ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಡಚಣನ ನಕಲಿ ಎನ್‌ಕೌಂಟರ್‌ ಪ್ರಕರಣ-ಪೊಲೀಸ್ ಸುಪಾರಿ; ತಪ್ಪೊಪ್ಪಿಕೊಂಡ ಆರೋಪಿಗಳು..!

ಭೀಮಾ ತೀರದ ರೌಡಿಶೀಟರ್ ಧರ್ಮರಾಜ ಚಡಚಣನ ನಕಲಿ ಎನ್‌ಕೌಂಟರ್‌
Last Updated 14 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ವಿಜಯಪುರ:‘ಭೀಮಾ ತೀರದ ರೌಡಿಶೀಟರ್‌ ಧರ್ಮರಾಜ ಚಡಚಣನನ್ನು ನಕಲಿ ಎನ್‌ಕೌಂಟರ್‌ ನಡೆಸಿ, ಕೊಲೆಗೈಯಲು ಸುಪಾರಿ ಪಡೆದಿರುವುದಾಗಿ’ ಬಂಧಿತ ಪಿಎಸ್‌ಐ ಗೋಪಾಲ ಹಳ್ಳೂರ, ವಿಚಾರಣೆ ಸಂದರ್ಭ ಸಿಐಡಿ ಅಧಿಕಾರಿಗಳಿಗೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ.

‘ಧರ್ಮರಾಜ ಚಡಚಣನನ್ನು ವ್ಯವಸ್ಥಿತವಾಗಿ ಮುಗಿಸಲಿಕ್ಕಾಗಿಯೇ, ಬೆಳಗಾವಿ ಜಿಲ್ಲೆಯ ಘಟಪ್ರಭಾ ಪೊಲೀಸ್ ಠಾಣೆಯಿಂದ ಚಡಚಣ ಪೊಲೀಸ್ ಠಾಣೆಗೆ ನನ್ನನ್ನು ಮಹಾದೇವ ಭೈರಗೊಂಡ ವರ್ಗ ಮಾಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಹಲ ಸುತ್ತಿನ ಮಾತುಕತೆಯಾಗಿದ್ದವು. ಇದಕ್ಕೂ ಮುನ್ನ ಹಾರೋಗೇರಿಯಲ್ಲಿ ನನ್ನ ಕುಟುಂಬದ ಗೃಹ ಪ್ರವೇಶದಲ್ಲೂ ಭೈರಗೊಂಡ ಭಾಗಿಯಾಗಿದ್ದರು.’

‘2017ರ ಆಗಸ್ಟ್‌ ಅಂತ್ಯದಲ್ಲಿ ಚಡಚಣ ಪೊಲೀಸ್ ಠಾಣೆಗೆ ವರ್ಗವಾಗಿ ಬಂದೆ. ಆರಂಭದಿಂದಲೇ ಭೀಮನಗೌಡ ದೇವರನಿಂಬರಗಿ ಮೂಲಕ ಧರ್ಮರಾಜನನ್ನು ಮುಗಿಸಲು ಒತ್ತಡ ಹಾಕಿದ್ದರು. ಈ ಸಂಬಂಧ ಆಗಿನ ಸಿಪಿಐ ಎಂ.ಬಿ.ಅಸೋಡೆ, ಮಹಾದೇವ ಭೈರಗೊಂಡ ಸೇರಿದಂತೆ ಅವರ ಸಹಚರರ ಸಮ್ಮುಖ ಮಾತುಕತೆ ನಡೆದಿದ್ದವು’ ಎಂದು ಹಳ್ಳೂರ ನೀಡಿರುವ ಹೇಳಿಕೆಯ ಪ್ರತಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಭೈರಗೊಂಡ ನನಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ಕೊಟ್ಟ ನಂತರವೇ ಎನ್‌ಕೌಂಟರ್‌ಗೆ ಮುಂದಾಗಿದ್ದು. 2017ರ ಅ.30ರಂದು ಕಾರ್ಯಾಚರಣೆ ನಡೆಸುವ ತಂತ್ರಗಾರಿಕೆ ಹೆಣೆದ ಬಳಿಕ, ಪುಣೆಯಿಂದ ಗಂಗಾಧರ ಚಡಚಣ ಬಂದು ಧರ್ಮನ ಜತೆಗಿರುವ ಮಾಹಿತಿ ಲಭ್ಯವಾಯ್ತು.

ತಕ್ಷಣವೇ ಭೈರಗೊಂಡ ಜತೆ ಯೋಜನೆ ಕೈಬಿಡುವಂತೆ ಮಾತನಾಡಿದೆ. ಇದಕ್ಕೊಪ್ಪದ ಮಹಾದೇವ ಗಂಗಾಧರನನ್ನು ನಮಗೊಪ್ಪಿಸಿ. ಧರ್ಮನನ್ನು ನೀವು ನೋಡಿಕೊಳ್ಳಿ. ರಾಜಕೀಯದವರು, ನಿಮ್ಮ ಮೇಲಿನ ಎಲ್ಲರನ್ನೂ ಈಗಾಗಲೇ ನೋಡಿಕೊಂಡಿರುವೆ. ಧೈರ್ಯದಿಂದಿರಿ ಎಂದೇಳಿ, ಸಿಪಿಐ ಅಸೋಡೆ ಜತೆಯೂ ಮಾತುಕತೆ ನಡೆಸಿದರು.

ಯೋಜನೆಯಂತೆ ಅಕ್ರಮ ಶಸ್ತ್ರಾಸ್ತ್ರ ತನಿಖೆ ನೆಪದಲ್ಲಿ ಕೊಂಕಣಗಾಂವ್‌ನ ಹೊರ ವಲಯದಲ್ಲಿದ್ದ ಧರ್ಮನಿದ್ದ ಗುಡಿಸಲು ಹೊಕ್ಕು, ಆತನ ಸಹಚರರನ್ನು ಬೇರ್ಪಡಿಸಿದೆ. ಗಂಗಾಧರನನ್ನು ನಮ್ಮ ಸಿಬ್ಬಂದಿ ಜತೆ ಭೈರಗೊಂಡನ ಸಹಚರರಿಗೆ ಒಪ್ಪಿಸುವಂತೆ ಕಳುಹಿಸಿಕೊಟ್ಟೆ. ಸೂಕ್ಷ್ಮ ಅರಿತ ಧರ್ಮ ಬೇಟೆಗೆ ಬಂದಿರುವಂತಿದೆ ಎಂದ. ಅಷ್ಟರೊಳಗೆ ಆತನಿಗೆ ಗುಂಡು ಹಾರಿಸಿ ನೆಲಕ್ಕೆ ಕೆಡವಿದೆ. ನಂತರ ನಕಲಿ ಪಿಸ್ತೂಲಿನಿಂದ ಶಿವಾನಂದ ಬಿರಾದಾರನ ಎಡಗೈಗೆ ಗುಂಡು ಹೊಡೆದೆ. ಬಳಿಕ ನನ್ನ ಬಲಗೈಗೆ ಗುಂಡು ಹಾರಿಸಿಕೊಂಡು ಎನ್‌ಕೌಂಟರ್‌ ಕತೆ ಕಟ್ಟಿದೆ’ ಎಂದು ಗೋಪಾಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಸೋಡೆ ಜತೆ ದಶಕದ ಸ್ನೇಹ:

‘ಎಂ.ಬಿ.ಅಸೋಡೆ ಜತೆ ಚಡಚಣ ಪೊಲೀಸ್ ಠಾಣೆಯ ಪಿಎಸ್‌ಐ ಆಗಿದ್ದಾಗಿನಿಂದಲೂ ಗೆಳೆತನವಿದೆ. ನಾವಿಬ್ಬರೂ ಅಣ್ಣ–ತಮ್ಮಂದಿರಂತಿದ್ದೇವೆ. ವಾರಕ್ಕೊಮ್ಮೆ ಭೇಟಿ ನಡೆದಿತ್ತು. ಅವರು ನಮ್ಮ ಕಡಿ ಮೆಷಿನ್ ಬಳಿ ಬಂದರೆ, ನಾನೂ ಅವರ ಕಚೇರಿಗೆ ತೆರಳುತ್ತಿದ್ದೆ.’

‘ನಾಲ್ಕು ವರ್ಷದ ಹಿಂದೆ ಚಡಚಣ ವೃತ್ತಕ್ಕೆ ಸಿಪಿಐ ಆಗಿ ಬಂದರು. ಆಗ ಮರಗೂರ ಭೀಮಾಶಂಕರ ಕಾರ್ಖಾನೆ ಬಳಿ ₹ 1.20 ಲಕ್ಷ ಮೌಲ್ಯವಿದ್ದ ಎಕರೆ ಭೂಮಿಗೆ ₹ 80000ದಂತೆ 40 ಎಕರೆ ಕೊಡಿಸಿಕೊಟ್ಟಿರುವೆ. ವಿಜಯಪುರದ ಎಂ.ಬಿ.ಪಾಟೀಲ ನಗರದ ಬಳಿ ₹ 9 ಲಕ್ಷ ಮೌಲ್ಯದ ನಿವೇಶನಗಳನ್ನು ₹ 6 ಲಕ್ಷದಂತೆ ಐದು ಕೊಡಿಸಿದ್ದೆ. ಅಸೋಡೆ ಸದಾ ನನ್ನ ಬೆಂಬಲಕ್ಕಿದ್ದರು. ನಿರಂತರವಾಗಿ ಗನ್ ಮ್ಯಾನ್‌ ಒದಗಿಸಿದ್ದರು’ ಎಂದು ಕಾಂಗ್ರೆಸ್‌ ಮುಖಂಡ, ಪ್ರಕರಣದ ಪ್ರಮುಖ ಆರೋಪಿ, ಬಂಧಿತ ಮಹಾದೇವ ಭೈರಗೊಂಡ ಸಹ ವಿಚಾರಣೆ ಸಂದರ್ಭ ಸಿಐಡಿ ಅಧಿಕಾರಿಗಳ ಬಳಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

‘ಆಗ ನಾಗಠಾಣ ಶಾಸಕರಾಗಿದ್ದ ರಾಜು ಆಲಗೂರ ಪತ್ರದ ಶಿಫಾರಸ್ಸಿನಂತೆ ಗೋಪಾಲ ಹಳ್ಳೂರನನ್ನು ಚಡಚಣ ಠಾಣೆಗೆ ವರ್ಗ ಮಾಡಿಸಿದ್ದೆ. ಹಳ್ಳೂರ, ಅಸೋಡೆ, ನಾನು, ನನ್ನ ಸಹಚರರು ಸೇರಿಕೊಂಡು ಧರ್ಮರಾಜ ಚಡಚಣನ ಎನ್‌ಕೌಂಟರ್‌, ಗಂಗಾಧರ ಚಡಚಣನ ಕೊಲೆ ಸಂಚನ್ನು ನಡೆಸಿದ್ದೇವೆ’ ಎಂದು ಭೈರಗೊಂಡ ಹೇಳಿಕೆ ದಾಖಲಿಸಿದ್ದಾರೆ.

ಸಂಧಾನಕಾರರಾಗಿದ್ದ ಸಿಪಿಐ ತುಳಜಪ್ಪ ಸುಲ್ಪಿ..!

‘ಮಾಜಿ ಮೇಯರ್ ಸಜ್ಜಾದೆ ಪೀರಾ ಮುಶ್ರೀಫ್‌ ಸಹೋದರನ ಪುತ್ರ ಫಯಾಜ್‌ ಮುಶ್ರೀಫ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ತುಳಜಪ್ಪ ಸುಲ್ಪಿ ಧರ್ಮರಾಜ ಚಡಚಣನನ್ನು ಬಂಧಿಸಿದ್ದರು. ಈ ಸಂದರ್ಭ ಭೇಟಿಯಾಗಿ ಅಭಿನಂದಿಸಿದ್ದ ನಾನು, ಧರ್ಮನ ಜತೆ ರಾಜಿ ಮಾಡಿಸುವಂತೆ ಕೋರಿದ್ದೆ.

ಇದರಂತೆ ಸುಲ್ಪಿ ಧರ್ಮನನ್ನು ವಿಜಯಪುರ ನ್ಯಾಯಾಲಯಕ್ಕೆ ಕರೆ ತಂದ ಸಂದರ್ಭ ನನ್ನ ಅಳಿಯ ಸಿದ್ದಗೊಂಡ ಮುಡವಿ ಕರೆಸಿಕೊಂಡು, ರಾಜಿಗೆ ಯತ್ನಿಸಿದರು. ಈ ಸಂದರ್ಭ ಧರ್ಮ ₹ 5 ಕೋಟಿ ನಗದು, ಚಡಚಣ ಭಾಗದಲ್ಲಿ ಗುತ್ತಿಗೆ ಕೆಲಸ ಹಾಗೂ ಹಣಮಂತ ಪೂಜಾರಿ ಕೊಲೆಗೈಯಲು ಅವಕಾಶ ಕೊಡಬೇಕು ಎಂದು ಕೋರಿದ್ದರಿಂದ ಈ ರಾಜಿ ಪ್ರಸ್ತಾಪವನ್ನು ಕೈಬಿಟ್ಟಿದ್ದೆ’ ಎಂದು ಮಹಾದೇವ ಭೈರಗೊಂಡ ಸ್ವಇಚ್ಚಾ ಹೇಳಿಕೆ ದಾಖಲಿಸಿರುವ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT