ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಖಾಸಗಿ ಶಾಲಾ ಶುಲ್ಕ ಹೆಚ್ಚಳ: ಆಕ್ಷೇಪ

Published 16 ಮೇ 2024, 16:26 IST
Last Updated 16 ಮೇ 2024, 16:26 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಹುತೇಕ ಅನುದಾನಿತ ಶಾಲೆಗಳು 2024–25ನೇ ಸಾಲಿನ ಶುಲ್ಕವನ್ನು ಶೇ 30ರಿಂದ 40ರಷ್ಟು ಶುಲ್ಕ ಹೆಚ್ಚಿಸಿವೆ.

ಒಂದೇ ಬಾರಿಗೆ ಶುಲ್ಕವನ್ನು ಗಣನೀಯವಾಗಿ ಏರಿಕೆ ಮಾಡಿದ್ದರಿಂದ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಹೊರೆಯಾಗಿದೆ ಎಂದು ಹಲವು ಪೋಷಕರು ದೂರಿದ್ದಾರೆ.

ಖಾಸಗಿ ಶಾಲೆಗಳನ್ನು ನಿಯಂತ್ರಿಸುವ ಶಿಕ್ಷಣ ಇಲಾಖೆಯ ಆದೇಶವನ್ನು ಕಳೆದ ವರ್ಷ ಹೈಕೋರ್ಟ್‌ ವಜಾಗೊಳಿಸಿದ ಬೆನ್ನಲ್ಲೇ ರಾಜ್ಯದ ಕೆಲ ಅನುದಾನರಹಿತ ಖಾಸಗಿ ಶಾಲೆಗಳು ನಿರ್ಧರಿಸಿದ್ದವು. 

ಶಿಕ್ಷಣ ಇಲಾಖೆ ಎರಡು ದಶಕಗಳಿಂದ ಮಕ್ಕಳ ಶುಲ್ಕ ನಿಗದಿ ಸೇರಿದಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಕೆಲ ಚಟುವಟಿಕೆಗಳನ್ನು ನಿಯಂತ್ರಿಸಿತ್ತು. ಈ ಆದೇಶದಿಂದಾಗಿ ಖಾಸಗಿ ಶಾಲೆಗಳು ಪ್ರತಿ ವರ್ಷ ಶುಲ್ಕ ಹೆಚ್ಚಳ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.  

ಸರ್ಕಾರದ ಆದೇಶದ ವಿರುದ್ಧ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮ) ಹೈಕೋರ್ಟ್‌ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್‌, ‘ಸರ್ಕಾರದ ಅನುದಾನ ಪಡೆಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ’ ಎಂದು ತೀರ್ಪು ನೀಡಿತ್ತು.

ಈ ತೀರ್ಪಿನ ವಿರುದ್ಧ ಶಿಕ್ಷಣ ಇಲಾಖೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂಕೋರ್ಟ್ ಸೂಚನೆಯಂತೆ ಮತ್ತೆ ಹೈಕೋರ್ಟ್‌ನಲ್ಲೇ ಮೇಲ್ಮನವಿಯ ವಿಚಾರಣೆ ನಡೆದಿತ್ತು. ಈ ಮಧ್ಯೆ 2017ರಲ್ಲಿ ಮರು ಆದೇಶ ಹೊರಡಿಸಿದ್ದ ಇಲಾಖೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿತ್ತು. ಎರಡೂ ಆದೇಶಗಳನ್ನೂ ಹೈಕೋರ್ಟ್ ವಜಾಗೊಳಿಸಿತ್ತು. 

‘ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅನುದಾನ ಪಡೆಯುವುದಿಲ್ಲ. ಮೂಲ ಸೌಕರ್ಯ, ಶಿಕ್ಷಕರಿಗೆ ವೇತನ ಸೇರಿದಂತೆ ಎಲ್ಲ ವೆಚ್ಚವನ್ನೂ ಸಂಸ್ಥೆಗಳೇ ಭರಿಸಬೇಕಿದೆ. ಹಾಗಾಗಿ, ಶುಲ್ಕ ಹೆಚ್ಚಳ ಅನಿವಾರ್ಯ. ಎಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕು ಎನ್ನುವ ಕುರಿತು ಆಯಾ ಸಂಸ್ಥೆಗಳೇ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಲಾಗಿತ್ತು. ಕೆಲ ಸಂಸ್ಥೆಗಳು ಕಳೆದ ವರ್ಷವೇ ಶುಲ್ಕ ಹೆಚ್ಚಳ ಮಾಡಿವೆ. ಇನ್ನೂ ಕೆಲವು ಸಂಸ್ಥೆಗಳು ಈ ವರ್ಷ ಮಾಡಿವೆ’ ಎನ್ನುತ್ತಾರೆ ಕುಸ್ಮಾ ಗೌರವ ಕಾರ್ಯದರ್ಶಿ ಎ.ಮರಿಯಪ್ಪ. 

‘ಮಗಳು ಆರನೇ ತರಗತಿಯಲ್ಲಿ ಓದುತ್ತಿದ್ದಾಳೆ. ₹40 ಸಾವಿರ ಇದ್ದ ಶುಲ್ಕವನ್ನು ₹64 ಸಾವಿರಕ್ಕೆ ಹೆಚ್ಚಿಸಿದ್ದಾರೆ. ಆ ಶಾಲೆಯಿಂದ ಬಿಡಿಸಿ ಕಡಿಮೆ ಶುಲ್ಕದ ಶಾಲೆಗೆ ಸೇರಿಸಲು ನಿರ್ಧರಿಸಿದ್ದೇವೆ’ ಎಂದು ಬ್ಯಾಟರಾಯನಪುರದ ಖಾಸಗಿ ಉದ್ಯೋಗಿ ಗಾಯತ್ರಿ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT