ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಪರ ಘೋಷಣೆ: ಖಚಿತ ವರದಿ ಆಧರಿಸಿ ಆರೋಪಿಗಳ ಬಂಧನ - ಜಿ.ಪರಮೇಶ್ವರ

Published 5 ಮಾರ್ಚ್ 2024, 8:32 IST
Last Updated 5 ಮಾರ್ಚ್ 2024, 8:32 IST
ಅಕ್ಷರ ಗಾತ್ರ

ಬೆಂಗಳೂರು: 'ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಅಧಿಕೃತ ಎಫ್‌ಎಸ್‌ಎಲ್‌ ವರದಿಯನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ' ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸದಾಶಿವನಗರದ ತಮ್ಮ‌ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಎಫ್‌ಎಸ್‌ಎಲ್ ವರದಿ ಬಂದ ನಂತರ‌ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಸದನದಲ್ಲಿ ಉತ್ತರಿಸಿದ್ದೆ. ವರದಿಯಲ್ಲಿ ಖಚಿತವಾದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ' ಎಂದರು.

'ಖಾಸಗಿಯವರು ಕೂಡಾ ಎಫ್‌ಎಸ್‌ಎಲ್ ವರದಿ ಬಿಡುಗಡೆ ಮಾಡಿದ್ದರು. ನಾವು ಅದನ್ನು ಅಧಿಕೃತ ಎಂದು ಪರಿಗಣಿಸುವುದಿಲ್ಲ. ನಾವು ಅವರಿಗೆ ಯಾವುದೇ ರೀತಿಯ ಮಾನ್ಯತೆ ನೀಡಿಲ್ಲ. ನಮ್ಮ ಇಲಾಖೆಯ ಎಫ್‌ಎಸ್‌ಎಲ್ ವರದಿಯಲ್ಲಿ ಆರೋಪಿಗಳು ಪಾಕಿಸ್ತಾನ ಪರ‌ ಘೋಷಣೆ ಕೂಗಿರುವುದು ಖಚಿತವಾಗಿದೆ. ಈ ಆಧಾರದ ಮೇಲೆ‌ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿಯಲಿದ್ದು, ತನಿಖೆಯಿಂದ ಬರುವ ಮಾಹಿತಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ' ಎಂದು ಹೇಳಿದರು.

ಬಿಜೆಪಿಯವರು ವರದಿ ಬಹಿರಂಗಪಡಿಸುವಂತೆ ಆಗ್ರಹಿಸುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ವಿರೋಧ ಪಕ್ಷದವರು ದಿನಕ್ಕೊಂದು ರೀತಿ ಹೇಳಿಕೆ ನೀಡುತ್ತಾರೆ. ಸಾಕ್ಷ್ಯ ಇಲ್ಲದೆ ಯಾರನ್ನು ಬಂಧಿಸಲಾಗುವುದಿಲ್ಲ. ವರದಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನೇನು ಬಹಿರಂಗಪಡಿಸಬೇಕು. ಪ್ರಕರಣವನ್ನು ಮುಚ್ಚಿಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದ ಬಿಜೆಪಿಯವರು ಈಗ ಏನು ಹೇಳುತ್ತಾರೆ' ಎಂದು ಮರುಪ್ರಶ್ನಿಸಿದರು.

'ಮಂಡ್ಯದಲ್ಲಿ 2022 ನವೆಂಬರ್‌ನಲ್ಲಿ ಬಿಜೆಪಿಯ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಆಗ ಅಧಿಕಾರದಲ್ಲಿದ್ದ ಬಿಜೆಪಿಯವರು ಯಾಕೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಹಳೆಯ ಪ್ರಕರಣ ಈಗ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಮಂಡ್ಯ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಮೇಲೆ ಪ್ರಕರಣ ಒಂದೇ ಅಲ್ಲವೇ. ಕಾನೂನು ಎಲ್ಲರಿಗೂ ಒಂದೇ. ಯಾವ ಸಂದರ್ಭದಲ್ಲಿ ಕೂಗಿದ್ದಾರೆ ಎಂಬುದು ತನಿಖೆಯಿಂದ ಹೊರಬರಲಿದೆ’ ಎಂದು ತಿಳಿಸಿದರು.

'ಯುಎಪಿಎ ಪ್ರಕರಣಗಳು ನೇರವಾಗಿ ಕೇಂದ್ರದ ತನಿಖಾ ಸಂಸ್ಥೆಗಳಾದ ಎನ್‌ಐಎ ಅಥವಾ ಸಿಬಿಐಗೆ ಬರುತ್ತದೆ. ಹೀಗಾಗಿ ಎನ್‌ಐಎ ಅವರು ಸುಮೋಟೋ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ಪೊಲೀಸರು ಸಹ ತನಿಖೆ ಮುಂದುವರಿಸುತ್ತಾರೆ. ನಮ್ಮಲ್ಲಿರುವ ಮಾಹಿತಿಯನ್ನು ಎನ್‌ಐಎಗೆ ಹಂಚಿ ಕೊಳ್ಳಲಾಗುವುದು. ಪ್ರಕರಣ ನಡೆದ ಮರುದಿನ ಸಿಸಿಬಿ ಪೊಲೀಸರು ಸಹ ಜೈಲಿನಲ್ಲಿರುವರನ್ನು ವಿಚಾರಣೆ ನಡೆಸಿದ್ದರು. ಯಾರೇ ತನಿಖೆ ನಡೆಸಿದರು ಒಟ್ಟಾರೆಯಾಗಿ ಆರೋಪಿಯನ್ನು ಪತ್ತೆ ಹಚ್ಚುವುದಷ್ಟೆ ಮುಖ್ಯ’ ಎಂದು ತಿಳಿಸಿದರು.

ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ ಆಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರಕ್ಕೆ ಯಾಕೆ ಮುಜುಗರ ಆಗುತ್ತದೆ. ಸರ್ಕಾರ ಯಾರಿಗಾದರೂ ಪ್ರಾಯೋಜಕತ್ವ ನೀಡಿದೆಯೇ? ಅವನ್ಯಾರೋ ಕೂಗಿದ್ದಾನೆ ಅನ್ನುವುದನ್ನು ಖಚಿತಪಡಿಸಿಕೊಳ್ಳಲು ಕಾಯುತ್ತಿದ್ದೆವು. ಖಚಿತವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಸರ್ಕಾರಕ್ಕೆ ಮುಜುಗರ ಆಗುವಂಥದ್ದು ಏನೂ ಮಾಡಿಲ್ಲ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಂಡು ಒಳ್ಳೆ ಕೆಲಸ ಮಾಡಿದೆ. ಇದಕ್ಕೆ ಸರ್ಕಾರವನ್ನು ಪ್ರಶಂಶಿಸಬೇಕು' ಎಂದು ಹೇಳಿದರು.

'ವಿಧಾನಸೌಧದ ಭದ್ರತಾ ವೈಫಲ್ಯ ಇರುವುದು ಕಂಡು ಬಂದರೆ ಇಲಾಖೆಯ ಅಧಿಕಾರಿಗಳು ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತಾರೆ. ಯಾರನ್ನೋ ಕೇಳಿ ಕೆಲಸ ಮಾಡುವ ಅಗತ್ಯತೆ ಇಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT