ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌ಗೆ ‘ಕರ್ನಾಟಕ ರತ್ನ’: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

Last Updated 16 ನವೆಂಬರ್ 2021, 21:34 IST
ಅಕ್ಷರ ಗಾತ್ರ

ಬೆಂಗಳೂರು: ನಾಡಿನ ಕಣ್ಮಣಿಯಂತೆ ಮೆರೆಯತ್ತಲೇ ಅಚಾನಕ್ಕಾಗಿ ‘ಕಾಣದಂತೆ ಮಾಯವಾದ’ ನಟ ಪುನೀತ್ ರಾಜಕುಮಾರ್‌ ನೆನಪುಗಳು ಉಮ್ಮಳಿಸಿ ಭಾವಕೋಶ ತುಂಬುತ್ತಿದ್ದ ಹೊತ್ತು; ಡಾ.ರಾಜ್‌ ಕುಟುಂಬದ ಕುಡಿಗಳಲ್ಲಿ ಹೆಪ್ಪುಗಟ್ಟಿದ ಮೌನ, ಚಿತ್ರರಂಗ, ರಾಜಕೀಯ ಕ್ಷೇತ್ರದ ಪ್ರಮುಖರು ಗಾಢ ವಿಷಾದದಲ್ಲಿ ಮೂಕರಾಗಿದ್ದ ಕ್ಷಣ. . .ಸಾವಿರಾರು ಜನರ ಕಣ್ಣಾಲಿಗಳಲ್ಲಿ ಧುಮ್ಮಿಕ್ಕಲು ಕಾಯುತ್ತಿದ್ದ ನೋವಿನ ಧಾರೆ. . .

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಗರದ ಅರಮನೆ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಪುನೀತ ನಮನ’ ಕಾರ್ಯಕ್ರಮ ನೋವಿನ ಕಡಲೊಳಗೆ ಮುಳುಗಿತ್ತು.

ಅಪ್ಪುವಿಗೆ ನಮನ ಸಲ್ಲಿಸಲು ಮಾತಿಗೆ ನಿಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಪುನೀತ್‌ ರಾಜ್‌ಕುಮಾರ್‌ ಅವರ ಹೆಸರನ್ನು ಚಿರಸ್ಥಾಯಿ ಆಗಿಸಲು ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡಲಾಗುವುದು ಎಂದು ಘೋಷಿಸಿದರು.

ಮುಖ್ಯಮಂತ್ರಿಯವರ ಈ ಘೋಷಣೆ ಬೆನ್ನ ಹಿಂದೆಯೇ ಸಭಾಂಗಣದಲ್ಲಿ ನೆರೆದವರೆಲ್ಲ ಎದ್ದು ನಿಂತು ಜೋರಾಗಿ ಕರತಾಡನ ಮಾಡಿದರು.

ಚಂದನವನದ ದಿಗ್ಗಜರ ಮೊಗದಲ್ಲಿ ಅದುವರೆಗೆ ಮನೆಮಾಡಿದ್ದ ವಿಷಾದ ಭಾವ ಕ್ಷಣಕಾಲ ಹಿಂದೆ ಸರಿದು ಸಮಾಧಾನದ ಗೆರೆಯೊಂದು ಮಿಂಚಿ ಮರೆಯಾಯಿತು. ಪುತ್ರಿ ವಂದನಾ ಜೊತೆ ಕುಳಿತಿದ್ದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಕುಟುಂಬದ ಎಲ್ಲ ಸದಸ್ಯರ ಕಣ್ಣಾಲಿಗಳು ಆ ಕ್ಷಣದಲ್ಲಿ ತೇವಗೊಂಡವು. ದುಃಖ ತಡೆಯಲಾಗದ ಶಿವರಾಜ್ ಕುಮಾರ್ ಅವರ ಕಣ್ಣಿಂದ ನೀರು ಹೊರಚೆಲ್ಲಿ ನೆರೆದಿದ್ದವರ ಅಂತರಂಗವನ್ನು ಕಲಕಿತು.

ಮುಖ್ಯಮಂತ್ರಿ ಅವರು ಮಾತು ಮುಂದುವರಿಸುತ್ತಿದ್ದಂತೆ ಸಭಾಂಗಣದ ಕೊನೆಯ ಸಾಲಿನಲ್ಲಿದ್ದ ಅಭಿಮಾನಿಯೊಬ್ಬರು, ‘ನಮ್‌ ಪುನೀತ್‌ ಅವ್ರಿಗೆ ಕರ್ನಾಟಕ ರತ್ನ ಕೊಡ್ಲೇಬೇಕು ಸಾರ್‌’ ಎಂದು ಜೋರಾಗಿ ಕೂಗಿದರು. ಕ್ಷಣಕಾಲ ಸಾವರಿಸಿಕೊಂಡ ಬೊಮ್ಮಾಯಿ, ಪ್ರಶಸ್ತಿ ಘೋಷಣೆಗೆ ತಡ ಮಾಡಲೇ ಇಲ್ಲ.

‘ಅಪ್ಪು ಹೆಸರನ್ನು ಚಿರಸ್ಥಾಯಿ ಆಗಿಸಬೇಕು ಎಂಬುದು ರಾಜ್ಯ ಸರ್ಕಾರದ ಅಭಿಲಾಷೆ. ಕರ್ನಾಟಕ ರತ್ನ ಪ್ರಶಸ್ತಿಯ ಜೊತೆಯಲ್ಲೇ ರಾಷ್ಟ್ರಮಟ್ಟದ ಉನ್ನತ ಗೌರವಕ್ಕೂ ಶಿಫಾರಸು ಮಾಡುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದರು.

‘ಅವರ ಸಮಾಧಿ ಸ್ಥಳವನ್ನು ಡಾ.ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ಅವರ ಸಮಾಧಿಯ ಮಾದರಿಯಲ್ಲೇ ಅಭಿವೃದ್ಧಿ ಮಾಡಲಾಗುವುದು’ ಎಂದೂ ಹೇಳಿದರು.

ಹೃದಯದ ಭಾವನೆಯ ಮುತ್ತು: ‘ಪುನೀತ್‌ ಅವರ ಪಾರ್ಥಿವ ಶರೀರದ ಹಣೆಗೆ ಮುತ್ತಿಟ್ಟದ್ದು ನನ್ನ ಹೃದಯದ ಭಾವನೆಯಿಂದ. ಅದಕ್ಕೆ ಏನೇನೋ ಮಾತುಗಳು ಕೇಳಿ ಬಂದಿವೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಆರು ಕೋಟಿ ಕನ್ನಡಿಗರ ಪರವಾಗಿ ನಾನು ಪಾರ್ಥಿವ ಶರೀರಕ್ಕೆ ಮುತ್ತು ಕೊಟ್ಟಿದ್ದೇನೆ’ ಎಂದು ಭಾವುಕರಾಗಿ ನುಡಿದರು.

‘ಪುನೀತ್‌ ಮರಣದ ನಂತರ ಜನರು ವ್ಯಕ್ತಪಡಿಸಿದ ಅಭಿಮಾನದ ಮಾತುಗಳಿಂದ ಅವರ ವ್ಯಕ್ತಿತ್ವ ನಾಡಿಗೆ ಗೊತ್ತಾಗಿದೆ. ಅವರ ಮರಣದ ಬಳಿಕ ರಾಜ್‌ ಕುಟುಂಬದವರು ನಡೆದುಕೊಂಡ ಪರಿ ಅನುಕರಣೀಯ. ಅಭಿಮಾನಿಗಳೂ ಕೂಡ ಅಪ್ಪು ಅವರ ವಿನಯಪೂರ್ವಕ ನಡವಳಿಕೆಯನ್ನೇ ತೋರಿದರು’ ಎಂದು ಅವರು ಸ್ಮರಿಸಿದರು.

ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗವೇ ನೆರೆದಿತ್ತು. ತಮಿಳಿನ ನಟ ವಿಶಾಲ್‌, ತೆಲುಗು ನಟ ಮಿಂಚು ಮನೋಜ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ರಾಜ್ಯದ ಹೆಚ್ಚಿನ ಸಚಿವರು ಈ ಕ್ಷಣಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT