ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಮಸೂದೆ: ಯಾರ ಹಕ್ಕಿಗೂ ಧಕ್ಕೆ ಇಲ್ಲ

ಬಲವಂತವಾಗಿ ಮೇಲ್ಜಾತಿ ಮೀಸಲು ಮಸೂದೆ ಹೇರುವುದಿಲ್ಲ: ಪ್ರಧಾನಿ ಭರವಸೆ
Last Updated 9 ಜನವರಿ 2019, 19:46 IST
ಅಕ್ಷರ ಗಾತ್ರ

ಸೊಲ್ಲಾಪುರ: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶೇ 10ರಷ್ಟು ಮೀಸಲಾತಿ ಮತ್ತು ಪೌರತ್ವ ಮಸೂದೆಗಳಿಂದ ಯಾರ ಹಕ್ಕುಗಳಿಗೂ ಧಕ್ಕೆಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬುಧವಾರ ₹970 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸೊಲ್ಲಾಪುರ–ತುಳಜಾಪುರ–ಉಸ್ಮಾನಾಬಾದ್‌ ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೌರತ್ವ ಮಸೂದೆ ಮತ್ತು ನೆರೆಯ ದೇಶಗಳ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಮಸೂದೆಯಿಂದ ಈಶಾನ್ಯ ರಾಜ್ಯಗಳ ನಾಗರಿಕರ ಹಕ್ಕುಗಳ ಚ್ಯುತಿಯಾಗುವುದಿಲ್ಲ ಎಂದು ಆಶ್ವಾಸನೆ ನೀಡಿದರು.

‘ಎಲ್ಲ ವರ್ಗಗಳ ಹಕ್ಕುಗಳನ್ನು ರಕ್ಷಿಸಲಾಗುವುದು. ಯಾರ ಮೇಲೂ ಈ ಮಸೂದೆಗಳನ್ನು ಬಲವಂತವಾಗಿ ಹೇರುವುದಿಲ್ಲ. ದಲಿತರು, ಆದಿವಾಸಿಗಳು, ಬುಡಕಟ್ಟು ಜನರು ಮತ್ತು ದುರ್ಬಲ ವರ್ಗಗಳ ಹಕ್ಕುಗಳ ಮೇಲೆ ಯಾವ ಪರಿಣಾಮವಾಗುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಸಂಸತ್‌ನಿಂದ ತಕ್ಕ ಉತ್ತರ

ಮೇಲ್ವರ್ಗದ ಬಡವರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲು ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಧಾನಿ ಬಲವಾಗಿ ಸಮರ್ಥಿಸಿಕೊಂಡರು.

ಮೇಲ್ಜಾತಿ ಮೀಸಲು ಮಸೂದೆಗೆ ಲೋಕಸಭೆ ಅಂಗೀಕಾರ ನೀಡುವ ಮೂಲಕ ಸುಳ್ಳುಗಳನ್ನು ಹರಡುತ್ತಿರುವವರಿಗೆ ತಕ್ಕ ಉತ್ತರ ನೀಡಿದೆ. ನಿಜಕ್ಕೂ ಇದೊಂದು ಐತಿಹಾಸಿಕ ಹೆಜ್ಜೆ ಎಂದು ಅವರು ಬಣ್ಣಿಸಿದರು.

ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ರಾಜ್ಯಸಭೆ ಮಸೂದೆಗೆ ಅಂಗೀಕಾರ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಫೇಲ್‌ ಮೇಲೂ ಮಿಷೆಲ್‌ ಕರಿನೆರಳು

ಅಗಸ್ಟಾ ವೆಸ್ಟ್‌ಲ್ಯಾಂಡ್ ಗಣ್ಯರ ಹೆಲಿಕಾಪ್ಟರ್‌ ಖರೀದಿ ಒಪ್ಪಂದದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌, ಫ್ರಾನ್ಸ್‌ನ ರಫೇಲ್‌ ಯುದ್ಧ ವಿಮಾನ ತಯಾರಿಕಾ ಕಂಪೆನಿ ಡಾಸೊ ಪ್ರತಿಸ್ಪರ್ಧಿ ಕಂಪನಿಯ ಪರ ಲಾಬಿಯಲ್ಲಿ ತೊಡಗಿದ್ದ ಎಂದು ಪ್ರಧಾನಿ ಹೇಳಿದರು.

‘ಯುಪಿಎ ಅವಧಿಯಲ್ಲಿ ನಡೆದ ರಕ್ಷಣಾ ಒಪ್ಪಂದಗಳ ಪ್ರತಿ ಪೈಸೆಯ ಲೆಕ್ಕ ಚುಕ್ತಾ ಮಾಡುತ್ತೇನೆ. ಸದ್ಯ ಚೌಕಿದಾರ ಭ್ರಷ್ಟಾಚಾರ ಸ್ವಚ್ಛಗೊಳಿಸುವ ಕೆಲಸ ಕೈಗೆತ್ತಿಕೊಂಡಿದ್ದಾನೆ’ ಎಂದು ತಮ್ಮನ್ನು ತಾವು ಬಣ್ಣಿಸಿಕೊಂಡರು.

**

‘ತಾಜ್‌ನಿಂದ ಪ್ರೀತಿ, ಪ್ರೇಮದ ಪಾಠ ಕಲಿಯಲಿ’

ಲಖನೌ: ತಾಜ್‌ ಮಹಲ್‌ ಭೇಟಿ ನಂತರವಾದರೂ ಪ್ರಧಾನಿ ನರೇಂದ್ರ ಮೋದಿ ಅವರು ಪ್ರೀತಿ, ಪ್ರೇಮ ಮತ್ತು ವಾತ್ಸಲ್ಯಗಳ ಪಾಠ ಕಲಿಯಲಿ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಹಾರೈಸಿದ್ದಾರೆ.

ಪ್ರಧಾನಿ ಆಗ್ರಾ ಭೇಟಿಗೂ ಮುನ್ನ ಟ್ವೀಟ್‌ ಮಾಡಿದ ಅಖಿಲೇಶ್‌, ತಾಜ್‌ ಮಹಲ್‌ ಭೇಟಿಯ ನಂತರ ಮೋದಿ ಶುದ್ಧ ಅಂತಃಕರಣ ತುಂಬಿದ ವ್ಯಕ್ತಿಯಾಗಿ ಹೊರಬರಲಿದ್ದಾರೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

**

ಹೌ ಈಸ್‌ ಮೈ ಬೆಸ್ಟ್‌ ಫ್ರೆಂಡ್

ಬೀದರ್‌: ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯಿಂದ ಸೊಲ್ಲಾಪುರಕ್ಕೆ ತೆರಳುವ ಸಂದರ್ಭದಲ್ಲಿ ಇಲ್ಲಿಯ ವಾಯುಪಡೆ ವಿಮಾನನಿಲ್ದಾಣದಲ್ಲಿ ಸ್ವಾಗತ ಕೋರಿದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅವರ ಬಳಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದರು.

ಬುಧವಾರ ವಿಮಾನದಿಂದ ಇಳಿದ ತಕ್ಷಣವೇ ಸಚಿವ ಬಂಡೆಪ್ಪ ಕಾಶೆಂಪೂರ ಅವರು ‘ನಾನು ದೇವೇಗೌಡರ ಪಕ್ಷದ ಬಂಡೆಪ್ಪ’ ಎಂದು ಪರಿಚಯಿಸಿಕೊಂಡು ಪುಷ್ಪಗುಚ್ಛ ನೀಡಿದರು.

‘ದೇವೇಗೌಡರು ಕ್ಷೇಮವಾಗಿದ್ದಾರೆಯೇ? ಹೌ ಈಸ್‌ ಮೈ ಬೆಸ್ಟ್‌ ಫ್ರೆಂಡ್ (ಕುಮಾರಸ್ವಾಮಿ)’ ಎಂದು ಮೋದಿ ಅವರು ಬಂಡೆಪ್ಪ ಅವರಲ್ಲಿ ವಿಚಾರಿಸಿದರು. ‘ಇಬ್ಬರೂ ಕ್ಷೇಮವಾಗಿದ್ದಾರೆ’ ಎಂದು ಬಂಡೆಪ್ಪ ಉತ್ತರಿಸಿದರು.

ನಂತರ ಸಚಿವರಾದ ರಾಜಶೇಖರ ಪಾಟೀಲ, ರಹೀಂ ಖಾನ್‌, ಸಂಸದ ಭಗವಂತ ಖೂಬಾ, ಶಾಸಕ ಪ್ರಭು ಚವಾಣ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.

ಪ್ರಧಾನಿ ಮಧ್ಯಾಹ್ನ ಸೊಲ್ಲಾಪುರದಿಂದ ಮರಳಿ ಹೆಲಿಕಾಪ್ಟರ್‌ನಲ್ಲಿ ಬೀದರ್‌ಗೆ ಬಂದು ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರು.

**

ಸೊಲ್ಲಾಪುರಕ್ಕೆ ವಿಮಾನ

* ಕೇಂದ್ರ ಸರ್ಕಾರದ ಉಡಾನ್‌ ಯೋಜನೆ ಅಡಿ ಶೀಘ್ರ ಸೊಲ್ಲಾಪುರದಲ್ಲಿ ವಿಮಾನ ಸಂಚಾರ ಆರಂಭ: ಪ್ರಧಾನಿ

*ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿ ₹1,800 ಕೋಟಿ ವೆಚ್ಚದಲ್ಲಿ 30 ಸಾವಿರ ಮನೆ ನಿರ್ಮಾಣ ಯೋಜನೆಗೆ ಸೊಲ್ಲಾಪುರದಲ್ಲಿ ಮೋದಿ ಅಡಿಗಲ್ಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT