ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾದಾಯಿ | ತಜ್ಞರ ಒಪ್ಪಿಗೆ, ಪ್ರಾಧಿಕಾರ 'ಕಾಲಹರಣ': 8 ತಿಂಗಳಾದರೂ NTCA 'ಮೌನ'

Published : 19 ಸೆಪ್ಟೆಂಬರ್ 2024, 0:12 IST
Last Updated : 19 ಸೆಪ್ಟೆಂಬರ್ 2024, 0:12 IST
ಫಾಲೋ ಮಾಡಿ
Comments

ನವದೆಹಲಿ: ಮಹದಾಯಿಯ ಕಳಸಾ ನಾಲಾ ತಿರುವು ಯೋಜನೆಯನ್ನು ಅನುಷ್ಠಾನ ಮಾಡಬಹುದು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ತಜ್ಞರ ತಂಡ ಶಿಫಾರಸು ಮಾಡಿದೆ. ಆದರೆ, ವರದಿ ಪಡೆದು ಎಂಟು ತಿಂಗಳು ಕಳೆದರೂ ಪ್ರಾಧಿಕಾರವು ಯೋಜನೆ ಬಗ್ಗೆ ತನ್ನ ನಿಲುವು ಪ್ರಕಟಿಸಿಲ್ಲ. ಇದರಿಂದಾಗಿ, ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. 

ಯೋಜನೆಯ ಸಾಧಕ–ಬಾಧಕಗಳ ಪರಾಮರ್ಶೆ ನಡೆಸಿ ವರದಿ ಸಲ್ಲಿಸಲು ಪ್ರಾಧಿಕಾರವು ನಾಲ್ವರು ತಜ್ಞರ ಸಮಿತಿಯನ್ನು ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ರಚಿಸಿತು. ಈ ಸಮಿತಿಯು ಜನವರಿ ಮೊದಲ ವಾರದಲ್ಲಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಜಲಸಂಪನ್ಮೂಲ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿ ಪ್ರಾಧಿಕಾರಕ್ಕೆ ಜೂನ್‌ 23ರಂದು ಎಂಟು ಪುಟಗಳ ವರದಿ ಸಲ್ಲಿಸಿದೆ. ‘ಯೋಜನೆಗೆ ಸಂಬಂಧಿಸಿದ ದೊಡ್ಡ ಪ್ರಯೋಜನಗಳನ್ನು ಪರಿಗಣಿಸಿ (ಬೇಸಿಗೆ ಅವಧಿಯಲ್ಲಿ ವನ್ಯಜೀವಿಗಳಿಗೆ ನೀರಿನ ಲಭ್ಯತೆ ಮತ್ತು ಅಂತರ್ಜಲ ಮರುಪೂರಣ) ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್‌ 38O(1)(ಜಿ) ಅಡಿಯಲ್ಲಿ ಅನುಷ್ಠಾನಕ್ಕೆ ಶಿಫಾರಸು ಮಾಡಬಹುದು’ ಎಂದು ವರದಿಯಲ್ಲಿ ಉಲ್ಲೇಖಿಸಿದೆ. 

ವನ್ಯಜೀವಿ ಧಾಮದಿಂದ ಈ ಯೋಜನೆಗೆ ನೀರು ಹರಿಸಲಾಗುತ್ತಿದೆ ಎಂದು ಗೋವಾ ಸರ್ಕಾರವು ತಗಾದೆ ಎತ್ತಿರುವುದರಿಂದ ‘ವನ್ಯಜೀವಿ’ ಅನುಮೋದನೆ ಪಡೆಯಬೇಕಿದೆ. ಇದಕ್ಕಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಕರ್ನಾಟಕ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು.  ‘ಯೋಜನೆಯ ಅನುಷ್ಠಾನಕ್ಕೆ 26.92 ಹೆಕ್ಟೇರ್ ಅರಣ್ಯ ಬಳಸಿಕೊಳ್ಳಲಾಗುತ್ತಿದೆ. ಯೋಜನೆಗಾಗಿ ಕಾಳಿ ಹುಲಿ ಕಾರಿಡಾರ್‌ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ 7.96 ಹೆಕ್ಟೇರ್‌ ಅರಣ್ಯ ಹಾಗೂ 2.71 ಹೆಕ್ಟೇರ್ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದೂ ರಾಜ್ಯ ಸರ್ಕಾರವು ಪ್ರಸ್ತಾವದಲ್ಲಿ ತಿಳಿಸಿತ್ತು. 

‘ಮುಂದೂಡಿಕೆ‘ಯೇ ಸಭೆಯ ‘ಕಾರ್ಯತಂತ್ರ’: 

ಯೋಜನೆಗೆ ಸಂಬಂಧಿಸಿ, ವನ್ಯಜೀವಿ ಮಂಡಳಿಯು ಹುಲಿ ಸಂರಕ್ಷಣಾ ಪ್ರಾಧಿಕಾರದ ಅಭಿಪ್ರಾಯ ಕೇಳಿತ್ತು. ತಜ್ಞರ ಸಮಿತಿ ವರದಿ ಸಲ್ಲಿಸಿದ ಬಳಿಕ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮೂರು ಸಭೆಗಳು ನಡೆದಿವೆ. ಪ್ರಾಧಿಕಾರವು ಅಭಿಪ್ರಾಯ ನೀಡಿಲ್ಲ ಎಂಬ ಕಾರಣ ನೀಡಿ ಕಾರ್ಯಸೂಚಿಯನ್ನು ಮುಂದೂಡಿ ಮಂಡಳಿ ಕೈತೊಳೆದುಕೊಂಡಿದೆ. 

ಮೊದಲ ಸಭೆ: ಜನವರಿ 30ರಂದು ನಡೆದ ಮಂಡಳಿಯ ಸಭೆಯಲ್ಲಿ ಮಹದಾಯಿ ವಿಷಯ ಚರ್ಚೆಗೆ ಬಂದಿತ್ತು. ‘ಈ ವಿಷಯವು ನ್ಯಾಯಿಕ ಪ್ರಕ್ರಿಯೆಯಲ್ಲಿನ ಮಧ್ಯಪ್ರವೇಶ (ಸಬ್‌ಜುಡೀಸ್) ಆಗುತ್ತದೆ ಎಂದು ಎನ್‌ಟಿಸಿಎ ತಿಳಿಸಿದೆ. ಹೀಗಾಗಿ, ಪ್ರಾಧಿಕಾರವು ಯೋಜನೆ ಕುರಿತು ಯಾವುದೇ ಅಭಿಪ್ರಾಯ ನೀಡಿಲ್ಲ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್‌ 38ರ ಪ್ರಕಾರ, ‍ಪ್ರಾಧಿಕಾರದಿಂದ ಮತ್ತೆ ಅಭಿಪ್ರಾಯ ಪಡೆಯಲು ಮಂಡಳಿ ನಿರ್ಧರಿಸಿತ್ತು. ಕಾರ್ಯಸೂಚಿಯನ್ನು ಮುಂದಿನ ಸಭೆಗೆ ಮುಂದೂಡಲಾಗಿತ್ತು.

ಎರಡನೇ ಸಭೆ: ಫೆಬ್ರುವರಿ 22ರಂದು ನಡೆದ ಮಂಡಳಿಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿರಲಿಲ್ಲ.

ಮೂರನೇ ಸಭೆ:  ಜುಲೈ 31ರಂದು ನಡೆದ ಮಂಡಳಿಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿತ್ತು. ‘ಮಹದಾಯಿ ಯೋಜನಾ ಪ್ರದೇಶದ ವಾಸ್ತವಾಂಶದ ಅಧ್ಯಯನಕ್ಕೆ ಪ್ರಾಧಿಕಾರವು ತಜ್ಞರ ತಂಡವನ್ನು ಕಳುಹಿಸಿತ್ತು. ಈ ಸಮಿತಿಯು ಹಲವು ಶಿಫಾರಸುಗಳನ್ನು ಮಾಡಿದೆ. ಈ ಬಗ್ಗೆ ಪ್ರಾಧಿಕಾರದಿಂದ ಪ್ರತಿಕ್ರಿಯೆ ಕೇಳಲಾಗಿತ್ತು. ಸಬ್‌ಜುಡೀಸ್‌ ಆಗುತ್ತದೆ ಎಂಬ ಕಾರಣ ಮುಂದಿಟ್ಟು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ’ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿತ್ತು. ವಿಷಯವನ್ನು ಮುಂದಿನ ಸಭೆಗೆ ಮುಂದೂಡಲಾಗಿತ್ತು. ಹೀಗಾಗಿ, ಯೋಜನೆಗೆ ವನ್ಯಜೀವಿ ಅನುಮೋದನೆ ಸಿಕ್ಕಿರಲಿಲ್ಲ. 

ತಜ್ಞರ ತಂಡದಲ್ಲಿದ್ದವರು

  • ಹರಿಣಿ ವೇಣುಗೋಪಾಲ್‌, ಸಹಾಯಕ ಮಹಾನಿರ್ದೇಶಕಿ (ಅರಣ್ಯ), ಎನ್‌ಟಿಸಿಎ

  • ಡಾ.ಕೌಶಿಕ್‌ ಬ್ಯಾನರ್ಜಿ, ವಿಜ್ಞಾನಿ, ಎನ್‌ಟಿಸಿಎ ಹುಲಿ ಘಟಕ

  • ವಿಜಯಕುಮಾರ್ ಗೋಗಿ, ಕರ್ನಾಟಕ ನೀರಾವರಿ ನಿಗಮದ ಪ್ರತಿನಿಧಿ

  • ಮಂಜುನಾಥ ಚವಾಣ್‌, ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ತಜ್ಞರ ತಂಡದ ಶಿಫಾರಸುಗಳೇನು?

  • ಅರಣ್ಯ ಪ್ರದೇಶದಲ್ಲಿ ಕೊಳವೆ ಮಾರ್ಗವು ನೆಲದೊಳಗೆ ಇರಬೇಕು. ನಿರ್ಮಾಣದ ಅವಶೇಷಗಳನ್ನು ಅರಣ್ಯದ ಹೊರಗೆ ವಿಲೇವಾರಿ ಮಾಡಬೇಕು

  • ನಿರ್ಮಾಣ ಕಾರ್ಯವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಮಾಡಬೇಕು. ಕಾಡಿನೊಳಗೆ ಕಾರ್ಮಿಕರ ಶಿಬಿರ ಇರಬಾರದು. ನಿರ್ಮಾಣ ಸ್ಥಳ ಹೊರತುಪಡಿಸಿ ಅರಣ್ಯದಲ್ಲಿ ಕಾರ್ಮಿಕರ ಸುತ್ತಾಟ ಬೇಡ

  • ಕಾಡು ಪ್ರಾಣಿಗಳಿಗೆ ತೊಂದರೆಯಾಗದಂತೆ ಕೊಳವೆ ಮಾರ್ಗ, ಪ್ರಸರಣ ಮಾರ್ಗದ ಕಂದಕಗಳನ್ನು ಅಗೆಯಬೇಕು. ಕೂಡಲೇ ಮುಚ್ಚಬೇಕು

  • ಶಬ್ದ ಮಾಲಿನ್ಯ ಕಡಿಮೆ ಮಾಡಲು ಹುಲಿ ಕಾರಿಡಾರ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಫೋಟ ಹಾಗೂ ಭಾರಿ ಯಂತ್ರಗಳ ಬಳಕೆಯನ್ನು ಸಾಧ್ಯವಾದಷ್ಟು ತಪ್ಪಿಸಬೇಕು

  • ಭವಿಷ್ಯದಲ್ಲಿ ಕೊಳವೆಮಾರ್ಗಗಳ ನಿರ್ವಹಣಾ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ

  • ಪ್ರಸ್ತಾವಿತ ವನ್ಯಜೀವಿ ಸಂರಕ್ಷಣಾ ಯೋಜನೆಯ ಭಾಗವಾಗಿ ಭೀಮಗಡ ವನ್ಯಜೀವಿಧಾಮ ಹಾಗೂ ಪಕ್ಕದ ಅರಣ್ಯಗಳನ್ನು ಬಲಪಡಿಸಬೇಕು

  • ಸಂಭಾವ್ಯ ವನ್ಯಜೀವಿ ಪ್ರದೇಶಗಳನ್ನು ಭೀಮಗಡ ವನ್ಯಜೀವಿಧಾಮಕ್ಕೆ ಯಾವುದೇ ಸಮಯದಲ್ಲಿ ಸೇರಿಸಬಹುದು. ಜತೆಗೆ, ಜನವಸತಿ ಇರುವ ದೊಡ್ಡ ಪ್ರದೇಶಗಳನ್ನು ಸೇರಿಸುವ ಮೂಲಕ ಭೀಮಗಡ ವನ್ಯಜೀವಿಧಾಮದ ಗಾತ್ರ ಹೆಚ್ಚಿಸುವ ಬದಲು ಹಳ್ಳಿಗಳಲ್ಲಿ ಜನರ ಪುನರ್ವಸತಿ ಕಾರ್ಯ ಕೈಗೆತ್ತಿಕೊಂಡು ಕಾಡು ಪ್ರಾಣಿಗಳಿಗೆ ಹೆಚ್ಚು ಆವಾಸಸ್ಥಾನಗಳನ್ನು ಸೃಷ್ಟಿಸುವುದು ಉತ್ತಮ

ಸಮಿತಿಯ ಅವಲೋಕನ

  • ಕಳಸಾ, ಹಲ್ತಾರ ಹಾಗೂ ಸುರ್ಲಾ ನದಿಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ. ಹೀಗಾಗಿ, ಕಡುಬೇಸಿಗೆಯಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯಲು ನೀರು ಸಿಗುವುದಿಲ್ಲ

  • ಯೋಜನೆಯ ಅನುಷ್ಠಾನದಿಂದ 13.20 ಹೆಕ್ಟೇರ್ ಪ್ರದೇಶ ಮುಳುಗಡೆಯಾಗಲಿದೆ

  • ಸಣ್ಣ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರನ್ನು ಪ್ರತಿವರ್ಷ 5 ತಿಂಗಳ ವರೆಗೆ (ಜೂನ್‌ನಿಂದ ಅಕ್ಟೋಬರ್‌ ವರೆಗೆ) ನದಿ ತಿರುವಿಗೆ ಬಳಸಲಾಗುತ್ತದೆ. ಇದರಿಂದಾಗಿ, ಕೆಳಭಾಗದ ಪ್ರದೇಶಗಳಲ್ಲಿ ಪ್ರವಾಹ ತಡೆಗಟ್ಟಬಹುದು. ಮಹಾದಾಯಿ ನ್ಯಾಯಮಂಡಳಿ ರಾಜ್ಯಕ್ಕೆ ಹಂಚಿಕೆ ಮಾಡಿರುವಷ್ಟೇ ನೀರನ್ನು ಬಳಕೆ ಮಾಡಲಾಗುತ್ತದೆ. ಜತೆಗೆ, ಜಲಾಶಯಗಳಲ್ಲಿನ ನೀರು ಕಡು ಬೇಸಿಗೆಯಲ್ಲಿ ಕಾಡು ಪ್ರಾಣಿಗಳಿಗೆ ಲಭ್ಯ ಇರುತ್ತದೆ

  • ಕೊಳವೆ ಮಾರ್ಗ ಹಾಗೂ ಪ್ರಸರಣ ಮಾರ್ಗಗಳನ್ನು ನೆಲದಡಿ ಹಾಕುವುದರಿಂದ ಕಾಡು ಪ್ರಾಣಿಗಳಿಗೆ ಹೆಚ್ಚಿನ ತೊಂದರೆ ಆಗುವುದಿಲ್ಲ.

  • ಯೋಜನಾ ಸ್ಥಳವು ಭೀಮಗಡ ವನ್ಯಜೀವಿ ಧಾಮದಿಂದ 5.6 ಕಿ.ಮೀ. ದೂರದಲ್ಲಿದೆ. ಅಪರೂಪಕ್ಕೊಮ್ಮೆ ಹುಲಿಗಳು ಹಾಗೂ ಆನೆಗಳು ಈ ಮಾರ್ಗದಲ್ಲಿ ಸಂಚಾರ ಮಾಡುತ್ತವೆ

  • ಕಳಸಾ ನಾಲಾ ತಿರುವು ಯೋಜನೆಗೆ ಸಮಾನಾಂತರವಾಗಿ ಹಾದು ಹೋಗುವ ಹೆದ್ದಾರಿಯ ಎರಡು ಭಾಗಗಳು ಈ ಯೋಜನೆಯ ಅನುಷ್ಠಾನದಿಂದ ಮುಳುಗಡೆಯಾಗುವ ಸಾಧ್ಯತೆಯಿದೆ. ಈ ಮುಳುಗಡೆ ಪ್ರದೇಶದಲ್ಲಿ ಸಂಚಾರಕ್ಕಾಗಿ ಎರಡು ಸೇತುವೆಗಳನ್ನು ನಿರ್ಮಿಸಲು ಕರ್ನಾಟಕ ನೀರಾವರಿ ನಿಗಮ ಯೋಜಿಸಿದೆ.

  • ಅರಣ್ಯ ಇಲಾಖೆ ರೂಪಿಸಿರುವ ವನ್ಯಜೀವಿ ಸಂರಕ್ಷಣಾ ಯೋಜನೆ ಸಮಗ್ರವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT