ಬೆಂಗಳೂರು: ಅನುಮತಿಯಿಲ್ಲದೇ ಪ್ರತಿಭಟಿಸಿದ ಆರೋಪದಡಿ ಸಂಸದ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಸೇರಿದಂತೆ ಬಿಜೆಪಿಯ 28 ಮುಖಂಡರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನವಿರೋಧಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿ 2023ರ ಜೂನ್ 20ರಂದು ಬಿಜೆಪಿ ಪ್ರತಿಭಟಿಸಿತ್ತು. ರೇಸ್‌ಕೋರ್ಸ್ ರಸ್ತೆಯ ಮೌರ್ಯ ವೃತ್ತದಲ್ಲಿ ನಡೆದಿದ್ದ ಪ್ರತಿಭಟನೆ ನೇತೃತ್ವವನ್ನು ಬಸವರಾಜ ಬೊಮ್ಮಾಯಿ ವಹಿಸಿದ್ದರು. ಪ್ರತಿಭಟನೆಗೆ ಅನುಮತಿ ಇರಲಿಲ್ಲ.
ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಸಂಸದ ಪಿ.ಸಿ. ಮೋಹನ್, ಶಾಸಕರಾದ ಎಂ.ಕೃಷ್ಣಪ್ಪ, ಮುನಿರಾಜು, ಮೇಲ್ಮನೆಯ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಸೇರಿ 28 ಮುಖಂಡರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಪೊಲೀಸ್ ಇಲಾಖೆಯ ಅನುಮತಿಯಿಲ್ಲದೇ ಪ್ರತಿಭಟಿಸುವವರ ವಿರುದ್ಧ ಕ್ರಮಕ್ಕೆ ಆದೇಶಿಸಲು ಕೋರಿ ವಸಂತನಗರದ ನಿವಾಸಿ ಅನಿಲ್ ಕುಮಾರ್ ಮುಳ್ಳೂರ, ನಗರದ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ನಿರ್ದೇಶನದಂತೆ ಎಫ್‌ಐಆರ್ ದಾಖಲಿಸಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.