ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿ ಕುರಿತು ತೀರ್ಮಾನ ಆಗಿಲ್ಲ: ಸಿಎಂ ಸಿದ್ದರಾಮಯ್ಯ

ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
Published 31 ಜನವರಿ 2024, 16:56 IST
Last Updated 31 ಜನವರಿ 2024, 16:56 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿ ಮಾಡುವ ಕುರಿತು ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೀವಮಾನ ಸಾಧನೆಯ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

‘ಎಲ್ಲರ ನಂಬಿಕೆಗಳನ್ನೂ ಗೌರವಿಸುತ್ತೇವೆ. ದೇವಸ್ಥಾನಕ್ಕೆ ಹೋಗುವವರು ಅವರ ಇಷ್ಟದ ಉಡುಪು ಧರಿಸಿಯೇ ಹೋಗಬಹುದು. ಈ ವಿಚಾರದಲ್ಲೂ ರಾಜ್ಯ ಸರ್ಕಾರದ ಅಭ್ಯಂತರ ಇಲ್ಲ’ ಎಂದು ಹೇಳಿದರು.

‘ದೇವರು, ಧರ್ಮದ ಬಗ್ಗೆ ಯಾರ ನಂಬಿಕೆಯಿದ್ದರೂ ಎಲ್ಲರೂ ಮೊದಲು ಮನುಷ್ಯರಾಗಬೇಕು. ಮನುಷ್ಯ ಮನುಷ್ಯರನ್ನು ದ್ವೇಷಿಸಬಾರದು. ಇದೇ ಅತ್ಯುನ್ನತ ಮೌಲ್ಯ’ ಎಂದು ಪ್ರತಿಪಾದಿಸಿದರು.

‘ರವೀಂದ್ರ ಕಲಾ ಕ್ಷೇತ್ರ ಮತ್ತು ಸಂಸ ಬಯಲು ರಂಗಮಂದಿರ ನವೀಕರಣಕ್ಕೆ ಸರ್ಕಾರವು ₹ 24 ಕೋಟಿ ಖರ್ಚು ಮಾಡುತ್ತಿದೆ ಎಂಬುದು ಸುಳ್ಳು. ಕಲಾಕ್ಷೇತ್ರವನ್ನು ದುರಸ್ತಿ ಮಾಡುವುದು ಅಗತ್ಯ. ಕಡಿಮೆ ಖರ್ಚಿನಲ್ಲಿ ನವೀಕರಣ ಮಾಡಲು ಆಲೋಚನೆ ಮಾಡಲಾಗಿದೆ’ ಎಂದು ಹೇಳಿದರು.

‘ಪ್ರಶಸ್ತಿಗಳನ್ನು ಆಯಾ ವರ್ಷವೇ ಪ್ರದಾನ ಮಾಡಬೇಕು. ಹಿಂದಿನ ನಾಲ್ಕು ವರ್ಷ ಪ್ರಶಸ್ತಿಯನ್ನೇ ಪ್ರದಾನ ಮಾಡಿರಲಿಲ್ಲ. ಪ್ರಶಸ್ತಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿ ನಿರ್ಣಯವೇ ಅಂತಿಮ’ ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸ್ವೀಕರಿಸಿ ಸಾಹಿತಿ ಕೆ.ಮರುಳಸಿದ್ದಪ್ಪ ಮಾತನಾಡಿ, ಅಕಾಡೆಮಿ ಹಾಗೂ ಪ್ರಾಧಿಕಾರಕ್ಕೆ ಶೀಘ್ರದಲ್ಲೇ ಅಧ್ಯಕ್ಷರು ಹಾಗೂ ಸದಸ್ಯರನ್ನು ಶೀಘ್ರವೇ ನೇಮಕ ಮಾಡುವಂತೆ ಮನವಿ ಮಾಡಿದರು.

‘ಕಲಾವಿದರು ಹಾಗೂ ಸಾಹಿತಿಗಳ ಇಚ್ಛೆಗೆ ವಿರುದ್ಧವಾಗಿ ರವೀಂದ್ರ ಕಲಾಕ್ಷೇತ್ರವನ್ನು ₹24 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿಯಿದೆ. ಕಡಿಮೆ ವೆಚ್ಚದಲ್ಲಿ ಕಲಾಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿ’ ಎಂದು ಹೇಳಿದರು.

‘ಮೈತುಂಬ ಬಟ್ಟೆ ಧರಿಸಿ ದೇವಸ್ಥಾನಗಳಿಗೆ ಹೋಗಬೇಕು ಎಂಬುದು ಒಳ್ಳೆಯ ವಿಚಾರ. ಆದರೆ, ನಿರ್ದಿಷ್ಟ ಉಡುಪನ್ನೇ ಧರಿಸಿ ಬರಬೇಕು ಎಂದು ಸೂಚಿಸುವುದು ಸರಿಯಲ್ಲ. ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದ ನಡೆ’ ಎಂದು ಹೇಳಿದರು.

‘ಯಾರು ದೇಶ ಪ್ರೇಮಿ, ಯಾರು ದೇಶ ದ್ರೋಹಿ ಎಂಬುದನ್ನು ಜನರು ನಿರ್ಧರಿಸಬೇಕು. ಆದರೆ, ಆಡಳಿತದಲ್ಲಿ ಇದ್ದವರೇ ನಿರ್ಧಾರ ಮಾಡುತ್ತಿದ್ಧಾರೆ. ಸರ್ಕಾರವನ್ನು ಟೀಕಿಸಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಸವ ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿ ಆನಂದ ತೇಲ್ತುಂಬ್ಡೆ ಮಾತನಾಡಿ, ‘ಕರ್ನಾಟಕವು ನನಗೆ ಪ್ರಶಸ್ತಿ ನೀಡಿ ಗೌರವಿಸಿದ್ದು ಹೆಮ್ಮೆ ಹಾಗೂ ಸಂತೋಷ ತರಿಸಿದೆ’ ಎಂದು ಹೇಳಿದರು.

ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ‘ಹಿಂದಿನ ಸರ್ಕಾರ ನಾಲ್ಕು ವರ್ಷದ ಪ್ರಶಸ್ತಿಯನ್ನೇ ಪ್ರದಾನ ಮಾಡಿರಲಿಲ್ಲ. ಅವರು ಆಯ್ಕೆ ಮಾಡಿದ್ದ ಸಾಧಕರನ್ನೇ ಈಗ ಗೌರವಿಸಿದ್ದೇವೆ. ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ರಾಜಕಾರಣ ಬೆರೆಸಬಾರದು’ ಎಂದು ಹೇಳಿದರು.

75 ಮಂದಿಗೆ ಪ್ರಶಸ್ತಿ ಪ್ರದಾನ

2020-21ರಿಂದ 2023-24ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರ, ಶ್ರೀಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ, ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಪಂಡಿತ್ ಪಂಚಾಕ್ಷರಿ ಗವಾಯಿ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ, ಶ್ರೀನಿಜಗುಣ ಪುರಂದರ ಪ್ರಶಸ್ತಿ, ಕುಮಾರವ್ಯಾಸ ಪ್ರಶಸ್ತಿ, ಶಾಂತಲಾನಾಟ್ಯ ರಾಣಿ ಪ್ರಶಸ್ತಿ, ಸಂತ ಶಿಶುನಾಳ ಷರೀಫ ಪ್ರಶಸ್ತಿ, ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಬಿ.ವಿ.ಕಾರಂತ ಪ್ರಶಸ್ತಿ, ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ, ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ ಪುರಸ್ಕೃತರಾದ ಒಟ್ಟು 75 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT