ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದ ಭೀತಿಯಲ್ಲಿ 23 ಕುಟುಂಬ: ತಾತಿಮನೆ ಪೈಸಾರಿಗೆ ಅಧಿಕಾರಿಗಳ ದೌಡು

ಉಕ್ಕುತ್ತಿರುವ ಜಲ: ಮತ್ತೊಮ್ಮೆ ಆತಂಕ ಸೃಷ್ಟಿ
Last Updated 5 ಆಗಸ್ಟ್ 2021, 11:46 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೇರಿಯ ತಾತಿಮನೆ ಪೈಸಾರಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ, ನಿವಾಸಿಗಳಿಗೆ ಸಂಭವನೀಯ ಅನಾಹುತ ಕುರಿತು ಮನವರಿಕೆ ಮಾಡಿಕೊಟ್ಟರು.

ಜುಲೈ 28ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ‘ಅಪಾಯದ ಭೀತಿಯಲ್ಲಿ 23 ಕುಟುಂಬಗಳು’ ಶೀರ್ಷಿಕೆ ಅಡಿ ಗ್ರಾಮದ ಸ್ಥಿತಿಗತಿ ಕುರಿತು ವಿಶೇಷ ವರದಿ ಪ್ರಕಟವಾಗಿತ್ತು. ವರದಿ ಪ್ರಕಟವಾದ ಬೆನ್ನಲೇ ಸುಂಟಿಕೊಪ್ಪದ ನಾಡು ಕಚೇರಿಯ ಉಪ ತಹಶೀಲ್ದಾರ್‌ ರೋಹಿತ್, ಕಂದಾಯ ಪರಿವೀಕ್ಷಕ ಶಿವಪ್ಪ, ಗ್ರಾಮ ಲೆಕ್ಕಿಗರಾದ ನಾಗೇಂದ್ರ, ಡಾಪ್ನ ಅವರು ಅಪಾಯದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೆದಕಲ್ ಗ್ರಾ.ಪಂ ಸೂಚಿಸಿದ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ.

ಇಂಗುಗುಂಡಿಯಲ್ಲಿ ಉಕ್ಕುತ್ತಿರುವ ಜಲ:ಈ ಭಾಗದ ಮನೆಗಳಿಗೆ ಕೆದಕಲ್ ಗ್ರಾಮ ಪಂಚಾಯಿತಿ, ಒತ್ತಾಯ ಪೂರ್ವಕವಾಗಿ ಮನೆಯ ನೀರು ಇಂಗಲೆಂದು ನಿರ್ಮಿಸಿದ ಇಂಗುಗುಂಡಿ ಇದೀಗ ಮೃತ್ಯುಗುಂಡಿಯಾಗಿ ಪರಿಣಮಿಸಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ನೀರು ಇಂಗಿಸುವ ಬದಲಾಗಿ ಇದು ಅಂತರ್ಜಲವನ್ನು ಸೃಷ್ಟಿ ಮಾಡುತ್ತಿದೆ. ಇದರಿಂದ ಮನೆಯ ಸುತ್ತಮುತ್ತ ನೀರಿನಿಂದ ಆವೃತವಾಗಿದೆ. ಆ ಸ್ಥಳದಲ್ಲಿ ಕಾಲಿಟ್ಟರೆ ಕಾಲು ಒಳಭಾಗಕ್ಕೆ ಹೋಗುತ್ತಿರುವುದರಿಂದ ಭಯದ ವಾತಾವರಣವೇ ಉಂಟಾಗಿದೆ. ಈ ಭಾಗದ ಸುತ್ತಮುತ್ತ ಬರೆ (ಗುಡ್ಡ) ಕೂಡ ಕುಸಿಯುತ್ತಿರುವುದು ಇನ್ನಷ್ಟು ಆತಂಕ ಮೂಡಿಸಿದೆ.

ಹಾಲೇರಿ ಗ್ರಾಮದ ಬಿ.ಕೆ.ಭಾಸ್ಕರ್‌ ರೈ ಅವರ ಮನೆ ಅಂಗಳದ ಬರೆ ಮಳೆಗೆ ಜರಿದು ಬಿದ್ದ ಪರಿಣಾಮ ಮನೆ ಮತ್ತು ಕಾರಿನ ಶೆಡ್ಡು ಅಪಾಯದ ಸ್ಥಿತಿಯಲ್ಲಿದೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ತಡೆಗೋಡೆ ನಿರ್ಮಿಸದಿದ್ದಲ್ಲಿ ಮನೆಯು ಜರಿದು ಬೀಳುವ ಸಂಭವವಿದ್ದು ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಿರಾಶ್ರಿತರ ಮನೆಗಳನ್ನು ತಾತಿಮನೆ ಪೈಸಾರಿಯ 23 ಕುಟುಂಬಗಳಿಗೆ ನೀಡಿದರೆ ಮುಂದಾಗುವ ಅನಾಹುತ ತಪ್ಪಿಸಬಹುದು ಎಂದು ಸ್ಥಳೀಯರು ಹೇಳಿದರು.

ಅಪಾಯ ಸ್ಥಿತಿಯಲ್ಲಿದ್ದ ಸ್ಥಳಗಳಿಗೆ ಕಂದಾಯ ಇಲಾಖೆಯಿಂದ ಭೇಟಿ ನೀಡಲಾಗಿದೆ. ಎಲ್ಲವೂ ಅಪಾಯದ ಸ್ಥಿತಿಯಲ್ಲಿವೆ. ಅಪಾಯದಲ್ಲಿ ಇರುವವರು ಕಚೇರಿಗೆ ಬಂದು ಮನವಿ ಸಲ್ಲಿಸಿದರೆ ಸರ್ಕಾರಕ್ಕೆ ಕಳುಹಿಸಿ ಪರಿಹಾರ ನೀಡಲಾಗುವುದು ಎಂದು ಸುಂಟಿಕೊಪ್ಪ ನಾಡುಕಚೇರಿ ಕಂದಾಯ ಪರಿವೀಕ್ಷಕ ಶಿವಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT