ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಕಣಿವೆಯ ಹಸಿರು ನಾಶ: ರಾಜ್ಯ ಸರ್ಕಾರಕ್ಕೆ ಎನ್‌ಜಿಟಿ ನೋಟಿಸ್‌

Published 13 ಜನವರಿ 2024, 0:06 IST
Last Updated 13 ಜನವರಿ 2024, 0:06 IST
ಅಕ್ಷರ ಗಾತ್ರ

ನವದೆಹಲಿ: ಐವತ್ತು ವರ್ಷಗಳಲ್ಲಿ (1965ರಿಂದ 2016) ಕಾವೇರಿ ಕಣಿವೆಯ 12,850 ಚದರ ಕಿ.ಮೀ. ಹಸಿರು ನಾಶವಾಗಿದೆ ಎಂಬ ಭಾರತೀಯ ವಿಜ್ಞಾನ ಸಂಸ್ಥೆಯ ವರದಿಯ ಆಧಾರದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಸರ್ಕಾರಗಳಿಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠ ನೋಟಿಸ್‌ ನೀಡಿದೆ. 

ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ನೇತೃತ್ವದ ತ್ರಿಸದಸ್ಯ ಪೀಠವು ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯದ ಮಹಾನಿರ್ದೇಶಕರು, ಫಾರೆಸ್ಟ್‌ ಸರ್ವೆ ಆಫ್‌ ಇಂಡಿಯಾವನ್ನು ಪ್ರತಿವಾದಿಗಳನ್ನಾಗಿ ಮಾಡಿ ನೋಟಿಸ್‌ ಕೊಟ್ಟಿದೆ. 

ಕಾವೇರಿ ಕಣಿವೆಯ ಜಲಾನಯನ ‍ಪ್ರದೇಶದ ಶೇ 73.5ರಲ್ಲಿ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳು ನಡೆಯುತ್ತಿವೆ. ಶೇ 18 ‌ಪ್ರದೇಶದಲ್ಲಿ ಅರಣ್ಯವಿದೆ. ದಟ್ಟ ಅರಣ್ಯ ಇರುವುದು ಶೇ 13 ರಷ್ಟು ಪ್ರದೇಶದಲ್ಲಿ ಮಾತ್ರ. 1965ರಿಂದ 2016ರ ಅವಧಿಯಲ್ಲಿ ನೈಸರ್ಗಿಕ ಹಸಿರು ಪ್ರದೇಶ 28,154 ಚದರ ಕಿ.ಮೀ.ಯಿಂದ 15,345 ಚದರ ಕಿ.ಮೀ.ಗೆ ಇಳಿದಿದೆ. ಕರ್ನಾಟಕದಲ್ಲಿ ಶೇ 57ರಷ್ಟು ಹಸಿರು (9,664 ಚ.ಕಿ.ಮೀ) ನಾಶವಾಗಿದೆ. ತಮಿಳುನಾಡಿನಲ್ಲಿ ಶೇ 29 (2905 ಚ.ಕಿ.ಮೀ) ಹಾಗೂ ಕೇರಳದಲ್ಲಿ ಶೇ 27 (279 ಚ.ಕಿ.ಮೀ) ಹಸಿರು ಕಣ್ಮರೆಯಾಗಿದೆ ಎಂದು ವರದಿಯಲ್ಲಿದೆ. 

50 ವರ್ಷಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಶೇ 15.19ರಷ್ಟು ಅರಣ್ಯ ಪ್ರದೇಶ ಕಡಿಮೆಯಾಗಿದೆ. ಅಭಿವೃದ್ಧಿ ಚಟುವಟಿಕೆಗಳು ಹಾಗೂ ಕಾಳ್ಗಿಚ್ಚಿನಿಂದಾಗಿ ರಾಷ್ಟ್ರೀಯ ಉದ್ಯಾನದ ಪೂರ್ವಭಾಗದಲ್ಲಿ ಅರಣ್ಯ ಗಣನೀಯವಾಗಿ ಕಡಿಮೆಯಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯ ಪ್ರಮಾಣ ಶೇ 11ರಷ್ಟು ಕಡಿಮೆಯಾಗಿದೆ. ಇದಕ್ಕೆ ಮಾನವನ ಹಸ್ತಕ್ಷೇಪ ಕಾರಣ. ಮೀಸಲು ಪ್ರದೇಶದಲ್ಲಿ ತೋಟಗಾರಿಕೆ ಚಟುವಟಿಕೆಗಳು ಭಾರಿ ಹೆಚ್ಚಳ ಆಗಿವೆ. ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಅಭಯಾರಣ್ಯದಲ್ಲಿ (ಬಿಆರ್‌ಟಿ) ಅರಣ್ಯ ಪ್ರದೇಶ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಕುರುಚಲು ಕಾಡುಗಳು ಹೆಚ್ಚುತ್ತಿವೆ. ಜತೆಗೆ ಅರಣ್ಯ ಒತ್ತುವರಿ ಜಾಸ್ತಿ ಆಗಿದೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. 

ಕಾವೇರಿ ವನ್ಯಜೀವಿ ಧಾಮದಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಜನಸಂಖ್ಯೆ ಹೆಚ್ಚಳ ಹಾಗೂ ಒತ್ತುವರಿಯಿಂದಾಗಿ ಕಾಡಿಗೆ ಆಪತ್ತು ಉಂಟಾಗಿದೆ. 1973ರಿಂದ 2016ರ ಅವಧಿಯಲ್ಲಿ ಶೇ 18.43ರಷ್ಟು ಹಸಿರು ನಾಶವಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ 1973ರಷ್ಟು ಶೇ 50.40ರಷ್ಟು ದಟ್ಟ ಕಾಡು ಇತ್ತು. 2016ರಲ್ಲಿ ಶೇ 28ಕ್ಕೆ ಕುಸಿದಿದೆ. ಇಲ್ಲಿ ಕೃಷಿ ಚಟುವಟಿಕೆ ಶೇ 7ರಿಂದ ಶೇ 15ಕ್ಕೆ ಏರಿದೆ. ಗಣಿಗಾರಿಕೆ, ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಈ ಉದ್ಯಾನದ ಮೇಲೆ ಒತ್ತಡ ಹೆಚ್ಚಾಗಿದೆ ಎಂದೂ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ. 

ಇದು ಪರಿಸರದ ಕಾನೂನಿನ ಸಂಬಂಧಿಸಿದ ವಿಚಾರ ಎಂದು ಅಭಿಪ್ರಾಯಪಟ್ಟಿರುವ ನ್ಯಾಯ ಮಂಡಳಿ, ‘ಇಂತಹ ಪ್ರಕರಣಗಳ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಪ್ರತಿವಾದಿಗಳು ನ್ಯಾಯ ಮಂಡಳಿಗೆ ಆದಷ್ಟು ಶೀಘ್ರದಲ್ಲಿ ಪ್ರತಿಕ್ರಿಯೆ ನೀಡಬೇಕು’ ಎಂದು ಸೂಚಿಸಿದೆ. 

ಈ ಪ್ರಕರಣ ನ್ಯಾಯ ಮಂಡಳಿಯ ಚೆನ್ನೈ ಪೀಠದ ವ್ಯಾಪ್ತಿಗೆ ಬರುತ್ತಿದೆ. ಹಾಗಾಗಿ ಮುಂದಿನ ವಿಚಾರಣೆಯನ್ನು ಚೆನ್ನೈ ಪೀಠ ನಡೆಸಲಿದೆ ಎಂದು ಪ್ರಧಾನಪೀಠ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT