ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಮೇಲಿನ ಹಿಂಸೆ ನಿಷೇಧ ಮಸೂದೆ ಮಂಡನೆ

Published 11 ಡಿಸೆಂಬರ್ 2023, 16:36 IST
Last Updated 11 ಡಿಸೆಂಬರ್ 2023, 16:36 IST
ಅಕ್ಷರ ಗಾತ್ರ

ವಿಧಾನಸಭೆ: ವಕೀಲರ ಮೇಲೆ ಹಲ್ಲೆ ಅಥವಾ ಹಿಂಸಾಚಾರ ನಡೆಸುವವರಿಗೆ ಆರು ತಿಂಗಳಿನಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 1 ಲಕ್ಷದವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ– 2023’ ಅನ್ನು ಸೋಮವಾರ ಸದನದಲ್ಲಿ ಮಂಡಿಸಲಾಯಿತು.

ವಕೀಲರು ತಮ್ಮ ಕರ್ತವ್ಯ ನಿರ್ವಹಣೆ ವಿಷಯದಲ್ಲಿ ಬೆದರಿಕೆಗಳು ಬಂದಾಗ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದಾಗ, ಅವರ ಮೇಲೆ ಹಲ್ಲೆ ನಡೆಯುವಂತಹ ಸಂದರ್ಭಗಳಲ್ಲಿ ರಕ್ಷಿಸುವುದಕ್ಕಾಗಿ ಈ ಮಸೂದೆಯನ್ನು ರೂಪಿಸಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಮಸೂದೆಯನ್ನು ಮಂಡಿಸಿದರು.

ಈ ಮಸೂದೆಯ ಅಡಿಯಲ್ಲಿ ದಾಖಲಿಸುವ ಪ್ರಕರಣಗಳ ವಿಚಾರಣೆಯನ್ನು ಪ್ರಥಮ ದರ್ಜೆ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅಥವಾ ಅದಕ್ಕಿಂತ ಹೆಚ್ಚಿನ ದರ್ಜೆಯ ನ್ಯಾಯಾಲಯಗಳಲ್ಲೇ ನಡೆಸಬೇಕು. ಯಾವುದೇ ಪ್ರಕರಣಗಳಲ್ಲಿ ವಕೀಲರನ್ನು ಬಂಧಿಸಿದಾಗ 24 ಗಂಟೆಗಳ ಒಳಗಾಗಿ ಆ ವಕೀಲನು ಸದಸ್ಯನಾಗಿರುವ ವಕೀಲರ ಸಂಘದ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ಬಂಧನದ ವಿಷಯವನ್ನು ಪೊಲೀಸರು ತಿಳಿಸುವುದನ್ನು ಈ ಮಸೂದೆಯು ಕಡ್ಡಾಯಗೊಳಿಸುತ್ತದೆ.

ಎಸ್‌ಸಿಎಸ್‌ಪಿ, ಟಿಎಸ್‌ಪಿ: ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಅನುದಾನವನ್ನು ‘ಪರಿಭಾವಿತ ವೆಚ್ಚ’ ಎಂಬ ಪರಿಕಲ್ಪನೆಯಡಿ ಬೇರೆ ಉದ್ದೇಶಕ್ಕೆ ವರ್ಗಾವಣೆ ಮಾಡುವುದಕ್ಕೆ ಅವಕಾಶ ನೀಡುವ ಸೆಕ್ಷನ್‌ 7–ಡಿ ಅನ್ನು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯಿಂದ ಕೈಬಿಡುವ ಪ್ರಸ್ತಾವವುಳ್ಳ ತಿದ್ದುಪಡಿ ಮಸೂದೆಯನ್ನೂ ಸದನದಲ್ಲಿ ಮಂಡಿಸಲಾಯಿತು.

ಸೆಕ್ಷನ್‌ 7–ಡಿ ರದ್ದುಗೊಳಿಸುವುದರ ಜತೆ ಉಪ ಮುಖ್ಯಮಂತ್ರಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರನ್ನು ಎಸ್‌.ಸಿ ಮತ್ತು ಎಸ್‌.ಟಿ ರಾಜ್ಯ ಅಭಿವೃದ್ಧಿ ಪರಿಷತ್‌ನ ಪದನಿಮಿತ್ತ ಸದಸ್ಯರನ್ನಾಗಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರನ್ನು ಟಿಎಸ್‌ಪಿ ನೋಡಲ್‌ ಏಜೆನ್ಸಿಯ ಉಪಾಧ್ಯಕ್ಷರನ್ನಾಗಿ ನೇಮಿಸಲು ಅವಕಾಶ ಕಲ್ಪಿಸುವ ತಿದ್ದು‍ಪಡಿಗಳೂ ಈ ಮಸೂದೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT