ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ ಪ್ರಕರಣ: ಬಿಜೆಪಿ–ಜೆಡಿಎಸ್‌ ಮೈತ್ರಿ ನಾಯಕರಿಗೆ ಇಕ್ಕಟ್ಟು

Published 30 ಏಪ್ರಿಲ್ 2024, 20:36 IST
Last Updated 30 ಏಪ್ರಿಲ್ 2024, 20:36 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವು ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಾಷ್ಟ್ರ ಮಟ್ಟದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಪ್ರಕರಣದಿಂದ ಅಂತರ ಕಾಯ್ದುಕೊಳ್ಳಲು ಬಿಜೆಪಿ ಮುಂದಾಗಿದೆ.

ಲೋಕಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆಗೂ ಮುನ್ನವೇ ಹಾಸನದಲ್ಲಿ ಪ್ರಜ್ವಲ್‌ ಕಣಕ್ಕಿಳಿಸದಂತೆ ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಮತ್ತು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಪಟ್ಟು ಹಿಡಿದಿದ್ದರು. ಜೆಡಿಎಸ್‌ನಿಂದ ಬೇರೊಬ್ಬರನ್ನು ಕಣಕ್ಕಿಳಿಸುವಂತೆ ಒತ್ತಾಯಿಸಿದ್ದರು. ಆದರೆ, ಎಚ್‌.ಡಿ. ರೇವಣ್ಣ ಕುಟುಂಬದ ಒತ್ತಡದಿಂದ ಪ್ರಜ್ವಲ್‌ ಅವರನ್ನೇ ಕಣಕ್ಕಿಳಿಸುವ ನಿರ್ಧಾರವನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಕೈಗೊಂಡಿದ್ದರು.

ಈಗ ಪ್ರಜ್ವಲ್‌ ವಿರುದ್ಧ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಎದುರಾದ ಬೆನ್ನಲ್ಲೇ ಸರಣಿಯೋಪಾದಿಯಲ್ಲಿ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ರೇವಣ್ಣ ಮತ್ತು ಪ್ರಜ್ವಲ್‌ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣವೂ ದಾಖಲಾಗಿದೆ. ವಿಡಿಯೊ ತುಣುಕುಗಳು ಬಹಿರಂಗವಾದ ಬಳಿಕ ಪ್ರಜ್ವಲ್‌ ವಿದೇಶಕ್ಕೆ ತೆರಳಿದ್ದಾರೆ. ಈ ಎಲ್ಲ ಬೆಳವಣಿಗೆಗಳೂ ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ಕಸಿವಿಸಿ ಉಂಟುಮಾಡಿವೆ.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಅಣ್ಣನ ಮಗ ತಪ್ಪು ಮಾಡಿದ್ದಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂಬ ನಿಲುವು ಹೊರ ಹಾಕಿದ್ದಾರೆ. ಶಾಸಕರಾದ ಶರಣಗೌಡ ಕಂದಕೂರ, ಸಮೃದ್ಧಿ ಮಂಜುನಾಥ್‌ ಸೇರಿದಂತೆ ಜೆಡಿಎಸ್‌ನ ಹಲವು ಮುಖಂಡರೂ ಪ್ರಜ್ವಲ್‌ ವಿರುದ್ಧ ಬಿಗಿ ನಿಲುವು ತಳೆದಿದ್ದಾರೆ.

ಅಂತರ ಕಾಯ್ದುಕೊಳ್ಳಲು ಸೂಚನೆ: ಪ್ರಜ್ವಲ್‌ ರೇವಣ್ಣ ಪ್ರಕರಣದಿಂದ ಅಂತರ ಕಾಯ್ದುಕೊಳ್ಳುವಂತೆ ಬಿಜೆಪಿ ರಾಜ್ಯ ಘಟಕದ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತ್ರ ಈ ಪ್ರಕರಣಲ್ಲಿ ಪಕ್ಷದ ನಿಲುವನ್ನು ಒಮ್ಮೆ ಪ್ರಕಟಿಸಬಹುದು. ಉಳಿದಂತೆ ಯಾವುದೇ ನಾಯಕರೂ ಬಹಿರಂಗ ಹೇಳಿಕೆ ನೀಡಕೂಡದು. ಈ ಪ್ರಕರಣ ಮೈತ್ರಿಕೂಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸುವ ಅಗತ್ಯವಿಲ್ಲ ಎಂಬ ಸಂದೇಶ ಅಮಿತ್‌ ಶಾ ಅವರಿಂದ ಬಂದಿದೆ’ ಎಂದು ಮೂಲಗಳು ತಿಳಿಸಿವೆ.

ಸಂದೇಶ ಖಾಲಿ ಪ್ರಕರಣವನ್ನು ಮುಂದಿಟ್ಟುಕೊಂಡು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷದ ಸರ್ಕಾರದ ವಿರುದ್ಧ ಬಿಜೆಪಿ ಪ್ರಬಲ ಹೋರಾಟ ನಡೆಸುತ್ತಿದೆ. ಕರ್ನಾಟಕದಲ್ಲಿ ಪ್ರಜ್ವಲ್‌ ಬೆಂಬಲಿಸಿದರೆ ರಾಷ್ಟ್ರ ಮಟ್ಟದಲ್ಲಿ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಅಂತಹ ಬೆಳವಣಿಗೆಗೆ ಅವಕಾಶ ನೀಡಬಾರದು ಎಂಬುದು ಪಕ್ಷದ ವರಿಷ್ಠರ ಸೂಚನೆಗೆ ಕಾರಣ ಎನ್ನುತ್ತಾರೆ ಬಿಜೆಪಿ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT