ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ‍ಂಚಮಸಾಲಿ ಹೋರಾಟ| 2ಎ ಮೀಸಲಾತಿ ಬಗ್ಗೆ ಕಾನೂನು ಚೌಕಟ್ಟಿನಲ್ಲಿ ಕ್ರಮ: ಸಿಎಂ ಭರವಸೆ

Last Updated 26 ಸೆಪ್ಟೆಂಬರ್ 2021, 16:52 IST
ಅಕ್ಷರ ಗಾತ್ರ

ಗದಗ: ‘2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ಹೋರಾಟ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಏನು ಮಾಡಬಹುದು ಎಂಬುದನ್ನು ನಿರ್ಧರಿಸಲಿದೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಗದುಗಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಸರ್ಕಾರ ಈವರೆಗೆ ತೆಗೆದುಕೊಂಡಿರುವ ಕ್ರಮ ಹಾಗೂ ಮುಂದೆ ತೆಗೆದುಕೊಳ್ಳಲಿರುವ ಕ್ರಮಗಳ ವಿಚಾರವಾಗಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಜತೆಗೆ ಮಾತನಾಡಿ ಅವರಲ್ಲಿ ವಿಶ್ವಾಸ ಮೂಡಿಸಲಾಗಿದೆ. ಹಾಗಾಗಿ, ಅ. 1ರಂದು ಸತ್ಯಾಗ್ರಹ ನಡೆಸುವ ನಿರ್ಧಾರ ಕೈಬಿಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಸತ್ಯಾಗ್ರಹ ನಡೆಸದಂತೆ ಮನವಿ– ಚರ್ಚಿಸಿ ತೀರ್ಮಾನ–ಸ್ವಾಮೀಜಿ: ಇದಕ್ಕೂ ಮುನ್ನ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ನಡೆದ ಪಂಚಮಸಾಲಿ 2ಎ ಮೀಸಲಾತಿ ಹಕ್ಕೊತ್ತಾಯಿಸಿ ಪ್ರತಿಜ್ಞಾ ಪಂಚಾಯತ್ ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವ ವಿಷಯದಲ್ಲಿ ಸರ್ಕಾರ ಮತ್ತು ಸಮಾಜದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತೇನೆ. ಯಾವುದೇ ಕಾರಣಕ್ಕೂ ಸತ್ಯಾಗ್ರಹಕ್ಕೆ ಮುಂದಾಗಬಾರದು’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಮನವಿ ಮಾಡಿದರು.

‘ಮೀಸಲಾತಿ ಕುರಿತು ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಅನೇಕ ಸಲ ಚರ್ಚೆ ನಡೆಸಲಾಗಿದ್ದು, ಅವರಿಗೂ ಈ ಎಲ್ಲ ವಿಷಯಗಳ ಸಂಪೂರ್ಣ ಅರಿವಿದೆ. ಅನ್ಯ ಜಾತಿಯವರಿಗೆ ಅನ್ಯಾಯವಾಗದಂತೆ ಸಮಾಜಕ್ಕೆ ನ್ಯಾಯ ಕೊಡಿಸುವ ಕಾರ್ಯ ಮಾಡುತ್ತೇನೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ‘ಸರ್ಕಾರ ಕೇಳಿದ್ದ ಆರು ತಿಂಗಳ ಗಡುವು ಸೆ.15ಕ್ಕೆ ಪೂರ್ಣಗೊಂಡಿದ್ದು, ಅಕ್ಟೋಬರ್ 1ರಿಂದ ಮತ್ತೆ ಸತ್ಯಾಗ್ರಹ ನಡೆಸಲು ಚಿಂತಿಸಲಾಗಿದೆ. ಆದರೆ, ಸತ್ಯಾಗ್ರಹ ಮಾಡಬಾರದು ಎಂದು ಸರ್ಕಾರದ ಭಾಗವಾಗಿರುವ ಸಮಾಜದ ಮುಖಂಡ ಸಿ.ಸಿ.ಪಾಟೀಲ ಮನವಿ ಮಾಡಿಕೊಂಡಿದ್ದರಿಂದ ಈ ಕುರಿತು ಹಿರಿಯರೊಂದಿಗೆ
ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT