ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಟೆಕ್ನಿಕ್‌ ಪಠ್ಯಕ್ರಮ–20ಕ್ಕೆ ಪ್ರಾಂಶುಪಾಲರು, ಅಧ್ಯಾಪಕರ ವಿರೋಧ

Published 4 ಅಕ್ಟೋಬರ್ 2023, 14:45 IST
Last Updated 4 ಅಕ್ಟೋಬರ್ 2023, 14:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಎನ್‌ಇಪಿ–2020ಗೆ ಪೂರಕವಾಗಿ ಪಾಲಿಟೆಕ್ನಿಕ್‌ ಕಾಲೇಜುಗಳಿಗೆ ರೂಪಿಸಿದ ಪಠ್ಯಕ್ರಮಕ್ಕೆ ಹಲವು ಕಾಲೇಜುಗಳ ಪ್ರಾಂಶುಪಾಲರು, ಅಧ್ಯಾಪಕರು ವಿರೋಧ ವ್ಯಕ್ತಪಡಿಸಿದರು.

ವಿಕಾಸಸೌಧದಲ್ಲಿ ಬುಧವಾರ ಡಿಪ್ಲೊಮಾ ಶಿಕ್ಷಣದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಕುರಿತು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು. 

2020-21ನೇ ಶೈಕ್ಷಣಿಕ ವರ್ಷದಿಂದ ಪರಿಚಯಿಸಲಾದ ಹೊಸ ಪಠ್ಯಕ್ರಮದಲ್ಲಿ ಹಲವು ಪ್ರಮುಖ ವಿಷಯಗಳನ್ನು ತೆಗೆದುಹಾಕಲಾಗಿದೆ. ಮೆಕ್ಯಾನಿಕಲ್‌ ಮತ್ತು ಸಿವಿಲ್‌ ಎಂಜಿನಿಯರಿಂಗ್‌ನ ಪ್ರಮುಖ ಪಾಠಗಳನ್ನು ಕೈಬಿಡಲಾಗಿದೆ. ಇದರಿಂದ ಡಿಪ್ಲೊಮಾ ಶಿಕ್ಷಣ ಪೂರೈಸಿದ ನಂತರ ಉನ್ನತ ಶಿಕ್ಷಣಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ತೊಡಕಾಗಿದೆ ಎಂದು ನ್ಯೂನತೆ ತೆರೆದಿಟ್ಟರು. 

ಹೊಸ ಪಠ್ಯಕ್ರಮ ಜಾರಿಯ ನಂತರ ವಿದ್ಯಾರ್ಥಿಗಳಿಗೆ ಬರವಣಿಗೆಯ ಕೌಶಲದ ಕೊರತೆ ಎದುರಾಗಿದೆ. ಪ್ರಾಯೋಗಿಕ ವಿಷಯಗಳಿಗೆ ಹೆಚ್ಚಿನ ಒತ್ತಡವಿರುವ ಕಾರಣ ಇತರೆ ತರಗತಿಗಳಿಗೆ ಹಾಜರಾಗುತ್ತಿಲ್ಲ. ಕೇವಲ ತೇರ್ಗಡೆಯ ಅಂಕಗಳಿಗಾಗಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಹೊಸ ಪಠ್ಯಕ್ರಮವನ್ನು ಅಧ್ಯಯನ ಮಾಡಿ ಡಿಪ್ಲೊಮಾ ಪೂರೈಸಿದ ವಿದ್ಯಾರ್ಥಿಗಳು ‘ಲ್ಯಾಟರಲ್‌ ಎಂಟ್ರಿ’ ಮೂಲಕ ಎರಡನೇ ವರ್ಷದ ಎಂಜಿನಿಯರಿಂಗ್ ಕೋರ್ಸ್‌ಗೆ (ಬಿ.ಇ) ಸೇರಿದ ನಂತರ ಪಠ್ಯಕ್ರಮ ನಿಭಾಯಿಸಲು ಕಷ್ಟವಾಗುತ್ತಿದೆ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ ಎಂದರು.

‘ಹಿಂದಿನ ಪಠ್ಯಕ್ರಮ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪಠ್ಯಗಳಿಗೆ ಅನುಗುಣವಾಗಿತ್ತು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಆಧಾರದಲ್ಲಿ ರೂಪಿಸಿದ ಹೊಸ ಪಠ್ಯಗಳು ವಿದ್ಯಾರ್ಥಿ ಸ್ನೇಹಿಯಾಗಿಲ್ಲ’ ಎಂದು ಕೆಲ ಪ್ರಾಧ್ಯಾಪಕರು ಹೇಳಿದರು.

ಪ್ರಾಂಶುಪಾಲರು, ಅಧ್ಯಾಪಕರ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ‘ರಾಜ್ಯದಲ್ಲಿ 102 ಸರ್ಕಾರಿ, 44 ಅನುದಾನಿತ ಮತ್ತು 196 ಖಾಸಗಿ ಪಾಲಿಟೆಕ್ನಿಕ್‌ ಕಾಲೇಜುಗಳಿವೆ. ಹೊಸ ಪಠ್ಯಕ್ರಮದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT