ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ ನಕ್ಸಲ್ ಹತ್ಯಾಕಾಂಡ: ಐವರ ಸೆರೆ– 19 ವರ್ಷದ ಹಿಂದೆ ನಡೆದಿದ್ದ ಭೀಕರ ದಾಳಿ!

ಗಡಿ ಗ್ರಾಮದಲ್ಲಿ19 ವರ್ಷದ ಹಿಂದೆ ನಡೆದಿದ್ದ ದಾಳಿ
Published 7 ಜನವರಿ 2024, 20:36 IST
Last Updated 7 ಜನವರಿ 2024, 20:36 IST
ಅಕ್ಷರ ಗಾತ್ರ

ಪಾವಗಡ: ಸುಮಾರು 19 ವರ್ಷಗಳ ಹಿಂದೆ ತಾಲ್ಲೂಕಿನ ನಾಗಲಮಡಿಕೆ ಹೋಬಳಿ ವೆಂಕಟಮ್ಮನಹಳ್ಳಿ
ಯಲ್ಲಿ ನಕ್ಸಲರು ನಡೆಸಿದ್ದ ಪೊಲೀಸ್ ಹತ್ಯಾಕಾಂಡ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಗಂತಿಮೇರಿಯ ನಾಗರಾಜು (40), ಧರ್ಮಾವರಂನ ಪದ್ಮ (35), ರಾಮಗಿರಿ
ತಲ್ಲಿಮಡುಗುವಿನ ಬೋಯ ಓಬಳೇಶ್ (40), ರಾಮಮೋಹನ್ (42) ಮತ್ತು ಆಂಜನೇಯುಲು (44) ಅವರನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿ ಕರೆ ತಂದಿದ್ದಾರೆ.

ಭಾರಿ ಭದ್ರತೆಯ ನಡುವೆ ಪೊಲೀಸರು ಆರೋಪಿಗಳನ್ನು ಪಾವಗಡ ಠಾಣೆಗೆ ಕರೆ ತಂದು ರಾತ್ರಿವರೆಗೆ
ಪ್ರಶ್ನಿಸಿದ್ದಾರೆ. ಠಾಣೆಯ ಮುಖ್ಯ ಗೇಟ್‌ಗೆ ಬೀಗ ಹಾಕಿ, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಸೋಮವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡ ಪ್ರಕರಣದ ಕುರಿತು ಪಾವಗಡ ಮತ್ತು ಮಧುಗಿರಿ
ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಬಹುತೇಕ ಆರೋಪಿಗಳ ವಿರುದ್ಧ ನ್ಯಾಯಾಲಯ ಜಾಮೀನುರಹಿತ ವಾರಂಟ್‌ ಹೊರಡಿಸಿದೆ. ಕೆಲವು ಆರೋಪಿಗಳು ಆಂಧ್ರಪ್ರದೇಶದ ವಿವಿಧೆಡೆ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪೊಲೀಸರು ಆರೋಪಿಗಳನ್ನು ಹಂತ ಹಂತವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದಾರೆ.

ಏನಾಗಿತ್ತು?

ಅಂದು ರಾತ್ರಿ ಲಾರಿಯಲ್ಲಿ ಬಂದಿದ್ದ ನಕ್ಸಲರು

ಆಂಧ್ರಪ್ರದೇಶ–ಕರ್ನಾಟಕದ ಗಡಿ ಭಾಗದಲ್ಲಿ ಹೆಚ್ಚಾಗಿದ್ದ ನಕ್ಸಲರ ಹಾವಳಿ ನಿಗ್ರಹಿಸಲು ನಕ್ಸಲ್ ನಿಗ್ರಹ ಪಡೆ ವೆಂಕಟಮ್ಮನಹಳ್ಳಿಯಲ್ಲಿ ಬಿಡಾರ ಹೂಡಿತ್ತು. 2005ರ ಫೆಬ್ರವರಿ 11ರಂದು ರಾತ್ರಿ ಲಾರಿಯಲ್ಲಿ ಬಂದಿಳಿದ ನಕ್ಸಲರ ಗುಂಪು ವೆಂಕಟಮ್ಮನಹಳ್ಳಿ ಶಾಲೆಯ ಆವರಣದಲ್ಲಿದ್ದ ಪೊಲೀಸ್ ಕ್ಯಾಂಪ್ ಮೇಲೆ ಏಕಾಏಕಿ ದಾಳಿ ನಡೆಸಿತ್ತು.

ಕ್ಯಾಂಪ್‌ಗೆ ನುಗ್ಗಿದ ನಕ್ಸಲೀಯರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ದೋಚಿದ ನಂತರ ಪೊಲೀಸರ ಮೇಲೆ ಗುಂಡಿನ ಮಳೆಗರೆದಿದ್ದರು. ದಾಳಿಯಲ್ಲಿ ಏಳು ಪೊಲೀಸರು ಮತ್ತು ಒಬ್ಬ ನಾಗರಿಕ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಪೊಲೀಸರು ನ್ಯಾಯಾಲಯಕ್ಕೆ ಹೊಸದಾಗಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ 42 ಆರೋಪಿಗಳನ್ನು ಹೆಸರಿಸಲಾಗಿತ್ತು. ಈ ಪ್ರಕರಣದ 11ನೇ ಆರೋಪಿ, ಕ್ರಾಂತಿಕಾರಿ ಗಾಯಕ ಗದ್ದರ್‌ 2019ರ ನವೆಂಬರ್‌ನಲ್ಲಿ ಪಾವಗಡ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇತ್ತೀಚೆಗೆ ಅವರು ಮೃತಪಟ್ಟಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ವರವರರಾವ್ ಅವರನ್ನು ಮಹಾರಾಷ್ಟ್ರದ ಜೈಲಿನಿಂದ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT