ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಚಿ ತುಂಬಿದ ಕೊಳವೆಗಳಲ್ಲಿ ನೀರು ಸರಬರಾಜು: ಜೀವಕ್ಕೆ ಮಲಿನ ‘ಜಲ’ ಸಂಕಟ

ಪಾಚಿ ತುಂಬಿದ ಕೊಳವೆಗಳಲ್ಲಿ ನೀರು ಸರಬರಾಜು, ಸಾವು ನೋವಿನ ಬಳಿಕ ಸುಣ್ಣ ಕಂಡ ನೀರಿನ ತೊಟ್ಟಿಗಳು
Published 25 ಜೂನ್ 2023, 23:30 IST
Last Updated 25 ಜೂನ್ 2023, 23:30 IST
ಅಕ್ಷರ ಗಾತ್ರ

ಕೊಪ್ಪಳ: ‘ಮಕ್ಕಳ ಭವಿಷ್ಯ ರೂಪಿಸುವ ಸಲುವಾಗಿ ದುಡಿಯಲು ಬೆಂಗಳೂರಿಗೆ ಹೋಗಿದ್ದೆವು. ಹೋಗದಿದ್ದರೆ ಮಗಳು ನಮ್ಮ ಜೊತೆಗೇ ಇರುತ್ತಿದ್ದಳೇನೊ? ಜೀವನದಲ್ಲಿ ಇಷ್ಟೊಂದು ದುಃಖವನ್ನೂ ಅನುಭವಿಸುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ?’

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬಿಜಕಲ್‌ ಗ್ರಾಮದಲ್ಲಿ ಮನೆಯ ಮುಂಭಾಗದಲ್ಲಿ ದಿಕ್ಕು ತೋಚದಂತಾಗಿ ಕುಳಿತಿದ್ದ ಈರಪ್ಪ ಹಾಗೂ ದೇವಮ್ಮ ದಂಪತಿಯ ನೋವಿನ ನುಡಿಗಳಿವು. ವಿಪರೀತ ವಾಂತಿ ಹಾಗೂ ಭೇದಿಯಿಂದ ಅಸ್ವಸ್ಥಳಾಗಿ ಈ ದಂಪತಿಯ ಒಂಬತ್ತು ವರ್ಷದ ಮಗಳು ನಿರ್ಮಲಾ ನಿರ್ಲೂಟಿ ಮೃತಪಟ್ಟು ಎರಡು ವಾರಗಳು ಕಳೆದಿವೆ.

ದಿನಗಳು ಉರುಳಿದರೂ ಸಾಂತ್ವನ ಹೇಳಲು ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗಂಟಲ ಸೆರೆ ಉಬ್ಬಿ ಬಂದಂತಾಗಿದ್ದ ದೇವಮ್ಮಗೆ, ‘ದುಡಿಮೆಗಾಗಿ ಮಗಳನ್ನೇ ಕಳೆದುಕೊಳ್ಳಬೇಕಾಯಿತು. ಮಗಳು ನರಳಿ ಸತ್ತ ಸುದ್ದಿ ಕೇಳಿದರೆ ಈಗಲೂ ಕರಳು ಕಿವುಚಿದಂತೆ ಆಗುತ್ತದೆ’ ಎಂದು ಕಣ್ಣೀರಾದರು. ಈ ಘಟನೆ ಬಿಜಕಲ್‌ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ್ದು ಒಂದು ಸಲ ವಾಂತಿ ಭೇದಿಯಾದರೂ ತಕ್ಷಣವೇ ಆಸ್ಪತ್ರೆಗೆ ಧಾವಿಸುವಂತೆ ಮಾಡಿದೆ.

ಇದೊಂದು ಉದಾಹರಣೆಯಷ್ಟೇ. ಜಿಲ್ಲೆಯ ಕನಕಗಿರಿ ತಾಲ್ಲೂಕಿನಲ್ಲಿಯೂ ಇದೇ ಪರಿಸ್ಥಿತಿ. ಈ ತಾಲ್ಲೂಕಿನಲ್ಲಿ ಮೂವರು ಮತ್ತು ಬಿಜಕಲ್‌ನಲ್ಲಿ ಒಬ್ಬರು ವಾಂತಿ ಭೇದಿಯಿಂದಾಗಿಯೇ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಹಾಗೂ ಗ್ರಾಮಸ್ಥರು ಆರೋಪಿಸುತ್ತಾರೆ. ಆದರೆ, ಜಿಲ್ಲಾಡಳಿತ ಇದನ್ನು ಅಲ್ಲಗಳೆಯುತ್ತಿದೆ. ಈ ಎರಡೂ ಗ್ರಾಮಗಳಲ್ಲಿನ ಕೆಲ ಬೋರ್‌ಗಳಲ್ಲಿ ಬರುತ್ತಿದ್ದ ನೀರು ಕುಡಿಯಲು ಯೋಗ್ಯವಲ್ಲ ಎನ್ನುವುದು ಪರೀಕ್ಷಾ ವರದಿಯಿಂದ ಸಾಬೀತಾಗಿದೆ. ಪಿಡಿಒಗಳ ತಲೆದಂಡವೂ ಆಗಿದೆ. 

ಬೇಸಿಗೆ ಸಮಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್‌, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮೇಲಿಂದ ಮೇಲೆ ವಾಂತಿ ಭೇದಿ ಪ್ರಕರಣಗಳು ಕಂಡು ಬರುತ್ತಿವೆ. ಕೊಪ್ಪಳ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಇಂಥ ಘಟನೆಗಳು ಮರುಕಳಿಸಿವೆ. ಜೂನ್‌ನಲ್ಲಿ ಜಿಲ್ಲೆಯೊಂದರಲ್ಲಿಯೇ 400 ವಾಂತಿ ಭೇದಿ ಪ್ರಕರಣಗಳು ವರದಿಯಾಗಿವೆ.

ಸಾವು ನೋವು ಸಂಭವಿಸಿದ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ವಾಂತಿ ಭೇದಿ ಪ್ರಕರಣ ಕಂಡುಬಂದ ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುತ್ತಿದೆ. ಹಲವು ವರ್ಷಗಳಿಂದ ಸ್ವಚ್ಛಗೊಳ್ಳದ, ಬಣ್ಣವೂ ಕಾಣದ ನೀರು ಸಂಗ್ರಹ ತೊಟ್ಟಿಗಳು ಹಾಗೂ ಟ್ಯಾಂಕ್‌ಗಳು ಈಗ ಕಾಯಕಲ್ಪಕ್ಕೆ ಒಳಗಾಗಿವೆ. ಈ ಎಲ್ಲಾ ಕೆಲಸವನ್ನು ಮೊದಲೇ ಮಾಡಿದ್ದರೆ ಸಾವು ನೋವುಗಳನ್ನು ತಡೆಯಬಹುದಿತ್ತು ಎಂದು ಬಿಜಕಲ್ ಗ್ರಾಮದ ಮನೋಹರ ಹೇಳುತ್ತಾರೆ.  

ಗಡಿಭಾಗದಲ್ಲಿ ಸಮಸ್ಯೆ

ಬೀದರ್‌ ಜಿಲ್ಲೆಯ ಔರಾದ್‌ ತಾಲ್ಲೂಕಿನ ಗಡಿಭಾಗದ ಘಾಮಾ ತಾಂಡಾ, ಬಾರ್ಡರ್‌ ತಾಂಡಾ, ವಡಗಾಂವ್‌, ಸಂತಪುರದಲ್ಲಿ ಕುಡಿಯುವ ನೀರಿಗೆ ತತ್ವಾರ ಇದೆ. ಈ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದ್ದು, ಅದು ಸಾಲುತ್ತಿಲ್ಲ. ಕರಕ್ಯಾಳ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿ, ಕಲುಷಿತ ನೀರು ಪೂರೈಕೆಯಾಗಿ 20 ಜನ ಅಸ್ವಸ್ಥರಾಗಿದ್ದಾರೆ. ಹುಮನಾಬಾದ್‌ ಹೊರವಲಯದ ಕೈಗಾರಿಕಾ ಪ್ರದೇಶದ ವಿಷಪೂರಿತ ತ್ಯಾಜ್ಯದಿಂದ ಮಾಣಿಕ್‌ ನಗರ, ಗಡವಂತಿಯಲ್ಲಿ ನೀರು ಕುಡಿಯಲು ಯೋಗ್ಯವಾಗಿಲ್ಲ. 

ನೀರಿನ ಕೊರತೆ

ಮಳೆಯ ಕೊರತೆಯಿಂದಾಗಿ ರಾಯಚೂರಿನ ರಾಂಪುರ ಕೆರೆಯಲ್ಲಿನ ನೀರು ತಳಮಟ್ಟಕ್ಕೆ ಹೋಗಿದೆ. ನೀರಿನಲ್ಲಿ ಹೂಳು ತುಂಬಿಕೊಂಡಿರುವ ಕಾರಣ ತಿಳಿನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಜನ ಕುಡಿಯುವ ಶುದ್ಧ ನೀರಿನ ಘಟಕಗಳ ಮೊರೆ ಹೋಗಿದ್ದಾರೆ. ಮೇನಲ್ಲಿ ದೇವದುರ್ಗ ತಾಲ್ಲೂಕಿನ ರೇಖಲಮರಡಿಯಲ್ಲಿ ಒಬ್ಬ ಬಾಲಕ ಸಾವನ್ನಪ್ಪಿದ್ದ ಹಾಗೂ ಅನೇಕರು ಅಸ್ವಸ್ಥರಾಗಿದ್ದರು. ಲಿಂಗಸೂಗೂರು ಗೋರೆಬಾಳ, ಯರಗಟ್ಟಿಯಲ್ಲಿಯೂ ಜನರಲ್ಲಿ ಅನಾರೋಗ್ಯ ಕಾಡಿತ್ತು.

ಸಾವು ನೋವು ಸಂಭವಿಸಿದ ಬಳಿಕ ಸುಣ್ಣ ಕಂಡ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬಿಜಕಲ್‌ ಗ್ರಾಮದ ನೀರಿನ ತೊಟ್ಟಿಗಳು
ಸಾವು ನೋವು ಸಂಭವಿಸಿದ ಬಳಿಕ ಸುಣ್ಣ ಕಂಡ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬಿಜಕಲ್‌ ಗ್ರಾಮದ ನೀರಿನ ತೊಟ್ಟಿಗಳು

ಲಿಂಗಸುಗೂರು ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಸಿಗುವ ನೀರಿನಲ್ಲಿ ಆರ್ಸೆನಿಕ್ ಸೇರಿದಂತೆ ಇತರೆ ವಿಷಯುಕ್ತ ಅಂಶಗಳು ಪತ್ತೆಯಾಗಿವೆ. ಎರಡು ದಶಕಗಳ ಹಿಂದೆ ಕುಡಿಯುವ ನೀರು ಪೂರೈಕೆ ಮೂಲಗಳ ನೀರು ಪರೀಕ್ಷೆಗೆ ಒಳಪಡಿಸಿದಾಗ ಬಹುತೇಕ ಕಡೆಗಳಲ್ಲಿ ವಿಷಯುಕ್ತ ರಾಸಾಯನಿಕ ಅಂಶ ಇರುವುದನ್ನು ಜಿಲ್ಲಾಡಳಿತ ದೃಢಪಡಿಸಿತ್ತು. ನಾಲ್ಕು ತಿಂಗಳ ಹಿಂದೆ ಯಾದಗಿರಿಯಲ್ಲಿ ಕಲುಷಿತ ನೀರು ಕುಡಿದು ಮೂರು ಜನ ಮೃತಪಟ್ಟು 90ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು.  

ಚಿಕ್ಕಮಗಳೂರು ನಗರಕ್ಕೆ ನೀರು ಪೂರೈಸುವ ಯಗಚಿ ಜಲಾಶಯದ ಕಾಲುವೆ ಪಕ್ಕದಲ್ಲೇ ಪೈಪ್‌ಲೈನ್‌ ಇರುವುದರಿಂದ ಕೊಳಚೆ ನೀರು ಮಿಶ್ರಣವಾಗುತ್ತಿದೆ ಎಂಬ ಅನುಮಾನ ಇದೆ. ಚಿಕ್ಕಬಳ್ಳಾಪುರ ನಗರಕ್ಕೆ ನೀರು ಪೂರೈಸುವ ಜಕ್ಕಲಮಡಗು ಜಲಾಶಯದ ನೀರಿನ ಬಣ್ಣದಲ್ಲಿ ವ್ಯತ್ಯಾಸವಾಗಿದ್ದು, ಕೆಲ ದಿನಗಳಿಂದ ಜಕ್ಕಲಮಡಗು ನೀರನ್ನು ನಗರಕ್ಕೆ ಪೂರೈಸುತ್ತಿಲ್ಲ. 

ಕೋಲಾರ ನಗರದಲ್ಲಿ 35 ಶುದ್ಧ ನೀರಿನ ಘಟಕಗಳು (ಆರ್‌ಒ) ಆಳವಡಿಸಿ 4 ವರ್ಷಗಳಾಗಿದ್ದು, ನಿರ್ವಹಣೆ ಕೊರತೆಯಿಂದ 23 ಘಟಕಗಳು ಕೆಟ್ಟು ಹೋಗಿವೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣಕ್ಕೆ ಸಮೀಪದ ರಂಗಯ್ಯನದುರ್ಗ ಜಲಾಶಯದಿಂದ ನೀರು ಶುದ್ಧೀಕರಣಕ್ಕೆ ಅಳವಡಿಸಿದ ಫಿಲ್ಟರ್‌ ಹೌಸ್‌ ಕಾರ್ಯಕ್ಷಮತೆಯ ಬಗ್ಗೆ ಜನರಿಗೆ ಅನುಮಾನಗಳಿವೆ. 

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಬಿಜಕಲ್‌ ಗ್ರಾಮದಲ್ಲಿ ವಾರ್ಡ್‌ನಲ್ಲಿ ಮನೆ ಮುಂದೆಯೇ ಚರಂಡಿ ನೀರು ಹರಿಯುತ್ತಿದ್ದು ಇದರ ಅಡಿಯಲ್ಲಿಯೇ ಕುಡಿಯುವ ನೀರು ಪೂರೈಸುವ ಕೊಳವೆ ಇದೆ
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಬಿಜಕಲ್‌ ಗ್ರಾಮದಲ್ಲಿ ವಾರ್ಡ್‌ನಲ್ಲಿ ಮನೆ ಮುಂದೆಯೇ ಚರಂಡಿ ನೀರು ಹರಿಯುತ್ತಿದ್ದು ಇದರ ಅಡಿಯಲ್ಲಿಯೇ ಕುಡಿಯುವ ನೀರು ಪೂರೈಸುವ ಕೊಳವೆ ಇದೆ
ಬಾಳಪ್ಪ ಮೇಟಿ
ಬಾಳಪ್ಪ ಮೇಟಿ
ವಾಂತಿ ಭೇದಿಯಿಂದಾಗಿ ನಾನು ಹಾಗೂ ಪತ್ನಿ ಐದು ದಿನ ಆಸ್ಪತ್ರೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆದಿದ್ದೇವೆ. ಮನೆಗೆ ಬಂದು ಒಂದು ವಾರವಾದರೂ ಸುಸ್ತು ಕಡಿಮೆಯಾಗಿಲ್ಲ. ನಿತ್ಯ ಆರೋಗ್ಯದ್ದೇ ಚಿಂತೆಯಾಗಿದೆ
ಬಾಳಪ್ಪ ಮೇಟಿ ಬಿಜಕಲ್‌ ಗ್ರಾಮಸ್ಥ
ಮಾಧವರಾವ ಸಿಂಧೆ
ಮಾಧವರಾವ ಸಿಂಧೆ
ಏಕಾ ಏಕಿ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿ ಬಂತು. ನನ್ನ ಮಗ ಔರಾದ್ ಆಸ್ಪತ್ರೆಗೆ ಕರೆ ತಂದು ಸೇರಿಸಿದ. ನೀರು ಪೂರೈಸುವ ಕೊಳವೆ ಬಾವಿ ಸುತ್ತ ಹೊಲಸು ನಿಂತಿದೆ
ಮಾಧವರಾವ ಸಿಂಧೆ ಔರಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರಕ್ಯಾಳ ಗ್ರಾಮಸ್ಥ

ನೀರು ಕಲುಷಿತಗೊಳ್ಳಲು ಕಾರಣಗಳೇನು?

  • ನೀರು ಪೂರೈಸುವ ಕೊಳವೆಯಲ್ಲಿ ಪಾಚಿ

  • ನೀರಿನ ಟ್ಯಾಂಕರ್‌ಗಳು ಹಲವು ವರ್ಷಗಳಿಂದ ಸ್ವಚ್ಛಗೊಂಡಿಲ್ಲ

  • ಮನೆಯ ಮುಂದೆಯೇ ಚರಂಡಿ

  • ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿವೆ

  • ತಗ್ಗು ಪ್ರದೇಶಗಳಲ್ಲಿರುವ ಬೋರ್‌ವೆಲ್‌ಗಳಿಗೆ ಚರಂಡಿ ನೀರು ಸೇರ್ಪಡೆ

ಜಿ.ಪಂ. ಸಿಇಒಗಳ ಜೊತೆ ಸಭೆ ನಡೆಸಿ ನೀರಿನ ಮೂಲಗಳನ್ನು ಕಡ್ಡಾಯವಾಗಿ ಶುದ್ಧೀಕರಣ ಮಾಡಿಸಬೇಕು ಎಂದು ಸೂಚಿಸಿದ್ದೇನೆ. ಇವುಗಳ ಪರಿಶೀಲನೆಗೆ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್‌ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮತ್ತು ತಾಲ್ಲೂಕು ಪಂಚಾಯಿತಿ ಇಒ ಅವರನ್ನು ಒಳಗೊಂಡ ಸಮಿತಿ ರಚಿಸಲಾಗುವುದು.
ಎಲ್‌.ಕೆ. ಅತೀಕ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ದೇವರ ಮೊರೆ ಹೋದ ಬಿಜಕಲ್‌ ಗ್ರಾಮಸ್ಥರು

ಬಿಜಕಲ್ ಗ್ರಾಮದಲ್ಲಿ ವಾಂತಿ ಭೇದಿ ಸಮಸ್ಯೆಯಿಂದ ಮುಕ್ತರಾಗಲು ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ‘ಕುಷ್ಟಗಿ ಸಮೀಪದ ಗೋತಗಿ ಗ್ರಾಮದಲ್ಲಿರುವ ದುರ್ಗಾದೇವಿಯ ತವರುಮನೆ ಬಿಜಕಲ್‌ ಗ್ರಾಮವಾಗಿದ್ದು 20 ವರ್ಷಗಳಿಂದ ಆ ದೇವಿಯನ್ನು ಗ್ರಾಮಕ್ಕೆ ಕರೆಯಿಸಿಲ್ಲ. ಹೀಗಾಗಿ ದೇವಿ ಮುನಿಸಿಕೊಂಡಿದ್ದಾಳೆ. ಎರಡು ದಶಕಗಳ ಹಿಂದೆ ಗ್ರಾಮದಲ್ಲಿ ವಾಂತಿ ಭೇದಿ ಕಾಡಿದಾಗ ದೇವಿಯನ್ನು ಕರೆಯಿಸಿ ಪೂಜೆ ಸಲ್ಲಿಸಿದ್ದೆವು. ಆಗಿನಿಂದ ಊರಿನ ಜನರಿಗೆ ಈಗಿನಷ್ಟು ಸಮಸ್ಯೆ ಕಾಡಿರಲಿಲ್ಲ. ಇದೇ ಕಾರಣಕ್ಕೆ ಈಗ ದುರ್ಗಾದೇವಿಯನ್ನು ಆಕೆಯ ತವರಿಗೆ ಕರೆಯಿಸಿ ಊರಿನ ಜನರೆಲ್ಲ ಸೇರಿ ಐದು ಮಂಗಳವಾರ ಹಾಗೂ ಶುಕ್ರವಾರ ಪೂಜೆ ಮಾಡುತ್ತಿದ್ದೇವೆ. ಈಗ ಎರಡು ವಾರಗಳು ಪೂರ್ಣಗೊಂಡಿವೆ. ವಾಂತಿ ಭೇದಿ ನಿಯಂತ್ರಣಕ್ಕೆ ಬಂದಿದೆ’ ಎನ್ನುತ್ತಾರೆ ಬಿಜಕಲ್‌ ಗ್ರಾಮಸ್ಥ ಗುರಪ್ಪ ವಂಕಲಕುಂಟಿ.

ಕಲಬುರಗಿಯಲ್ಲಿ ನೀರಿನ ಮಾಫಿಯಾ?

ಕಲಬುರಗಿ: ಏಳು ಲಕ್ಷ ಜನಸಂಖ್ಯೆ ಹೊಂದಿರುವ ಕಲಬುರಗಿ ಮಹಾನಗರದ ಬಹುತೇಕ ಬಡಾವಣೆಗಳಿಗೆ ಇಂದಿಗೂ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಎಲ್ಲೆಂದರಲ್ಲಿ ತಲೆ ಎತ್ತಿದ್ದು ಕುಡಿಯುವ ‌ನೀರನ್ನು ಶುದ್ಧೀಕರಿಸಲು ಬೇಕಾದ ಮಾನದಂಡಗಳನ್ನು ಇವು ಪೂರೈಸುತ್ತಿಲ್ಲ. ಕೆಲ ರಾಜಕಾರಣಿಗಳು ದಂಧೆಕೋರರ ಬೆನ್ನಿಗೆ ಇರುವುದರಿಂದ ದಾಳಿಯೂ ನಡೆಯುತ್ತಿಲ್ಲ. ಅಲ್ಲದೇ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಕಾಲ ಕಾಲಕ್ಕೆ ತಪಾಸಣೆಯನ್ನೂ ಕೈಗೊಳ್ಳುವುದಿಲ್ಲ ಎಂಬ ಆರೋಪಗಳಿವೆ. ಸರ್ಕಾರದ ಮಾನದಂಡಗಳನ್ನು ಅನುಸರಿಸಿ ಒಂದು ಶುದ್ಧ ನೀರಿನ ಘಟಕ ಅಳವಡಿಸಲು ₹40 ಲಕ್ಷ ವೆಚ್ಚವಾಗುತ್ತದೆ. ಆದರೆ ಕೇವಲ ₹ 2 ಲಕ್ಷ ಬಂಡವಾಳ ಹೂಡಿ ಕಳಪೆ ಘಟಕ ಅಳವಡಿಸಿ ದಂಧೆ ಶುರು ಮಾಡುತ್ತಿದ್ದಾರೆ. ನಗರದಲ್ಲಿ ಬಾಟಲಿ ನೀರಿನ ದಂಧೆ ದಿನೇ ದಿನೇ ಹೆಚ್ಚುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT