ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹತೆ ಅರ್ಜಿ | ಸಿದ್ದರಾಮಯ್ಯ ವಿರುದ್ಧ ಪ್ರಾಥಮಿಕ ಸಾಕ್ಷ್ಯಗಳೇ ಇಲ್ಲ– ವಕೀಲರು

Published 2 ಏಪ್ರಿಲ್ 2024, 20:07 IST
Last Updated 2 ಏಪ್ರಿಲ್ 2024, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿದ್ದರಾಮಯ್ಯ ಮತದಾರರಿಗೆ ಯಾವತ್ತು ಆಮಿಷ ಒಡ್ಡಿದರು, ಎಲ್ಲಿ ಒಡ್ಡಿದರು, ಏನನ್ನು ಒಡ್ಡಿದರು ಎಂಬಂತಹ ಸಾಮಾನ್ಯ ಸಾಕ್ಷ್ಯಾಧಾರಗಳನ್ನೇ ನಮೂದಿಸದೆ ಸುಳ್ಳು ಆರೋಪ ಹೊರಿಸಿ ಅವರ ಅನರ್ಹತೆಗೆ ಕೋರಿರುವ ಈ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.

‘ವರುಣ ಕ್ಷೇತ್ರದ ಶಾಸಕರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೂ ಮುನ್ನ ಮತದಾರರಿಗೆ ಗ್ಯಾರಂಟಿ ಆಮಿಷಗಳನ್ನು ಒಡ್ಡಿ ಗೆದ್ದಿದ್ದಾರೆ’ ಎಂದು ಆರೋಪಿಸಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಮೈಸೂರಿನ ವರುಣ ಹೋಬಳಿಯ ಕೂಡನಹಳ್ಳಿ ನಿವಾಸಿ ಕೆ.ಎಂ.ಶಂಕರ್ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರಕರಣದ ಪ್ರಾಥಮಿಕ ವಿಚಾರಣೆ ಹಂತದಲ್ಲಿ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ರವಿವರ್ಮಕುಮಾರ್, ದಾವೆಯ ಪ್ರಮುಖ ಖಂಡಿಕೆಗಳನ್ನು ಸವಿಸ್ತಾರವಾಗಿ ಓದುವ ಮೂಲಕ ಅದರಲ್ಲಿನ ಅಂಶಗಳು ‘ಆಧಾರರಹಿತ ಆರೋಪಗಳಿಂದ ಕೂಡಿವೆ’ ಎಂದು ಆಕ್ಷೇಪಿಸಿದರು.

ಒಂದು ಹಂತದಲ್ಲಿ ರವಿವರ್ಮ ಕುಮಾರ್‌, ‘ದಾವೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರನ್ನು ಗೀತಾ ಶರ್ಮಾ ಎಂದು ಬರೆಯಲಾಗಿದೆ. ನೀವೂ ಒಬ್ಬ ಹೆಣ್ಣಾಗಿ ಈ ರೀತಿ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿರುವಂತಹ ಉನ್ನತ ಅಧಿಕಾರಸ್ಥ ಮಹಿಳೆಯೊಬ್ಬರ ಹೆಸರನ್ನು ತಪ್ಪಾಗಿ ಬರೆಯುವುದು ಎಷ್ಟು ಸರಿ’ ಎಂದು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಕೆರಳಿದ ಪ್ರಮೀಳಾ ನೇಸರ್ಗಿ, ‘ಮೊದಲನೆಯದಾಗಿ ತಾವು ದಾವೆಯನ್ನು ಇಷ್ಟೊಂದು ವಿಶದವಾಗಿ ನ್ಯಾಯಪೀಠದ ಮುಂದೆ ಓದುವ ಅವಶ್ಯಕತೆಯೇ ಇಲ್ಲ. ಆದಾಗ್ಯೂ, ಏನೋ ಬೆರಳಚ್ಚು ದೋಷವಾಗಿದೆ. ಶರ್ಮಾ ಎಂದಿದೆಯಲ್ಲಾ ಸಾಕು ಬಿಡಿ ಅರ್ಥವಾಗುತ್ತೆ, ನಿಮ್ಮ ವಾದ ಮುಂದುವರಿಸಿ’ ಎಂದು ಖಾರವಾಗಿ ಸಮಜಾಯಿಷಿ ನೀಡಿದರು.

ಆದರೆ, ಇದಕ್ಕೆ ಸುಮ್ಮನಾಗದ ರವಿವರ್ಮ ಕುಮಾರ್, ‘ನೀವು ದಾವೆಯಲ್ಲಿ ಹೆಸರನ್ನೇ ಸರಿಯಾಗಿ ಬರೆದಿಲ್ಲ ಎಂದರೆ ನನಗೆ ಹೇಗೆ ಗೊತ್ತಾಗಬೇಕು. ಇಡೀ ದಾವೆಯ ತುಂಬಾ ಇಂತಹುದೇ ಹತ್ತಾರು ದೋಷಗಳು, ತಪ್ಪು ತಪ್ಪಾದ ಆಧಾರರಹಿತ ಆರೋಪಗಳು ತುಂಬಿಕೊಂಡಿವೆ’ ಎಂದು ಆಕ್ಷೇಪಿಸಿದರು. ಕಲಾಪದ ದಿನದ ಸಮಯ ಮುಗಿದ ಕಾರಣ ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಲಾಯಿತು. ಸಿದ್ದರಾಮಯ್ಯ ಪರ ವಕೀಲೆ ಲೀಲಾ ಪಿ.ದೇವಾಡಿಗ ವಕಾಲತ್ತು ವಹಿಸಿದ್ದಾರೆ.

ಕೋರಿಕೆ ಏನು?: ‘ಚುನಾವಣೆಗೂ ಮುನ್ನ ಕಾಂಗ್ರೆಸ್ ‍ಪಕ್ಷವು ಮತದಾರರಿಗೆ ಗ್ಯಾರಂಟಿ ಕಾರ್ಡ್ ಯೋಜನೆಗಳ ಮೂಲಕ ಆಮಿಷ ಒಡ್ದಿದೆ. ಈ ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಅವರ ಸಮ್ಮತಿಯೊಂದಿಗೇ ಪ್ರಕಟಿಸಲಾಗಿದೆ. ಇವು ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತಹಾಕಲು ಮತದಾರರನ್ನು ಪ್ರೇರೇಪಿಸಿವೆ. ಇದು ಲಂಚಕ್ಕೆ ಸಮವಾದುದು. ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಆಮಿಷವೊಡ್ಡಿ ಪ್ರಚಾರ ಮಾಡುವುದೂ ಅಪರಾಧ. ಆದ್ದರಿಂದ, ಅಕ್ರಮಗಳನ್ನು ಎಸಗುವ ಮೂಲಕ ಶಾಸಕರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು‘ ಎಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿಯಲ್ಲಿ ಸಿದ್ದರಾಮಯ್ಯ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT