ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಭ್ಯರ್ಥಿಯ ಕ್ರಿಮಿನಲ್‌ ಕೇಸ್‌ ಮಾಹಿತಿಗೆ ಪ್ರತ್ಯೇಕ ನಮೂನೆ ಒದಗಿಸಿ: ಹೈಕೋರ್ಟ್‌

Published 28 ನವೆಂಬರ್ 2023, 23:01 IST
Last Updated 28 ನವೆಂಬರ್ 2023, 23:01 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಥಳೀಯ ಸಂಸ್ಥೆಗಳಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳ ಕ್ರಿಮಿನಲ್ ಪ್ರಕರಣಗಳ ಉಲ್ಲೇಖಕ್ಕೆ ಪ್ರತ್ಯೇಕ ನಮೂನೆಯನ್ನು ಒದಗಿಸಬೇಕು‘ ಎಂದು ಹೈಕೋರ್ಟ್‌ ಹೇಳಿದೆ.

ಈ ಸಂಬಂಧ ಸಲ್ಲಿಸಲಾಗಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಹಿರಂಗಪಡಿಸಬೇಕು ಎಂಬ ಸುಪ್ರೀಂಕೋರ್ಟ್ ನಿರ್ದೇಶನ ಪಾಲನೆಯ ನಿಟ್ಟಿನಲ್ಲಿ ಅಭ್ಯರ್ಥಿಗಳ ಕ್ರಿಮಿನಲ್ ಕೇಸ್‌ಗಳ ವಿವರಗಳನ್ನು ನೀಡಲು ಪ್ರತ್ಯೇಕ ನಮೂನೆ ಒದಗಿಸಬೇಕು‘ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.

‘ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಅವರ ವಿರುದ್ಧ ಯಾವುದಾದರೂ ಕ್ರಿಮಿನಲ್ ಕೇಸ್ ಬಾಕಿ ಇದ್ದರೆ ಅದರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಬೇಕು. ಆ ಮಾಹಿತಿಯನ್ನು ಟಿಕೆಟ್ ನೀಡುವ ರಾಜಕೀಯ ಪಕ್ಷಕ್ಕೂ ಒದಗಿಸಬೇಕು. ಅಯಾ ಪಕ್ಷದ ವೆಬ್‌ಸೈಟ್‌ನಲ್ಲೂ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ತಿಳಿಸಬೇಕು. ಪತ್ರಿಕೆಗಳಲ್ಲೂ ಅವರ ವಿವರ ಪ್ರಕಟಿಸಬೇಕು‘ ಎಂದು ನ್ಯಾಯಪೀಠ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಪ್ರಕರಣವೇನು?: ಹೊಸನಗರ ತಾಲ್ಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೆ.ವಿ.ಅಶೋಕ್ ಆಯ್ಕೆಯಾಗಿದ್ದರು. ಆದರೆ ಅವರು ತಮ್ಮ ಕ್ರಿಮಿನಲ್ ಹಿನ್ನೆಲೆ ಬಹಿರಂಗಪಡಿಸದ ಕಾರಣ ರಾಜ್ಯ ಚುನಾವಣಾ ಆಯೋಗ ಅವರ ಆಯ್ಕೆಯನ್ನು ರದ್ದುಗೊಳಿಸಿತ್ತು. ಈ ಆದೇಶವನ್ನು ಸಿವಿಲ್ ಕೋರ್ಟ್ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿದ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ಅಸಿಂಧು ಆದೇಶವನ್ನು ಊರ್ಜಿತಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಅಶೋಕ್ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT