾಕಿದರು.

‘ಸಿದ್ದರಾಮಯ್ಯ ದಶಪಥ ವೀಕ್ಷಣೆ ಮಾಡಲು ಬರುತ್ತಿರುವುದು ಕೇವಲ ಜಾಲಿ ರೈಡ್‌ ಆಗಿದೆ. ಕಾಮಗಾರಿ ನಡೆಯುವಾಗ ಬಂದಿದ್ದರೆ ಪರಿಶೀಲನೆ ಆಗುತ್ತಿತ್ತು, ಕಾಮಗಾರಿ ಮುಗಿದ ನಂತರ ಬರುತ್ತಿರುವುದು ಜಾಲಿ ರೈಡ್‌ ಆಗಿದೆ’ ಎಂದರು.

‘ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ನೆಲೆ ಸಿಗುವುದು ಅನುಮಾನ, ಅವರು ವಾಪಸ್‌ ವರುಣಾ ಕ್ಷೇತ್ರಕ್ಕೆ ಬರಬೇಕು. ಅದಕ್ಕಾಗಿ ಎಕ್ಸ್‌ಪ್ರೆಸ್‌ವೇಯಲ್ಲಿ ಜಾಲಿ ರೈಡ್‌ ಬರುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT