ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶೇಷ ಸ್ಥಾನಮಾನ ಪ್ರಸ್ತಾವ: ಕೇಂದ್ರಕ್ಕೆ ಮನವಿ ಸಲ್ಲಿಸಲು ಬಿಹಾರ ಸಂಪುಟ ಒಪ್ಪಿಗೆ

Published : 22 ನವೆಂಬರ್ 2023, 13:28 IST
Last Updated : 22 ನವೆಂಬರ್ 2023, 13:28 IST
ಫಾಲೋ ಮಾಡಿ
Comments

ಪಟ್ನಾ: ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರುವ ಪ್ರಸ್ತಾವಕ್ಕೆ ನಿತೀಶ್‌ ಕುಮಾರ್‌ ನೇತೃತ್ವದ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಇದು ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರ ಬಹುದಿನಗಳ ಬೇಡಿಕೆಯಾಗಿತ್ತು. ಸಂಪುಟ ಸಭೆಯ ಬಳಿಕ ನಿತೀಶ್‌ ಅವರೇ ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ.

‘ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಪ್ರಸ್ತಾವಕ್ಕೆ  ಸಂಪುಟ ಅನುಮೋದನೆ ನೀಡಿದೆ’ ಎಂದು ತಿಳಿಸಿರುವ ಅವರು, ರಾಜ್ಯ ಸರ್ಕಾರ ಕೈಗೊಂಡಿದ್ದ ಜಾತಿ ಸಮೀಕ್ಷೆಯ ಫಲಿತಾಂಶವು ಈ ಬೇಡಿಕೆಯನ್ನು ಅಗತ್ಯವಾಗಿಸಿದೆ ಎಂದಿದ್ದಾರೆ.

ಜಾತಿ ಸಮೀಕ್ಷೆಯು ಅವಕಾಶ ವಂಚಿತ ಜಾತಿಗಳಾದ ಎಸ್‌.ಸಿ, ಎಸ್‌.ಟಿ ಮತ್ತು ಒಬಿಸಿಗಳ ಕೋಟಾವನ್ನು ಶೇ 50ರಿಂದ ಶೇ 65ಕ್ಕೆ ಹೆಚ್ಚಿಸಲು ಕಾರಣವಾಗಿದೆ ಎಂದಿರುವ ಅವರು, ಸಮೀಕ್ಷೆಯು ಬಿಹಾರದಲ್ಲಿ 94 ಲಕ್ಷ ಕುಟುಂಬಗಳು ಕಡು ಬಡತನದಲ್ಲಿ ವಾಸಿಸುತ್ತಿವೆ ಎಂಬುದನ್ನು ಬಹಿರಂಗಪಡಿಸಿದೆ. ಹೀಗಾಗಿ ಸರ್ಕಾರವು ಇವರಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಯೋಜಿಸಿದೆ ಎಂದು ಅವರು ಹೇಳಿದ್ದಾರೆ.

ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಈ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಎರಡು ಲಕ್ಷ ರೂಪಾಯಿ ನೆರವು ನೀಡಲು ಸರ್ಕಾರ ಉದ್ದೇಶಿಸಿದೆ. ರಾಜ್ಯದಲ್ಲಿ 39 ಲಕ್ಷ ಕುಟುಂಬಗಳು ಗುಡಿಸಲುಗಳಲ್ಲಿ ವಾಸಿಸುತ್ತಿದ್ದು, ಅವರಿಗೆ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಪ್ರತಿ ಕುಟುಂಬಗಳಿಗೆ ತಲಾ ₹ 1.20 ಲಕ್ಷ ನೆರವು ಒದಗಿಸಲಾಗುವುದು ಎಂದು  ತಿಳಿಸಿದ್ದಾರೆ.

ಭೂ ರಹಿತ ಕುಟುಂಬಗಳಿಗೆ ಜಮೀನು ಖರೀದಿಗಾಗಿ ₹ 60,000 ನೆರವನ್ನು ಸರ್ಕಾರ ನೀಡುತ್ತಿದೆ. ಈ ಮೊತ್ತವನ್ನು ₹ 1 ಲಕ್ಷಕ್ಕೆ ಏರಿಸಲು ನಿರ್ಧರಿಸಲಾಗಿದೆ. ಇದರಿಂದ ರಾಜ್ಯದ 63,850 ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು  ಮಾಹಿತಿ ನೀಡಿದ್ದಾರೆ.

ಹೀಗಾಗಿ, ಇಷ್ಟೆಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ₹ 2.50 ಲಕ್ಷ ಕೋಟಿ ವೆಚ್ಚವಾಗುತ್ತದೆ. ಐದು ವರ್ಷಗಳಲ್ಲಿ ಈ ಯೋಜನೆಗಳನ್ನು ಪೂರ್ಣಗೊಳಿಸುವ ಗಡುವನ್ನು ನಿಗದಿಪಡಿಸಿಕೊಳ್ಳಲಾಗಿದೆ. ಒಂದು ವೇಳೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ದೊರೆತರೆ ಕಡಿಮೆ ಅವಧಿಯಲ್ಲಿ ಈ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ನಿತೀಶ್‌ ಕುಮಾರ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ದೀರ್ಘಾವಧಿಯ ಮುಖ್ಯಮಂತ್ರಿ ಆಗಿರುವ ನಿತೀಶ್‌ ಅವರು 2010ರಿಂದಲೂ ವಿಶೇಷ ಸ್ಥಾನಮಾನಕ್ಕಾಗಿ ಧ್ವನಿಯೆತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT