ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್‌ಡ್ರೈವ್‌ ಪ್ರಕರಣ | ಡಿಕೆಶಿ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ

ಗೌಡರ ಕುಟುಂಬಕ್ಕೆ ಕೆಟ್ಟ ಹೆಸರು ತರಲು ಪೆನ್‌ ಡ್ರೈವ್‌ ಸಂಚಿನಲ್ಲಿ ಭಾಗಿಯಾಗಿರುವ ಉಪ ಮುಖ್ಯಮಂತ್ರಿ: ಆರೋಪ
Published 22 ಮೇ 2024, 0:22 IST
Last Updated 22 ಮೇ 2024, 0:22 IST
ಅಕ್ಷರ ಗಾತ್ರ

ಬೆಂಗಳೂರು: ದೇವೇಗೌಡರ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಉದ್ದೇಶ ಹೊಂದಿದ್ದ ಪೆನ್‌ಡ್ರೈವ್ ಸಂಚಿನಲ್ಲಿ ಭಾಗಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಸುದ್ದಿಗಾರರ ಜತೆಗೆ ಮಂಗಳವಾರ ಮಾತನಾಡಿದ ಅವರು, ‘ಪೆನ್ ಡ್ರೈವ್ ಸೃಷ್ಟಿಕರ್ತ ಕಾರ್ತಿಕ್ ಗೌಡ  ವಿಡಿಯೊಗಳನ್ನು ಮೊದಲು ತಂದುಕೊಟ್ಟಿದ್ದೇ ಶಿವಕುಮಾರ್ ಅವರಿಗೆ. ಆ ವೇಳೆ, ಹಾಸನದ ಕಾಂಗ್ರೆಸ್ ಅಭ್ಯರ್ಥಿಯೂ ಇದ್ದರು. ಈ ಪ್ರಕರಣದಲ್ಲಿ ಶಿವಕುಮಾರ್ ಪಾತ್ರ ಇರುವುದಕ್ಕೆ ಆಡಿಯೊ ಸಂಭಾಷಣೆಯ ಸಾಕ್ಷ್ಯವೂ ಇದೆ. ಅವರು ರಾಜೀನಾಮೆ ಕೊಡದಿದ್ದರೆ, ಅವರನ್ನು ಮುಖ್ಯಮಂತ್ರಿಯವರು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

‘ಪೆನ್ ಡ್ರೈವ್ ಸೃಷ್ಟಿ ಮಾಡಿ, ಅದನ್ನೆಲ್ಲಾ ಹೊರಗೆ ತಂದು ಮಹಿಳೆಯರ ಪಾಲಿಗೆ ಕಂಟಕರಾದವರೇ ಇವತ್ತು ನರೇಂದ್ರ ಮೋದಿ, ಅಮಿತ್ ಶಾ ಅವರನ್ನು, ಎನ್‌ಡಿಎ ಮೈತ್ರಿಕೂಟದಿಂದ ಜೆಡಿಎಸ್ ಪಕ್ಷವನ್ನು ಯಾವಾಗ ಹೊರಕ್ಕೆ ಹಾಕುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಆಡಿಯೊ ಸಂಭಾಷಣೆಯಲ್ಲಿ ಈ ಅಂಶವೂ ಇದೆ. ಅಲ್ಲಿಗೆ ಇವರ ದುರುದ್ದೇಶ ಏನು ಎನ್ನುವುದು ಅರ್ಥ ಆಯಿತಲ್ಲವೇ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಪೆನ್ ಡ್ರೈವ್ ಪ‍್ರಕರಣ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕ್ಷ್ಯ ಇದೆಯಾ ಎಂದು ಕೇಳಿದ್ದಾರೆ. ಮಾಧ್ಯಮಗಳಲ್ಲಿ ಬಿಡುಗಡೆ ಆಗಿರುವ ಶಿವರಾಮೇಗೌಡ, ದೇವರಾಜೇಗೌಡ, ಶಿವಕುಮಾರ್ ನಡುವಿನ ಮೊಬೈಲ್ ಸಂಭಾಷಣೆಗಿಂತ ಬೇರೆ ಸಾಕ್ಷ್ಯ ಬೇಕಾ’ ಎಂದು ಅವರು ಕೇಳಿದರು.

‘ಪ್ರಜ್ವಲ್ ಆರೋಪಿಯಷ್ಟೇ; ಅಪರಾಧಿಯಲ್ಲ’

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜ್ವಲ್ ರೇವಣ್ಣನನ್ನು ಅಪರಾಧಿ ಮಾಡಿ ಬಿಟ್ಟಿದ್ದಾರೆ. ಇನ್ನೂ ಆರೋಪಿ ಸ್ಥಾನದಲ್ಲಿದ್ದಾನೆ. ಅವನು ಅಪರಾಧಿ ಎಂದು ಎಲ್ಲಿ ಸಾಬೀತಾಗಿದೆ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ವಿಡಿಯೊಗಳಲ್ಲಿ ಪುರುಷನ ಮುಖವೇ ಕಾಣುವುದಿಲ್ಲ ಎಂಬ ಕಾರಣಕ್ಕೆ ತನಿಖಾ ತಂಡದವರೇ ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆ. ಇದು ಮುಖ್ಯಮಂತ್ರಿಗೆ ಗೊತ್ತಿಲ್ಲವೇ. ನಾವು ನೈತಿಕತೆ ಉಳಿಸಬೇಕು ಎಂಬ ಉದ್ದೇಶದಿಂದಲೇ, ಆತನ ವಿರುದ್ಧ ಆರೋಪ ಕೇಳಿ ಬಂದ ತಕ್ಷಣ ಪಕ್ಷದಿಂದ ಅಮಾನತು ಮಾಡಿದ್ದೇವೆ. ಸಿದ್ದರಾಮಯ್ಯನವರ ತರಹ ನಾವು ಭಂಡತನ ಮಾಡಿಲ್ಲ. ನಿಮ್ಮ ಮಗನದ್ದು ನಡೆಯಿತಲ್ಲ.. ಅಪ್ಪ..ಅಪ್ಪ.. ನಾನು ಕೊಟ್ಟಿದ್ದೇ 5 ಹೆಸರು, 6 ಹೆಸರು ಎಲ್ಲಿಂದ ಬಂತು ಹೇಳಿ ಎಂದು ಕಥೆ ಕಟ್ಟಿದ್ದರಲ್ಲ. ನಿಮ್ಮ ಮಗನ ಹೆಸರು ಬಂದ ಕೂಡಲೇ ಅದಕ್ಕೆ ಸಿಎಸ್‌ಆರ್‌ ಫಂಡ್ ಎಂದು ಬಣ್ಣ ಹಚ್ಚಿದ್ದು ಗೊತ್ತಿಲ್ಲವೇ’ ಎಂದು ಕೇಳಿದರು.

ವಾಪಸ್ ಬಾ ಪ್ರಜ್ವಲ್‌; ಮತ್ತೊಮ್ಮೆ ಮನವಿ

48 ಗಂಟೆಯೊಳಗೆ ವಾಪಸ್ ಬರುವಂತೆ ಪ್ರಜ್ವಲ್ ರೇವಣ್ಣಗೆ ಸೋಮವಾರ ಮನವಿ ಮಾಡಿದ್ದ ಎಚ್.ಡಿ. ಕುಮಾರಸ್ವಾಮಿ, ‘ಎಲ್ಲೇ ಇದ್ದರೂ ತಕ್ಷಣ ಎಸ್‌ಐಟಿ ಮುಂದೆ ಹಾಜರಾಗು ಎಂದು ಸಂದೇಶ ನೀಡಿದ್ದೇನೆ’ ಎಂದು ಮಂಗಳವಾರ ಹೇಳಿದರು.

‘ನನ್ನ ಸಂಪರ್ಕದಲ್ಲಿ ಪ್ರಜ್ವಲ್ ಇಲ್ಲ. ಆ ಕಾರಣಕ್ಕೆ ಸಾರ್ವಜನಿಕವಾಗಿ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದೇನೆ. ವಾಪಸ್ ಬರುತ್ತಾನೆ ಎಂದು ನಾನು ನಿರೀಕ್ಷೆ ಇಟ್ಟುಕೊಂಡಿದ್ದೇನೆ. ದೇವೇಗೌಡರು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಗೌರವ ಎನ್ನುವುದು ಇದ್ದರೆ ವಾಪಸ್ ಬಾ.. ಎಂದು ಹೇಳಿದ್ದೇನೆ. ಈ ಕೂಡಲೇ ವಾಪಸ್ ಬಾ.. ಎಂದು ಮಾಧ್ಯಮಗಳು ಮೂಲಕ ಮತ್ತೆ ಮನವಿ ಮಾಡುತ್ತೇನೆ’ ಎಂದರು.

‘ಅಸೂಯೆ, ಹೊಟ್ಟೆಕಿಚ್ಚಿಗೆ ಮದ್ದಿಲ್ಲ’

‘ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಭ್ರಮನಿರಸನಗೊಂಡಿರುವ ಎಚ್‌.ಡಿ. ಕುಮಾರಸ್ವಾಮಿ, ಹೇಗಾದರೂ ಮಾಡಿ ನನ್ನ ರಾಜೀನಾಮೆ ಪಡೆಯುವ ಆಸೆ ಇಟ್ಟುಕೊಂಡಿದ್ದಾರೆ. ಅವರ ಅಸೂಯೆ, ಹೊಟ್ಟೆಕಿಚ್ಚಿಗೆ ಮದ್ದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. 

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಕಿಂಗ್‌ ಮೇಕರ್ ಆಗುವ ಭ್ರಮೆಯಲ್ಲಿದ್ದ ಅವರು ಈಗ ಶಕ್ತಿ ಕಳೆದುಕೊಂಡಿದ್ದಾರೆ. ಹತಾಶೆಗೆ ಒಳಗಾಗಿದ್ದಾರೆ. ಅದಕ್ಕಾಗಿ ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ. ರಾಜ್ಯದ ಜನರು ನನ್ನ ಅಧ್ಯಕ್ಷತೆಗೆ 135 ಸ್ಥಾನ, ಅವರಿಗೆ 19 ಸ್ಥಾನ ನೀಡಿದ್ದಾರೆ. ನಮ್ಮನ್ನು ಕೆಳಗಿಳಿಸಲು ರಾಜೀನಾಮೆ ಪಡೆಯಲು ನಿರಂತರ ಪ್ರಯತ್ನ ಮುಂದುವರಿಸಿದ್ದಾರೆ. ಅವರು ಆಸೆ ಪಡುವುದನ್ನು ನಾನೇಕೆ ತಪ್ಪು ಎನ್ನಲಿ’ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರ ದೂರವಾಣಿ ಕದ್ದಾಲಿಕೆಯ ಆರೋಪದ ಬಗ್ಗೆ ಕೇಳಿದಾಗ, ‘ಅವರಲ್ಲಿ ಏನೋ ಸಮಸ್ಯೆ ಇರಬೇಕು. ಅವರು ಹಿಂದೆ ಇಂತಹ ಹೀನಾಯ ಕೆಲಸಗಳನ್ನು ಮಾಡಿರಬೇಕು. ಅದಕ್ಕಾಗಿ ಅದನ್ನು ಬೇರೆಯವರ ಮೇಲೆ ಹಾಕಲು ಪ್ರಯತ್ನಿ ಸುತ್ತಿದ್ದಾರೆ’ ಎಂದು ಉತ್ತರಿಸಿದರು.

ರಾಹುಲ್ ಗಾಂಧಿ ವಿದೇಶಕ್ಕೆ ಹೋಗುತ್ತಾರೆ ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಲಿದ್ದು, ಯೋಗಿ ಆದಿತ್ಯನಾಥ ಅವರು ಮತ್ತೊಮ್ಮೆ ಸನ್ಯಾಸತ್ವ ಸ್ವೀಕರಿಸಲಿದ್ದಾರೆ’ ಎಂದು ಹೇಳಿದರು.

ಸರ್ಕಾರದ ಸಾಧನೆ ಶೂನ್ಯ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿಗೆ ಏಳು ತಿಂಗಳು ಬೇಕಾಯಿತು. ಇದು ಬಿಜೆಪಿಯ ಅಸಮರ್ಥತೆಗೆ ‍ಪುರಾವೆ. ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಶೂನ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT