ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟ ಮುಂದುವರಿಯಲಿದೆ: ಕಿಮ್ಮನೆ ರತ್ನಾಕರ್

ಶಿಕ್ಷಣ ಸಚಿವರ ವರದಿ ಒಪ್ಪುವುದಿಲ್ಲ: ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ
Last Updated 4 ಜೂನ್ 2022, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲದ ಕುರಿತಂತೆ ಸರ್ಕಾರದ ಕ್ರಮ ಸ್ವೀಕಾರಾರ್ಹವಲ್ಲ. ಹೀಗಾಗಿ, ಈ ವಿಚಾರದಲ್ಲಿ ಹೋರಾಟ ಮುಂದುವರಿಯಲಿದೆ’ ಎಂದು ಕಾಂಗ್ರೆಸ್‌ ಮುಖಂಡ ಕಿಮ್ಮನೆ ರತ್ನಾಕರ್ ಹೇಳಿದರು.

ಪಕ್ಷದ ಶಾಸಕ ಪ್ರಿಯಾಂಕ್ ಖರ್ಗೆ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿಗೆ ಶಿಕ್ಷಣ ಸಚಿವರು ಕೊಟ್ಟಿರುವ ವರದಿಯನ್ನು ನಾವು ಒಪ್ಪುವುದಿಲ್ಲ. ಹಳೆಯ ಪಠ್ಯ ಮುಂದುವರಿಸಿ, ಪರಿಷ್ಕರಣೆಗೆ ಹೊಸ ಸಮಿತಿ ರಚಿಸಬೇಕು’ ಎಂದು ಆಗ್ರಹಿಸಿದರು.

‘1 ರಿಂದ 10ನೇ ತರಗತಿ
ವರೆಗಿನ ಪಠ್ಯ ಪುಸ್ತಕವನ್ನುಕೇವಲ ಎರಡು ತಿಂಗಳಲ್ಲಿ ಪರಿಷ್ಕರಿಸಲು ಸಾಧ್ಯವೇ. ಇವರಿಗೆ ಬೇಕಾದವರನ್ನು ನೇಮಿಸಿ, ಇವರಿಗೆ ಪೂರಕವಾಗಿರುವ ಸಾಹಿತಿಗಳ ಬರಹ ಸೇರಿಸಿಕೊಂಡು, ಪ್ರಮುಖರ ಲೇಖನಗಳು, ಮಹಾನ್ ವ್ಯಕ್ತಿಗಳ ಇತಿಹಾಸವನ್ನು ಕೈಬಿಡುವುದು ಸಮಂಜಸವೇ’ ಎಂದು ಪ್ರಶ್ನಿಸಿದರು.

‘ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅರ್ಹತೆ ಏನು? ಯಾರೊಂದಿಗೆ ಚರ್ಚಿಸಿ ಬದಲಾವಣೆ ತಂದಿದ್ದಾರೆ ಎಂದು ಹೇಳಲಿ. ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿ, ಲೋಹಿಯಾ, ಪೆರಿಯಾರ್, ನಾರಾಯಣ ಗುರು ಪ್ರಯತ್ನಿಸಿದ್ದರು. ಬಿಜೆಪಿ ಪರಿವಾರದವರು ಏನು ಮಾಡಿದ್ದಾರೆ? ಸಮಿತಿಯನ್ನು ವಜಾ ಮಾಡುವುದಷ್ಟೇ ಅಲ್ಲ, ಈ ಹಿಂದೆ ಇದ್ದ ಪಠ್ಯ ಜಾರಿಗೆ ತರಬೇಕು’ ಎಂದರು.

ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಸಮಿತಿಯಲ್ಲಿ ಒಬ್ಬ ವಿಜ್ಞಾನಿ, ಶಿಕ್ಷಣ ತಜ್ಞ ಇದ್ದಾರಾ? ನಾವು ಪರಿಷ್ಕರಣೆ ವಿರುದ್ಧವಾಗಿಲ್ಲ. ಬದಲಾವಣೆ ಅಗತ್ಯ. ಆದರೆ, ವೈಜ್ಞಾನಿಕ ಮನೋಭಾವ ಕೊಲ್ಲಲು, ಸಂವಿಧಾನದ ಆಶಯ, ಸಾಮಾಜಿಕ ನ್ಯಾಯ, ಸಮಾನತೆ ಮರೆಮಾಚುತ್ತಿರುವುದನ್ನು ನಾವು ವಿರೋಧಿಸುತ್ತೇವೆ’ ಎಂದರು.

‘ನಾಡಗೀತೆ ತಿರುಚಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಯಾಕೆ? ಆತ ಅಷ್ಟೊಂದು ಪ್ರಭಾವಿ ವ್ಯಕ್ತಿಯೇ? ಕುವೆಂಪು, ಬುದ್ಧ, ನಾರಾಯಣ ಗುರು, ಅಂಬೇಡ್ಕರ್‌ಗೆ ಅಪಮಾನ ಮಾಡಿದವನ ಮುಂದೆ ಮಂಡಿಯೂರುತ್ತಿರುವುದೇಕೆ’ ಎಂದು ಪ್ರಶ್ನಿಸಿದ ಅವರು, ‘ಪಠ್ಯ ಪುಸ್ತಕ ಸಮಿತಿ ವಿಸರ್ಜನೆಯ ಜೊತೆಗೆ ಈ ಸಮಿತಿ ನಡೆಸಿದ ಎಲ್ಲ ಪ್ರಕ್ರಿಯೆ
ಗಳನ್ನೂ ವಿಸರ್ಜಿಸಬೇಕು’ ಎಂದು ಆಗ್ರಹಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT