ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ರಕ್ತಚಂದನ ದೋಚಿದ್ದವನಿಗೆ 27ನೇ ರ‍್ಯಾಂಕ್

545 ಪಿಎಸ್ಐ ನೇಮಕಾತಿ ಅಕ್ರಮ l ಪೊಲೀಸರು ಸೇರಿ 12 ಅಭ್ಯರ್ಥಿಗಳ ಬಂಧನ l ಒಎಂಆರ್‌ ತಿದ್ದಲು ಹಣ
Last Updated 1 ಮೇ 2022, 19:42 IST
ಅಕ್ಷರ ಗಾತ್ರ

ಬೆಂಗಳೂರು: ಹೊಸಕೋಟೆ ಬಳಿ ‘ರಕ್ತ ಚಂದನ’ ದೋಚಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದು ಅಮಾನತಾಗಿದ್ದ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯ ಹೆಡ್‌ ಕಾನ್‌ಸ್ಟೆಬಲ್‌ ಮಮತೇಶ್‌ ಗೌಡ, 545 ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಎಸಗಿ 27ನೇ ರ‍್ಯಾಂಕ್ (ಸೇವಾನಿರತ ಅಭ್ಯರ್ಥಿ) ಪಡೆದಿರುವುದನ್ನು ಸಿಐಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಒಎಂಆರ್ ಪ್ರತಿ ತಿದ್ದಿ ಹಾಗೂ ಬ್ಲೂಟೂತ್ ಬಳಸಿ ಅಕ್ರಮ ಎಸಗಿದ್ದ ಆರೋಪದಡಿ 22 ಅಭ್ಯರ್ಥಿಗಳ ವಿರುದ್ಧ ನಗರದ ಹೈಗ್ರೌಂಡ್ಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಹೆಡ್‌ ಕಾನ್‌ಸ್ಟೆಬಲ್ ಮಮತೇಶ್‌ ಗೌಡ, ಕಾನ್‌ಸ್ಟೆಬಲ್‌ಗಳಾದ ಗಜೇಂದ್ರ, ಯಶವಂತ ದೀಪ, ಸಾಮಾನ್ಯ ಅಭ್ಯರ್ಥಿಗಳಾದ ಮಧು, ರಘುವೀರ್, ನಾಗರಾಜ್, ಮೋಹನ್‌ಕುಮಾರ್, ನಾರಾಯಣಸ್ವಾಮಿ, ಪವನ್‌ಕುಮಾರ್ ಸೇರಿದಂತೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ 10 ಅಭ್ಯರ್ಥಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

‘‍ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಕಲಬುರಗಿ ಚೌಕ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಹೊಸದಾಗಿ ದಾಖಲಾಗಿರುವ ಪ್ರಕರಣದ ತನಿಖೆಯನ್ನೂ ಸಿಐಡಿ ಅಧಿಕಾರಿಗಳು ಮುಂದುವರಿಸಲಿದ್ದಾರೆ. ಪ್ರಕರಣದ ತನಿಖೆಯನ್ನು ಹಸ್ತಾಂತರಿಸುವ ಸಂಬಂಧ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಲಕ್ಷಾಂತರ ರೂಪಾಯಿ ನೀಡಿರುವ ಮಮತೇಶ್‌: ‘ಬಂಧಿತ ಹೆಡ್‌ ಕಾನ್‌ಸ್ಟೆಬಲ್ ಮಮತೇಶ್‌ ಗೌಡ, ಬೆಂಗಳೂರು ಸಿಸಿಬಿ ವಿಭಾಗದಲ್ಲಿ ಹೆಡ್‌ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ. 2021 ಡಿಸೆಂಬರ್‌ನಲ್ಲಿ ಆತನನ್ನು ಮಹದೇವಪುರ ಠಾಣೆಗೆ ವರ್ಗಾಯಿಸಲಾಗಿತ್ತು. ಅದಾದ ನಂತರವೂ, ಸಿಸಿಬಿ ವಿಭಾಗದಲ್ಲೇ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ’ ಎಂದು ಸಿಐಡಿ ಮೂಲಗಳು
ಹೇಳಿವೆ.

‘ಆಂಧ್ರಪ್ರದೇಶದಿಂದ ರಕ್ತ ಚಂದನದ ತುಂಡುಗಳನ್ನು ನಗರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಮಾಹಿತಿ ಮಮತೇಶ್‌ಗೆ ಗೊತ್ತಾಗಿತ್ತು. ಸಹೋದ್ಯೋಗಿ ಮಂಜುನಾಥ್‌ ಜೊತೆ ಸೇರಿ ರಕ್ತಚಂದನ ಸುಲಿಗೆ ಮಾಡಲು ಸಂಚು ರೂಪಿಸಿದ್ದ. 2021ರ ಡಿಸೆಂಬರ್ 15ರಂದು ಹೊಸಕೋಟೆ ಸಂತೇಗೇಟ್ ಬಳಿ ವಾಹನ ಅಡ್ಡಗಟ್ಟಿ, ಚಾಲಕನಿಗೆ ಕೈಕೋಳ ತೋರಿಸಿದ್ದ. ನಂತರ, ₹ 13 ಲಕ್ಷ ಮೌಲ್ಯದ ರಕ್ತ ಚಂದನದ ತುಂಡುಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಹೊಸಕೋಟೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಕಮಿಷನರ್ ಕಮಲ್ ಪಂತ್ ಅವರಿಗೆ ವರದಿ ನೀಡಿದ್ದರು. ಅದರನ್ವಯ ಮಮತೇಶ್‌ ಗೌಡ ಹಾಗೂ ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.’

'ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಮಮತೇಶ್‌, ಬೆಂಗಳೂರಿನ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದು 27ನೇ ರ‍್ಯಾಂಕ್ ಪಡೆದಿದ್ದ. ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳನ್ನು ವಿಚಾರಣೆಗೆ ಕರೆಸಲಾಗಿತ್ತು. ಮಮತೇಶ್‌ ಗೌಡನ ಒಎಂಆರ್ ಕಾರ್ಬನ್‌ ಪ್ರತಿ ಪರಿಶೀಲಿಸಿದಾಗ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿವೆ. ಪತ್ರಿಕೆ –1ಕ್ಕೆ 22 ಅಂಕ ಹಾಗೂ ಪತ್ರಿಕೆ –2ಕ್ಕೆ 103.5 ಅಂಕ ಸೇರಿ ಒಟ್ಟು 125.5 ಅಂಕ ಪಡೆದು ಆಯ್ಕೆಯಾಗಿದ್ದ. ಅಕ್ರಮ ಎಸಗಲು ಅನುಕೂಲ ಕಲ್ಪಿಸಲು ಏಜೆಂಟರೊಬ್ಬರಿಗೆ ಲಕ್ಷಾಂತರ ರೂಪಾಯಿ ನೀಡಿದ್ದನೆಂಬ ಮಾಹಿತಿ ಇದೆ’ ಎಂದೂ ಸಿಐಡಿ ಮೂಲಗಳು ತಿಳಿಸಿವೆ.

ಭದ್ರತಾ ವಿಭಾಗದ ಕಾನ್‌ಸ್ಟೆಬಲ್‌ಗೆ 3ನೇ ರ‍್ಯಾಂಕ್: ‘ಪೊಲೀಸ್ ಭದ್ರತಾ ವಿಭಾಗದಲ್ಲಿ ಕಾನ್‌ಸ್ಟೆಬಲ್ ಆಗಿದ್ದ ಯಶವಂತ ದೀಪ, ಸೇವಾನಿರತ ಅಭ್ಯರ್ಥಿ ಮೀಸಲಾತಿಯಡಿ 3ನೇ ರ‍್ಯಾಂಕ್ ಪಡೆದು ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದ. ಈತನ ಒಎಂಆರ್‌ ಕಾರ್ಬನ್ ಪ್ರತಿ ಪರಿಶೀಲಿಸಿದಾಗ, ಅಕ್ರಮ ಎಸಗಿದ್ದು ಗೊತ್ತಾಗಿದೆ. ಈತನನ್ನೂ ಬಂಧಿಸಿ, ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

’ಒಎಂಆರ್‌ ಪ್ರತಿ ತಿದ್ದುಪಡಿ ಮಾಡಿರುವ ಯಶವಂತ, ಪತ್ರಿಕೆ 2ರಲ್ಲಿ (ಸಾಮಾನ್ಯ ಅಧ್ಯಯನ) 118.125 ಅಂಕ ಪಡೆದು ಪಿಎಸ್ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿದ್ದ’ ಎಂದೂ ತಿಳಿಸಿದರು.

ಸಿಐಡಿ ವಿಚಾರಣೆಗೆ ಬಂದಾಗ ವಶಕ್ಕೆ

12 ಅಭ್ಯರ್ಥಿಗಳು ವಿಚಾರಣೆಗೆಂದು ಕಾರ್ಲ್‌ಟನ್‌ ಕಟ್ಟಡದಲ್ಲಿರುವ ಸಿಐಡಿ ಕಚೇರಿಗೆ ಶನಿವಾರ ಬಂದಿದ್ದರು. ಒಎಂಆರ್ ಪ್ರತಿಯನ್ನು ವ್ಯತ್ಯಾಸ ಕಂಡುಬರುತ್ತಿದ್ದಂತೆ ಸಿಐಡಿ ಅಧಿಕಾರಿಗಳೇ ಅವರನ್ನು ವಶಕ್ಕೆ ಪಡೆದು ಹೈಗ್ರೌಂಡ್ಸ್ ಠಾಣೆಗೆ ಒಪ್ಪಿಸಿದ್ದರೆಂಬುದು ಗೊತ್ತಾಗಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ 545 ಅಭ್ಯರ್ಥಿಗಳ ಪೈಕಿ, ಸುಮಾರು 400 ಅಭ್ಯರ್ಥಿಗಳು ಮಾತ್ರ ವಿಚಾರಣೆಗೆ ಹಾಜರಾಗಿದ್ದಾರೆ. ಗೈರಾಗಿರುವ ಅಭ್ಯರ್ಥಿಗಳಿಗೂ ನೋಟಿಸ್ ನೀಡಿರುವ ಸಿಐಡಿ ಅಧಿಕಾರಿಗಳು, ‘ತ್ವರಿತವಾಗಿ ವಿಚಾರಣೆಗೆ ಬರಬೇಕು. ಇಲ್ಲದಿದ್ದರೆ, ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾನ್‌ಸ್ಟೆಬಲ್ ಗಜೇಂದ್ರನಿಗೆ ‘ಮೊದಲ ರ‍್ಯಾಂಕ್’

‘ಬಂಧಿತ ಗಜೇಂದ್ರ, ಅಕ್ರಮ ಎಸಗಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದಾನೆ. ಈತ, ಸೈಬರ್ ಠಾಣೆಯೊಂದರಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಸೇವಾನಿರತ ಅಭ್ಯರ್ಥಿ ಮೀಸಲಾತಿಯಡಿ ಗಜೇಂದ್ರ ಅರ್ಜಿ ಸಲ್ಲಿಸಿದ್ದ. ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದಿದ್ದ ಈತ, ಪತ್ರಿಕೆ – 2ರ (ಸಾಮಾನ್ಯ ಅಧ್ಯಯನ) ಒಎಂಆರ್‌ ಪ್ರತಿ ತಿದ್ದುಪಡಿ ಮಾಡಿ 126 ಅಂಕ ಗಳಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಆದರೆ, ಪ್ರತಿ ತಿದ್ದುಪಡಿ ಮಾಡಿದ್ದು ಎಲ್ಲಿ? ಹಾಗೂ ಯಾರೆಲ್ಲ ಸಹಕಾರ ನೀಡಿದ್ದರು? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದೂ ಮೂಲಗಳು ತಿಳಿಸಿವೆ.

ಮತ್ತಷ್ಟು ತಂಡಗಳ ರಚನೆ

’ಪಿಎಸ್‌ಐ ಪರೀಕ್ಷೆ ಅಕ್ರಮ ಸಂಬಂಧ ದಿನಕ್ಕೊಂದು ಮಾಹಿತಿಗಳು ಹೊರಬೀಳುತ್ತಿದ್ದು, ಪ್ರಕರಣದ ತನಿಖೆಗೆಂದು ಸಿಐಡಿ ಅಧಿಕಾರಿಗಳ ನೇತೃತ್ವದಲ್ಲಿ ಮತ್ತಷ್ಟು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಕಲಬುರಗಿ ಚೌಕ್ ಠಾಣೆ ಹಾಗೂ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪ್ರಕರಣಗಳನ್ನು ಪ್ರತ್ಯೇಕ ತಂಡಗಳು ತನಿಖೆ ಮಾಡಲಿವೆ. ಪರಸ್ಪರ ಆರೋಪಿಗಳ ಭಾಗಿ ಬಗ್ಗೆಯೂ ಮಾಹಿತಿ ಕಲೆ ಹಾಕಲಿವೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT