ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಮಟ್ಟದ ದುಂಡುಮೇಜಿನ ರೈತ ಪರಿಷತ್ 19ರಿಂದ

Last Updated 14 ಮಾರ್ಚ್ 2022, 22:00 IST
ಅಕ್ಷರ ಗಾತ್ರ

ಮೈಸೂರು: ‘ರಾಷ್ಟ್ರಮಟ್ಟದ ದುಂಡುಮೇಜಿನ ರೈತ ಪರಿಷತ್ ಮಾರ್ಚ್ 19 ಮತ್ತು 20ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದ ರೈತ ಮುಖಂಡರು ಭಾಗಿಯಾಗಲಿದ್ದಾರೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

‘ವಿವಿಧ ರಾಜ್ಯಗಳಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪರಿಷತ್‌ನಲ್ಲಿ ಚರ್ಚಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು’ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ರಾಜಕಾರಣವೇ ಬೇರೆ, ಹೋರಾಟವೇ ಬೇರೆ. ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲ. ಎರಡು ವರ್ಷ ರೈತರ ಪರವಾಗಿ ಹೋರಾಡಿದ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಪಂಜಾಬ್ ಚುನಾವಣೆಯಲ್ಲಿ ಸೋತಿರುವುದೇ ಅದಕ್ಕೆ ಸಾಕ್ಷಿ’ ಎಂದು ಪ್ರತಿಪಾದಿಸಿದರು.

ಕೆಲವು ರೈತ ಮುಖಂಡರು ರೈತರ ಸಮಸ್ಯೆಗಳನ್ನು ಬಿಟ್ಟು ಕೆಎಸ್‌ಆರ್‌ಟಿಸಿ, ಸರ್ಕಾರಿ ನೌಕರರ ಸಮಸ್ಯೆಗಳ ಕಡೆ ಹೆಚ್ಚಿನ ಗಮನ ಕೊಡುತ್ತಾರೆ. ಕೆಲವರು ರಾಜಕೀಯ ಪಕ್ಷಗಳ ಜತೆಗೆ ನಂಟು ಹೊಂದಿದ್ದಾರೆ. ಇಂತಹ ನಾಯಕರು ರೈತ ಸಂಘಟನೆಗಳನ್ನು ಬಿಟ್ಟು ರಾಜಕೀಯ ಪಕ್ಷಗಳಿಗೆ ಸೇರುವುದು ಉತ್ತಮ ಎಂದರು.

ರೈತರ ಆದಾಯ ಏರಿಕೆಯಾಗದೇ ನಿರಂತರವಾಗಿ ಕಡಿಮೆಯಾಗುತ್ತಿದೆ. ಆದರೆ, ಜನಪ್ರತಿನಿಧಿಗಳು ತಮ್ಮ ವೇತನ ಹೆಚ್ಚಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಎಲ್ಲ ರಾಜಕೀಯ ಪಕ್ಷಗಳೂ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿವೆ ಎಂದರು.

ಕೃಷಿ ಉತ್ಪನ್ನಗಳು, ರಸಗೊಬ್ಬರ, ಕೀಟನಾಶಕ, ಹನಿ, ನೀರಾವರಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್‌ಟಿಯನ್ನು ರದ್ದುಗೊಳಿಸಬೇಕು, ರೈತರ ಸಾಲ ನೀತಿ ಬದಲಾಯಿಸಿ ಕೃಷಿ ಭೂಮಿ ಮೌಲ್ಯದ ಶೇ 75ರಷ್ಟು ಸಾಲ ನೀಡಬೇಕು, ಕಬ್ಬಿನಿಂದ ಉತ್ಪಾದಿಸುವ ಎಥೆನಾಲ್ ಘಟಕ ಆರಂಭಕ್ಕೆ ಸಮೀಪದಲ್ಲಿರುವ ಸಕ್ಕರೆ ಕಾರ್ಖಾನೆ ಅನುಮತಿ ಬೇಕೆಂಬ ಷರತ್ತನ್ನು ರದ್ದುಗೊಳಿಸಬೇಕು, ಎಲ್ಲಾ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿ ಶಾಸನಾತ್ಮಕ ಖಾತ್ರಿ ನೀಡಬೇಕು ಎಂದು ಆಗ್ರಹಿಸಿದರು.

ಎಲ್ಲ ಕೃಷಿ ಉತ್ಪನ್ನ ಬೆಳೆಗಳಿಗೂ ಫಸಲ್ ಬಿಮಾ ಬೆಳೆ ವಿಮೆ ಜಾರಿಗೆ ತರಬೇಕು, ಅತಿವೃಷ್ಟಿ-ಅನಾವೃಷ್ಟಿ, ಆಕಸ್ಮಿಕ ಬೆಂಕಿ, ಪ್ರವಾಹ, ಬೆಳೆ ನಾಶ ಪರಿಹಾರದ ಮಾನದಂಡ ಬದಲಾಯಿಸಬೇಕು, ಅರಿಸಿನದ ಮೇಲಿನ ಜಿಎಸ್‌ಟಿ ತೆರಿಗೆಯನ್ನು ರದ್ದು ಪಡಿಸಬೇಕು, ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಹತ್ತಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗಸೂರು ಶಂಕರ, ಬರಡನಪುರ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT