ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಮೀಸಲು: ಅರ್ಜಿದಾರರಿಗೆ ಮಧ್ಯಂತರ ವರದಿ ನೀಡಿ: ಹೈಕೋರ್ಟ್‌

Published 29 ಮೇ 2023, 14:41 IST
Last Updated 29 ಮೇ 2023, 14:41 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಅರ್ಜಿದಾರರಿಗೆ ಒದಗಿಸುವಂತೆ ಹೈಕೋರ್ಟ್‌, ಕೋರ್ಟ್‌ ಅಧಿಕಾರಿಗೆ ನಿರ್ದೇಶಿಸಿದೆ.

ಈ ಸಂಬಂಧ ಬೆಂಗಳೂರಿನ ಜ್ಞಾನಭಾರತಿಯ ಮೃತ್ಯುಂಜಯ ನಗರದ ನಿವಾಸಿ ಡಿ.ಜಿ ರಾಘವೇಂದ್ರ ಬಿನ್ ಸೂರ್ಯ ದೇವಾಡಿಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ರವಿವರ್ಮ ಕುಮಾರ್‌, ’ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗಷ್ಟೇ ಹೇಳಿದೆ. ಆದ್ದರಿಂದ, ಈ ಹಿಂದೆ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿರುವ ವರದಿಯನ್ನು ನೀಡಲು ನಿರ್ದೇಶಿಸಬೇಕು‘ ಎಂದು ಕೋರಿದರು. ಈ ಕೋರಿಕೆಯನ್ನು ನ್ಯಾಯಪೀಠ ಪುರಸ್ಕರಿಸಿತು.

ಅಂತೆಯೇ, ‘ಮುಸ್ಲಿಂ ಮೀಸಲಾತಿ ರದ್ದುಪಡಿಸಿರುವ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಲಾದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಇದ್ದು ಈ ಅರ್ಜಿ ಜುಲೈ 25ರಂದು ವಿಚಾರಣೆಗೆ ಬರಲಿದೆ ಎಂಬ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಬೆಳವಣಿಗೆ ಆಧರಿಸಿ ಹೈಕೋರ್ಟ್‌ನಲ್ಲಿರುವ ಈ ಅರ್ಜಿ ವಿಚಾರಣೆಗೆ ಮನವಿ ಸಲ್ಲಿಸಲು ಉಭಯ ಪಕ್ಷಕಾರರಿಗೆ ಸ್ವಾತಂತ್ರ್ಯ ಕಲ್ಪಿಸಲಾಗಿದೆ‘ ಎಂದು ತಿಳಿಸಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಎಚ್‌.ವಿ.ಮಂಜುನಾಥ್‌ ವಕಾಲತ್ತು ವಹಿಸಿದ್ದಾರೆ.

ಕೋರಿಕೆಯೇನು?:

 ‘ಈ ಅರ್ಜಿ ಇತ್ಯರ್ಥವಾಗುವತನಕ ಸರ್ಕಾರ 2022ರ ಡಿಸೆಂಬರ್‌ನಲ್ಲಿ ಕೈಗೊಂಡಿರುವ ಮುಂದಿನ ಎಲ್ಲ ಪ್ರಕ್ರಿಯೆಗಳಿಗೂ ತಡೆ ನೀಡಬೇಕು. ಉಪಜಾತಿಗಳು, ಸಮುದಾಯಗಳು ಅಥವಾ ಬುಡಕಟ್ಟು ಸಮುದಾಯದವರು ತಮ್ಮ ಕೋಟಾ ಅಥವಾ ಸ್ಥಿತಿಯನ್ನು ಬದಲಾಯಿಸದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು‘ ಎಂದು ಮಧ್ಯಂತರ ಮನವಿಯಲ್ಲಿ ಕೋರಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT