ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಶ್ವರಶ್ರೀ ವಿರುದ್ಧ ಇನ್ನೊಂದು ಆರೋಪ ಪಟ್ಟಿ

Last Updated 24 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ತಮ್ಮ ಮಠದ ಶಾಲೆಯಲ್ಲಿ ಓದುತ್ತಿದ್ದ 15ರ ಬಾಲಕಿ ಪ್ರತಿಭಟಿಸಿದರೂ ಲೆಕ್ಕಿಸದೆ ಆಕೆಯ ಕೈ–ಬಾಯಿ ಮುಚ್ಚಿ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅತ್ಯಾಚಾರ ಮಾಡಿದ್ದಾರೆ...’

ಸ್ವಾಮೀಜಿ ವಿರುದ್ಧ ಮಾಡಲಾಗಿರುವ ಅತ್ಯಾಚಾರದ ಎರಡನೇ ಆರೋಪದ ಬಗ್ಗೆ ತನಿಖೆ ನಡೆಸಿರುವ ಸಿಐಡಿ, ತನ್ನ ಅಂತಿಮ ವರದಿಯಲ್ಲಿ ಹೀಗೆ ಉಲ್ಲೇಖಿಸಿದೆ. ಈ ಕುರಿತು ನಗರದ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ನ್ಯಾಯಾಲಯಕ್ಕೆ (ಎಸಿಎಂಎಂ) ಇದೇ 7ರಂದು ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ಈ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘2006ರಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಸ್ವಾಮೀಜಿ ನೊಂದ ಬಾಲಕಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡಿರುವುದು ತನಿಖೆ ವೇಳೆ ದೃಢಪಟ್ಟಿದೆ. ಆದ್ದರಿಂದ ಸ್ವಾಮೀಜಿ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 323, 376, 498 (ಎ), 109 ಹಾಗೂ 376 (2) ಎಫ್‌, ಐ ಮತ್ತು ಎನ್‌ ಅನ್ವಯ ಈ ದೋಷಾರೋಪಣ ಪಟ್ಟಿ ಸಲ್ಲಿಸಲಾಗುತ್ತಿದೆ’ ಎಂದು ವಿವರಿಸಲಾಗಿದೆ.

‘2006ರ ಸಾಲಿನ ಚಾತುರ್ಮಾಸ್ಯದ ಸಂದರ್ಭದಲ್ಲಿ ಸ್ವಾಮೀಜಿ ಹೊಸನಗರದ ಮಠದಲ್ಲಿ ಬಾಲಕಿಯ ಮುಗ್ಧತೆಯನ್ನು ಬಳಸಿಕೊಂಡು ಮಠದ ಏಕಾಂತದ ಕೊಠಡಿಯಲ್ಲಿ ಬಲಾತ್ಕಾರ ನಡೆಸಿದ್ದಾರೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಗುರುಶಾಪ ತಟ್ಟುತ್ತದೆ ಎಂದೂ ಆಕೆಗೆ ಬೆದರಿಸಿದ್ದಾರೆ’ ಎಂದು ವಿವರಿಸಲಾಗಿದೆ.

ದೋಷಾರೋಪಣೆ ಏನು: ಈ ಬಾಲಕಿಯನ್ನು ಸ್ವಾಮೀಜಿ 2009ರಲ್ಲಿ ತಮ್ಮ ಶಿಷ್ಯನೊಬ್ಬನಿಗೆ ಮದುವೆ ಮಾಡಿಸಿದ್ದಾರೆ. ಮದುವೆ ನಂತರ ದಂಪತಿ ನಡುವೆ ಮನಸ್ತಾಪ ಉಂಟಾದ ಕಾರಣ ಸಂತ್ರಸ್ತೆಯು ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ವಿಷಯ 2012ರಲ್ಲಿ ಸ್ವಾಮೀಜಿಗೆ ಗೊತ್ತಾಗಿತ್ತು.

ವಿಷಯ ಗೊತ್ತಾದ ಮೇಲೆ ಇಬ್ಬರನ್ನೂ ಗಿರಿನಗರದ ತಮ್ಮ ಮಠಕ್ಕೆ ಕರೆಯಿಸಿಕೊಂಡ ಸ್ವಾಮೀಜಿ ಏಕಾಂತ ಕೋಣೆಯಲ್ಲಿ ಕೂರಿಸಿಕೊಂಡು, ಪತಿಯೊಂದಿಗೆ ಸಂಸಾರ ತೂಗಿಸಿಕೊಂಡು ಹೋಗುವಂತೆ ಸಂತ್ರಸ್ತೆಗೆ ಬುದ್ಧಿವಾದ ಹೇಳಿದರು. ಆಗ ಸಂತ್ರಸ್ತೆ, ಸಂಸಾರ ನಡೆಸಲು ಸಾಧ್ಯವಿಲ್ಲ. ನನಗೆ ವಿಚ್ಛೇದನ ಬೇಕು ಎಂದು ಹೇಳಿದಾಗ ಸ್ವಾಮೀಜಿ ವ್ಯಗ್ರಗೊಂಡಿದ್ದರು.

ಆ ಕ್ಷಣದಲ್ಲೇ ಆಕೆಯ ಬಾಯಿಯನ್ನು ಮುಚ್ಚಿ ಜೋರಾಗಿ ಒದ್ದು ಕೆಳಕ್ಕೆ ತಳ್ಳಿ, ಕಾಲಿನಿಂದು ತುಳಿದು ಹಟ ಸಂಭೋಗ ಮಾಡಿದ್ದರು.

ಸಂತ್ರಸ್ತೆಯ ಪತಿ ಸ್ವಾಮೀಜಿಯ ಪರಿವಾರದ ಸದಸ್ಯ. ಅವರ ಶಿಷ್ಯನೂ ಹೌದು. ಈತ ಸಂತ್ರಸ್ತೆಯನ್ನು ಮದುವೆಯಾದ ನಂತರ ಮಠಕ್ಕೆ ಹೋಗಿ ಹಣ ಪಡೆದುಕೊಂಡು ಬಾ ಎಂದು ಆಕೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ಸ್ವಾಮೀಜಿ ಏನು ಮಾಡಿದರೂ ನೀನು ಅದಕ್ಕೆ ಸಹಕರಿಸು ಎಂದು ಬಲವಂತ ಮಾಡಿ ತೊಂದರೆ ಕೊಟ್ಟಿದ್ದಾನೆ.

ಶಿಕ್ಷೆ ಏನು?: ವಿವಿಧ ಕಲಂಗಳ ಅಡಿಯಲ್ಲಿ ಆರೋಪಿಗಳಿಗೆ ಏಳು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಜೀವಾವಧಿವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಪ್ರಕರಣದಲ್ಲಿ ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಬೆಂಗಳೂರಿನ ಒಟ್ಟು 45 ಜನರ ಸಾಕ್ಷ್ಯ ಸಂಗ್ರಹಿಸಲಾಗಿದೆ.

ಪ್ರಕರಣದಲ್ಲಿ ಇಬ್ಬರು ಆರೋಪಿಗಳು
ಸಂತ್ರಸ್ತೆಯು ಗಿರಿನಗರ ಪೊಲೀಸ್‌ ಠಾಣೆಯಲ್ಲಿ 2016ರ ಆಗಸ್ಟ್‌ 29ರಂದು ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಮಂಜುನಾಥ ಹೆಬ್ಬಾರ್‌ ಎಂಬುವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.

ಆರೋಪ ಸಾಬೀತಾಗದ ಕಾರಣ ವಕೀಲರೂ ಆದ ಎಂ.ಅರುಣ ಶ್ಯಾಮ್, ಅನಂತ ಭಟ್‌, ಕೆ.ವಿ.ರಮೇಶ್‌, ಬಿ.ಆರ್‌.ಸುಬ್ರಹ್ಮಣ್ಯ ಅಲಿಯಾಸ್‌ ಸುಧಾಕರ, ಮಧುಕರ ಶಿವಯ್ಯ ಹೆಬ್ಬಾರ್, ಸಿ.ಜಗದೀಶ ಅಲಿಯಾಸ್‌ ಜಗದೀಶ ಶರ್ಮ ಅವರನ್ನು ದೋಷಾರೋಪಣ ಪಟ್ಟಿಯಿಂದ ಕೈಬಿಡಲಾಗಿದೆ.

*
ಈ ಆರೋಪದಲ್ಲಿ ಹುರುಳಿಲ್ಲ. ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ಅಪಾರ ನಂಬಿಕೆ ಇದೆ. ಶ್ರೀಗಳು ನಿರಪರಾಧಿಯಾಗಿ ಹೊರಬರುತ್ತಾರೆ ಎಂಬ ಅಚಲ ವಿಶ್ವಾಸವಿದೆ.
-ಸಂದೇಶ ತಲಕಾಲಕೊಪ್ಪ, ಶ್ರೀಗಳ ಮಾಧ್ಯಮ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT