ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PSI ನೇಮಕಾತಿ ಅಕ್ರಮ: ಸ್ಟ್ರಾಂಗ್‌ ರೂಮ್‌ನಲ್ಲಿಯೇ OMR ಶೀಟ್ ತಿದ್ದುಪಡಿ! ಆಯೋಗ

ಪಿಎಸ್‌ಐ ಅಕ್ರಮ–₹30 ಲಕ್ಷದಿಂದ 80 ಲಕ್ಷದವರೆಗೆ ಲಂಚ* ನ್ಯಾ. ಬಿ. ವೀರಪ್ಪ ವರದಿ ಆಧಾರದ ಟಿಪ್ಪಣಿ
Published 21 ಫೆಬ್ರುವರಿ 2024, 0:29 IST
Last Updated 21 ಫೆಬ್ರುವರಿ 2024, 0:29 IST
ಅಕ್ಷರ ಗಾತ್ರ

ಬೆಂಗಳೂರು: ‘ಪೊಲೀಸ್‌ ಸಬ್ ಇನ್‌ಸ್ಪೆಕ್ಟರ್‌ (ಪಿಎಸ್‌ಐ) 545 ಹುದ್ದೆಗಳ ನೇಮಕಾತಿಯಲ್ಲಿ ಒಎಂಆರ್ ಉತ್ತರ ಪತ್ರಿಕೆಗಳನ್ನು ಸಿಐಡಿ ಕಚೇರಿಯ ಭದ್ರತಾ ಕೊಠಡಿಯಲ್ಲಿಯೇ (ಸ್ಟ್ರಾಂಗ್‌ ರೂಮ್‌) ತಿದ್ದಿರುವುದು ಸಾಕ್ಷಿಗಳಿಂದ ದೃಢಪಟ್ಟಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ಏಕ ಸದಸ್ಯ ತನಿಖಾ ಆಯೋಗ ಹೇಳಿದೆ.

‘ಸಿಐಡಿ ಕಚೇರಿಯ ಅಧಿಕಾರಿ, ಸಿಬ್ಬಂದಿ ಕೆಲವು ಅಭ್ಯರ್ಥಿಗಳಿಂದ ₹30 ಲಕ್ಷದಿಂದ ₹80 ಲಕ್ಷದವರೆಗೆ ಹಣ ಪಡೆದು, ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಬಳಸಿದ ಪೆನ್ನು ಮತ್ತು ಒಎಂಆರ್‌ ಪ್ರತಿ ಪಡೆದುಕೊಂಡು, ಭದ್ರತಾ ಕೊಠಡಿಯಲ್ಲಿ ಇರಿಸಿದ್ದ ಮೂಲ ಒಎಂಆರ್‌ ಶೀಟ್‌ಗಳನ್ನು ತಿದ್ದಿದ್ದಾರೆ’ ಎಂದೂ ಆಯೋಗದ ವರದಿ ಉಲ್ಲೇಖಿಸಿದೆ.

ಆಯೋಗದ ವರದಿಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ಸರ್ಕಾರ ತಯಾರಿ ನಡೆಸಿದೆ. ಅದಕ್ಕೆ ಮೊದಲು ಸಚಿವ ಸಂಪುಟ ಸಭೆಯ ಅನುಮೋದನೆಗಾಗಿ ವರದಿಯ ಮುಖ್ಯಾಂಶಗಳ ಟಿಪ್ಪಣಿಯನ್ನು ಗೃಹ ಇಲಾಖೆ ಸಿದ್ಧಪಡಿಸಿದೆ. ಈ ರಹಸ್ಯ ಟಿಪ್ಪಣಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

‘ಪಿಎಸ್‌ಐ ನೇಮಕಾತಿಗೆ ಎಡಿಜಿಪಿ (ನೇಮಕಾತಿ) ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು. ಆ ಸಮಿತಿಯಲ್ಲಿ ಡಿಜಿ ನಾಮನಿರ್ದೇಶನ ಮಾಡಿದ ಎಡಿಜಿಪಿ ಮತ್ತು ಐಜಿಪಿ, ಅಧ್ಯಕ್ಷರು ನಾಮನಿರ್ದೇಶನ ಮಾಡುವ ರೀಡರ್‌ (ಸಹ ಪ್ರಾಧ್ಯಾಪಕರ ದರ್ಜೆಯ ಸಾಮಾಜಿಕ ಮನೋವಿಜ್ಞಾನ ತಜ್ಞರು) ಸೇರಿದಂತೆ ಐವರು ಸದಸ್ಯರಿದ್ದರೂ, ನೇಮಕಾತಿಯ ಸಂಪೂರ್ಣ ಪ್ರಕ್ರಿಯೆಯನ್ನು ಎಡಿಜಿಪಿ (ನೇಮಕಾತಿ) ಕೈಗೊಂಡಿದ್ದಾರೆ. ಒಎಂಆರ್‌ ಶೀಟ್‌ಗಳನ್ನು ತಿದ್ದಿರುವುದು ವಿಧಿ ವಿಜ್ಞಾನ ಪರೀಕ್ಷೆಯಿಂದ ದೃಢಪಟ್ಟಿದೆ. ಒಂದು ಬಾರಿ ಮಾತ್ರ ಬಳಸಬೇಕಾದ ಬೀಗಗಳ ಬಳಕೆಯಲ್ಲಿಯೂ ದುರುಪಯೋಗ ಆಗಿದೆ’ ಎಂದು ವರದಿಯಲ್ಲಿದೆ.

‘ಕಲಬುರಗಿಯ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸಹಯೋಗದಲ್ಲಿ ಒಎಂಆರ್‌ ಉತ್ತರ ಪತ್ರಿಕೆಗಳನ್ನು ಸಂವೀಕ್ಷಕರು ತಿದ್ದಿರುವುದು, ಈ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಬ್ಲೂಟೂತ್‌ ಉಪಕರಣ ಬಳಸಿರುವುದು ದೃಢಪಟ್ಟಿದೆ. ಈ ಎರಡೂ ದುಷ್ಕೃತ್ಯಗಳ ರೂವಾರಿ ಆರ್‌.ಡಿ. ಪಾಟೀಲ ಆಗಿದ್ದು, ಶಾಲಾ ಆಡಳಿತ ಮಂಡಳಿಯ ಸಹಯೋಗದಲ್ಲಿ ಕೆಲವು ಅಭ್ಯರ್ಥಿಗಳ ಒಎಂಆರ್‌  ಉತ್ತರ ಪತ್ರಿಕೆಗಳನ್ನು ಸಿಸಿಟಿವಿ ಕ್ಯಾಮೆರಾ ಕವರೇಜ್‌ನ ಹೊರಗೆ ತಿದ್ದಿರುವುದೂ ದೃಢಪಟ್ಟಿದೆ. ಕೆಲವು ಅಭ್ಯರ್ಥಿಗಳು ಮತ್ತು ಅವರ ಸ್ನೇಹಿತರು ಹಣ ನೀಡಿ ಹೊಸ ಸಿಮ್‌ ಕಾರ್ಡ್‌ಗಳನ್ನು ಖರೀದಿಸಿ ಬ್ಲೂಟೂತ್‌ ಉಪಕರಣಗಳ ಮೂಲಕ ಆರ್‌.ಡಿ. ಪಾಟೀಲರ ತಂಡ ನೀಡಿದ ಉತ್ತರಗಳನ್ನು ಭರ್ತಿ ಮಾಡಿ ಆಯ್ಕೆಯಾಗಿದ್ದಾರೆ. ಶಾಲೆಯ ಆಡಳಿತ ಮಂಡಳಿಯ ದಿವ್ಯಾ ಹಾಗರಗಿ, ರಾಜೇಶ್‌ ಹಾಗರಗಿ, ಪ್ರಾಂಶುಪಾಲರಾದ ಕಾಶಿನಾಥ ಚಿಲ್ಲಾ, ಸಂವೀಕ್ಷಕರಾದ ಸಾವಿತ್ರಿ ಕಾಬಾ, ಸುಮಾ ಕಂಬಳಿಮಠ, ಸಿದ್ದಮ್ಮ ಬಿರಾದಾರ, ಅರ್ಚನಾ ಹೊನಗೇರಿ ಮತ್ತು ಸುನಂದಾ ಅಲಿಯಸ್‌ ಸುನೀತಾ ಮುಳಗೆ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಈ ಪರೀಕ್ಷಾ ಅಕ್ರಮಗಳನ್ನು ವಿಧಿವಿಜ್ಞಾನ ಪರೀಕ್ಷೆಯಿಂದ ಹಾಗೂ ಅಭ್ಯರ್ಥಿಗಳು, ಮಧ್ಯವರ್ತಿಗಳು ಮತ್ತು ಉತ್ತರ ಒದಗಿಸುತ್ತಿದ್ದ ತಂಡದ ದೂರವಾಣಿ ಕರೆ ವಿವರ ರೆಕಾರ್ಡ್‌ನಿಂದ ಖಚಿತಪಡಿಸಿಕೊಳ್ಳಲಾಗಿದೆ’ ಎಂದೂ ವರದಿಯಲ್ಲಿದೆ.

ಈ ಹಗರಣದಲ್ಲಿ ಒಟ್ಟು 113 ಆರೋಪಿಗಳಿದ್ದು, ಅದರಲ್ಲಿ ಪೊಲೀಸ್‌ ಅಧಿಕಾರಿ, ಸಿಬ್ಬಂದಿ, ಅಭ್ಯರ್ಥಿಗಳು, ಮಧ್ಯವರ್ತಿಗಳು, ಮಧ್ಯವರ್ತಿಗಳಾಗಿದ್ದ ಸರ್ಕಾರಿ ನೌಕರರು ಮತ್ತು ವಂಚಕರು ಇದ್ದಾರೆ. ಇವರ ವಿರುದ್ಧ ಸಿಐಡಿ ದಾಖಲಿಸಿರುವ 17 ಕ್ರಿಮಿನಲ್‌ ಪ್ರಕರಣಗಳ ಸಂಪೂರ್ಣ ತನಿಖೆ ಕೈಗೊಂಡು ಮುಂದಿನ ಕ್ರಮ ವಹಿಸಬೇಕು ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಅಲ್ಲದೆ, ನಾಗರಿಕ ಸಮಾಜದ ಕಡೆಗೆ ಪೊಲೀಸ್‌ ಅಧಿಕಾರಿಗಳ ಕರ್ತವ್ಯ ಮತ್ತು ಕಾರ್ಯವೈಖರಿಯ ಬಗ್ಗೆಯೂ ಆಯೋಗವು ತನ್ನ ವರದಿಯಲ್ಲಿ ವಿವರಣೆ ನೀಡಿದೆ.

ಆಯೋಗದ ಶಿಫಾರಸು

ಪೊಲೀಸ್‌ ಇಲಾಖೆಯ ಪರೀಕ್ಷೆಗಳನ್ನು ಪಾರದರ್ಶಕವಾಗಿ ಮತ್ತು ಕಟ್ಟುನಿಟ್ಟಾಗಿ ನಡೆಸಲು ಕರ್ನಾಟಕ ರಾಜ್ಯ ಪೊಲೀಸ್‌ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡಿ ಪ್ರಾಧಿಕಾರ ಮತ್ತು ಸಮಿತಿ ರಚಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

l  ಆಯ್ಕೆ ಪ್ರಾಧಿಕಾರ/ಪ್ರಶ್ನೆಪತ್ರಿಕೆ ಸಮಿತಿ/ಮೇಲ್ವಿಚಾರಣೆ ಸಮಿತಿ (ಡಿಜಿ ಅಧ್ಯಕ್ಷ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಸದಸ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಡಿಜಿಪಿ (ನೇಮಕಾತಿ), ಡಿಐಜಿ (ನೇಮಕಾತಿ) ಸದಸ್ಯರು)

l  ಸ್ಕ್ರೀನಿಂಗ್‌ ಮತ್ತು ಮೌಲ್ಯಮಾಪನ ಸಮಿತಿ (ಡಿಜಿಪಿ (ನೇಮಕಾತಿ) ಅಧ್ಯಕ್ಷರು, ಕಾನೂನು ಇಲಾಖೆಯ ಹೆಚ್ಚು ವರಿ ಕಾರ್ಯದರ್ಶಿ ಸದಸ್ಯ ಕಾರ್ಯದರ್ಶಿ, ಮೂವರು ಸದಸ್ಯರು) 

l  ಜಿಲ್ಲಾ ಸಮಿತಿ (ಪ್ರಧಾನ ಜಿಲ್ಲಾ ನ್ಯಾಯಾಧೀಶರು ಅಧ್ಯಕ್ಷರು, ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಸದಸ್ಯರು)

l  ದೈಹಿಕ ಸಾಮರ್ಥ್ಯದ ಪರೀಕ್ಷೆ ಪಾಸಾದವರಿಗೆ ಎರಡು ಪರೀಕ್ಷೆಗಳನ್ನು ಮಾಡಬೇಕು. 100 ಅಂಕಗಳ ಮೊದಲ ಪರೀಕ್ಷೆಯಲ್ಲಿ ಕನಿಷ್ಠ 40 ಅಂಕ ಗಳಿಸಿದ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು, 50 ಅಂಕ ಗಳಿಸಿದ ಇತರ ಅಭ್ಯರ್ಥಿಗಳು ಬಹುಆಯ್ಕೆಯ 100 ಅಂಕಗಳ ಎರಡನೇ ಪರೀಕ್ಷೆಗೆ ಅರ್ಹರಾಗುತ್ತಾರೆ. ಎರಡನೇ ಪರೀಕ್ಷೆಯಲ್ಲೂ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಕನಿಷ್ಠ 40, ಇತರ ಅಭ್ಯರ್ಥಿಗಳು  50 ಅಂಕ ಗಳಿಸಿದರೆ ಅರ್ಹರಾಗುತ್ತಾರೆ. ಎರಡೂ ಪರೀಕ್ಷೆಗಳ ಅಂಕಗಳನ್ನು ಆಧರಿಸಿ ಆಯ್ಕೆ ಪಟ್ಟಿ ತಯಾರಿಸಬೇಕು.

l ಪರೀಕ್ಷೆಯ ದಿನವೇ ಪ್ರಶ್ನೆಪತ್ರಿಕೆಯ ಸರಿ ಉತ್ತರ ಪ್ರಕಟಿಸ ಬೇಕು. 3 ದಿನಗಳ ಒಳಗೆ ಅಭ್ಯರ್ಥಿಗಳು ಗಳಿಸಿದ ಅಂಕ ಪ್ರಕಟಿಸಬೇಕು.

----

‘ಜನಪ್ರತಿನಿಧಿಗಳ ಹೇಳಿಕೆ– ಪ್ರತ್ಯೇಕ ಸಂಸ್ಥೆಯಿಂದ ತನಿಖೆ ಸೂಕ್ತ’

ಹಗರಣಕ್ಕೆ ಸಂಬಂಧಪಟ್ಟಂತೆ ಜನಪ್ರತಿನಿಧಿಗಳು ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳ ಕುರಿತು ಪ್ರತ್ಯೇಕ ಸಂಸ್ಥೆಯಿಂದ ತನಿಖೆ ಕೈಗೊಳ್ಳುವುದು ಸೂಕ್ತ ಎಂದು ಆಯೋಗ ಅಭಿಪ್ರಾಯ ನೀಡಿದೆ. ರಾಜಕೀಯ ನಾಯಕರನ್ನೂ ಒಳಗೊಂಡಂತೆ ಯಾವುದೇ ವ್ಯಕ್ತಿಯು ಸೂಕ್ತ ದಾಖಲಾತಿ ಇಲ್ಲದೇ ಹೇಳಿಕೆಗಳನ್ನು ನೀಡಬಾರದು. ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡುವಾಗ ಸಂಯಮದಿಂದ ಹೇಳಿಕೆ ನೀಡುವುದು ಸೂಕ್ತವಾಗಿದೆ. ಸಂವಿಧಾನದ ಕಲಂ 19 (2) ಅಡಿ ವಾಕ್‌ ಸ್ವಾತಂತ್ರ್ಯಕ್ಕೆ ಕೆಲವು ಮಿತಿಗಳಿರುವುದನ್ನು ಗಮನಿಸಬೇಕು ಎಂದು ಆಯೋಗ ಹೇಳಿದೆ.

ಸಿ.ಎನ್‌. ಅಶ್ವತ್ಥನಾರಾಯಣ, ಎಚ್‌.ಡಿ. ಕುಮಾರಸ್ವಾಮಿ, ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಗಳನ್ನು ಆಧರಿಸಿ ಅವರನ್ನು ತನಿಖೆಗೆ ಒಳಪಡಿಸಬೇಕೆಂದು ಆಯೋಗಕ್ಕೆ ವಕೀಲ ಸೂರ್ಯ ಮುಕುಂದರಾಜ್‌ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಆಯೋಗವು ಅವರಿಗೆ ನೋಟಿಸ್ ನೀಡಿತ್ತು. ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಅವರ ಸಹೋದರ ಸತೀಶ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಸಾಕ್ಷ್ಯ ಕಾಯ್ದೆಯ ಸೆಕ್ಷನ್‌ 78(2) ಮತ್ತು 81ರ ಪ್ರಕಾರ ಸಾಕ್ಷ್ಯಗಳೆಂದು ಪರಿಗಣಿಸಲು ಸಾಧ್ಯ ಇಲ್ಲ. ಸೂಕ್ತ ಸಾಕ್ಷ್ಯ ಇಲ್ಲದೆ ಪರಿಗಣಿಸಬಾರದೆಂದು ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಯಾವುದೇ ಸಾಕ್ಷ್ಯ ನೀಡುವ ಉದ್ದೇಶವಿಲ್ಲವೆಂದು  ಕುಮಾರಸ್ವಾಮಿ ಪರ ವಕೀಲರು ತಿಳಿಸಿದ್ದಾರೆ. ಯತ್ನಾಳ ಅವರು ಸಮನ್ಸ್ ಸ್ವೀಕರಿಸಿಲ್ಲ. ₹15 ಲಕ್ಷ ಪಡೆದಿರುವ ಆರೋಪದಲ್ಲಿ ಮಾಜಿ ಶಾಸಕ ಬಸವರಾಜ ದಡೇಸಗೂರು ಯಾವುದೇ ಹೇಳಿಕೆ ನೀಡಿಲ್ಲ. ಅಲ್ಲದೆ, ಕೋರ್ಟ್‌ನಿಂದ ತಾತ್ಕಾಲಿಕ ಇಂಜೆಕ್ಷನ್‌ ತಂದಿರುವ ಬಗ್ಗೆ ಆಯೋಗಕ್ಕೆ ಮೆಮೊ ಸಲ್ಲಿಸಿದ್ದಾರೆ ಎಂಬುದೂ ಆಯೋಗದ ವರದಿಯಲ್ಲಿದೆ.

*********

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT