ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ಉಷ್ಣಾಂಶಕ್ಕೆ ಬೆದರಿದ ಕಾಡು ಸಸ್ಯಗಳು

ಮರಗಳ ‘ಉಷ್ಣ ಸಹಿಷ್ಣುತೆ’ ಅಧ್ಯಯನದ ಮಾಹಿತಿ
Published 22 ಮೇ 2023, 23:52 IST
Last Updated 22 ಮೇ 2023, 23:52 IST
ಅಕ್ಷರ ಗಾತ್ರ

ಶಿರಸಿ: ವಾತಾವರಣದಲ್ಲಿ ಹೆಚ್ಚಿದ ಉಷ್ಣಾಂಶದಿಂದ ಕೃಷಿ ಸಂಬಂಧಿ ಸಸ್ಯಗಳ
ಜೊತೆಗೆ ನಿತ್ಯಹರಿದ್ವರ್ಣ ಕಾಡಿನ ಕೆಲ ಸಸ್ಯಗಳು ಬದುಕಲು ಏದುಸಿರು ಬಿಡುತ್ತಿ
ರುವ ಆತಂಕಕಾರಿ ಮಾಹಿತಿ ಪಶ್ಚಿಮಘಟ್ಟದ ಕಾಡೊಳಗೆ ನಡೆಯುತ್ತಿರುವ ಸಂಶೋಧನೆಯಿಂದ ತಿಳಿದುಬಂದಿದೆ. 

ಇಲ್ಲಿನ ನಿಸರ್ಗ ವಿಜ್ಞಾನಿ ಬಾಲಚಂದ್ರ ಸಾಯಿಮನೆ ಅವರು ಕೆಲ ವರ್ಷಗಳಿಂದ ಪಶ್ಚಿಮಘಟ್ಟ ಕಾಡಿನ ಸಾಲಿನಲ್ಲಿರುವ ಗುಡ್ಡೇಕೋಟೆಯ ಪ್ರಯೋಗಾಲಯದಲ್ಲಿ ಬೆಂಗಳೂರಿನ ಎನ್‌ಸಿಬಿಎಸ್ ಸಂಸ್ಥೆಯ ಪರವಾಗಿ ಕಾಡುಗಳ ಅಧ್ಯಯನ ಕೈಗೊಂಡಿದ್ದಾರೆ. ಅದರ ಜೊತೆಗೆ ತಾಪಮಾನದ ಏರಿಳಿತಗಳಿಗೆ ಮರಗಳ
ಸ್ಪಂದನೆಯ ‘ಥರ್ಮಲ್ ಟಾಲರೆನ್ಸ್’ (ಉಷ್ಣ ಸಹಿಷ್ಣುತೆ) ಕುರಿತೂ ಸಂಶೋಧನೆ ನಡೆಸಿದ್ದಾರೆ. ಈ ಸಂಶೋಧನೆಯಲ್ಲಿ ಈ ಅಂಶವು ಬೆಳಕಿಗೆ ಬಂದಿದೆ.

ಪ್ರಸಕ್ತ ಸಾಲಿನಲ್ಲಿ ದಾಖಲಾದ ಅತಿಯಾದ ಉಷ್ಣಾಂಶದಿಂದ ನಿತ್ಯಹರಿದ್ವರ್ಣ ಕಾಡಿನ ಕೆಲ ಸಸ್ಯ ಪ್ರಬೇಧಗಳಿಗೆ ಧಕ್ಕೆಯಾಗಿದೆ. ದಟ್ಟ ಅರಣ್ಯದ 10 ಎಕರೆ ವಿಸ್ತೀರ್ಣದಲ್ಲಿ ಪ್ರಯೋಗಕ್ಕೆ ಒಳಪಟ್ಟ 40 ಜಾತಿಯ ಸಸ್ಯಗಳಲ್ಲಿ 15 ಬಗೆಯ ಸಸ್ಯಗಳಿಗೆ ಅತಿ ಉಷ್ಣಾಂಶವನ್ನು ತಡೆದು ಕೊಳ್ಳಲು ಸಾಧ್ಯವಾಗಿಲ್ಲ ಎಂಬುದನ್ನು ಕಂಡುಕೊಳ್ಳಲಾಗಿದೆ.

ಬೃಹತ್ ಗಾತ್ರದಲ್ಲಿ ಬೆಳೆಯುವ ತಳಿಗಳಾದ ಸುರಗಿ, ಉಪ್ಪಗೆ, ಮುರುಗಲಿನಂಥ ಮರಗಳು ನಿರಂತರ ತಾಪಮಾನದಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ನಿಲ್ಲಿಸಿದ್ದ ಬಗ್ಗೆ ಅವರು ದಾಖಲಾತಿ ಮಾಡಿದ್ದಾರೆ. ಅಪ್ಪೆಮಿಡಿ ಮಾವಿನ ತಳಿಯ ಸಸ್ಯಗಳು ಎಲೆ ಒಣಗಿಸಿಕೊಳ್ಳುತ್ತಿರುವ ಬಗೆಯನ್ನು ದಾಖಲಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಈವರೆಗೆ ಸುಮಾರು 20 ದಿನಗಳು 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ವರ್ಷದುದ್ದಕ್ಕೂ ನಡೆದ ಸಂಶೋಧನೆಯ ಜೊತೆ ಅತಿಯಾದ ಉಷ್ಣಾಂಶದ ದಿನಗಳಲ್ಲಿ ಎಲೆಗಳ ಬಣ್ಣ, ವಿಸ್ತೀರ್ಣದ ಬದಲಾವಣೆ, ಪರಾಗ ಮತ್ತು ಭಾಷ್ಪ ವಿಸರ್ಜನೆ ಪ್ರಮಾಣಗಳ ಏರಿಳಿತ, ಉಷ್ಣಾಂಶಕ್ಕೆ ಮರಗಳ ಪ್ರತಿಕ್ರಿಯೆ ಏನು? ಅವುಗಳಲ್ಲಿ ಬಾಹ್ಯ ಮತ್ತು ಆಂತರಿಕ ಬದಲಾವಣೆಗಳೇನು? ಎಂಬಿತ್ಯಾದಿ ಅಂಶಗಳನ್ನು ಥರ್ಮಾಮೀಟರ್, ಥರ್ಮಲ್ ಕ್ಯಾಮೆರಾ, ಮಣ್ಣಿನ ತೇವಾಂಶ ಅಳೆಯುವ ಉಪಕರಣ ಹಾಗೂ ಇನ್ನಿತರ 5ಕ್ಕೂ ಹೆಚ್ಚು ಆಧುನಿಕ ಗ್ಯಾಜೆಟ್ ಮೂಲಕ ಅಳೆದು ಈ ಮಾಹಿತಿ ದಾಖಲಿಸಲಾಗಿದೆ.

‘ಅತಿ ಉಷ್ಣಾಂಶದಿಂದ ನಿತ್ಯಹರಿದ್ವರ್ಣದ ಕಾಡಿನ ಸಸ್ಯ ವೈವಿಧ್ಯ ಬದಲಾಗುವ ಸಾಧ್ಯತೆಯಿದೆ. ಇದರ ಜೊತೆ ಕೃಷಿ ಸಂಬಂಧಿತ ಏಲಕ್ಕಿ, ಕಾಫಿ, ವೆನಿಲ್ಲಾ, ಜಾಯಿಕಾಯಿ, ಮುರುಗಲ, ಕಾಳುಮೆಣಸು ಸೇರಿದಂತೆ 15 ಜಾತಿಯ ಸಸ್ಯ ಪ್ರಬೇಧಗಳು ಅತಿಯಾದ ಉಷ್ಣಾಂಶದಿಂದ ಬಳಲುತ್ತಿವೆ. ಇದೇ ಧಗೆ ಮುಂದುವರಿದರೆ ಆ ಪ್ರಬೇಧಗಳು ಬದುಕಿಗಾಗಿ ಹೋರಾಡಬೇಕಾಗುತ್ತದೆ. ಹವಾಮಾನ ಬದಲಾವಣೆಗೆ ತಕ್ಕಂತೆ ಕೃಷಿಯಲ್ಲೂ ಬದಲಾವಣೆ ಆಗಬೇಕಿದೆ’ ಎಂದರು.

ಎಲೆ ಉದುರದ ಕೆಲವು ಜಾತಿಯ ತಳಿಗಳು ಸಂಕಷ್ಟಕ್ಕೆ ಒಳಗಾಗಿರುವುದು ಕಂಡು ಬಂದಿದೆ. ಇವುಗಳ ಮುಂದಿನ ಹಂತದ ಪ್ರಯೋಗವೂ ನಡೆದಿದೆ

-ಬಾಲಚಂದ್ರ ಸಾಯಿಮನೆ, ನಿಸರ್ಗ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT