ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ನಿಗಮದ ಹಗರಣ: ಆಡಿಟ್‌ ಮಾಡಿ ಶ್ವೇತಪತ್ರ ಮಂಡಿಸಿ– ಆರ್‌. ಅಶೋಕ

ಹಲವು ನಿಗಮ–ಮಂಡಳಿಗಳಲ್ಲಿ ಅಕ್ರಮ: ಆರ್‌.ಅಶೋಕ ಸಂಶಯ
Published 2 ಜೂನ್ 2024, 16:41 IST
Last Updated 2 ಜೂನ್ 2024, 16:41 IST
ಅಕ್ಷರ ಗಾತ್ರ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ ಗಮನಿಸಿದರೆ, ಇತರ ನಿಗಮಗಳು, ಇಲಾಖೆಗಳಿಂದಲೂ ಹಣ ವರ್ಗಾವಣೆ ಆಗಿರುವ ಸಾಧ್ಯತೆ ಇದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕರ್ನಾಟಕದ ಜನರ ಈ ಅನುಮಾನ ನಿವಾರಿಸಲು ರಾಜ್ಯದ ಎಲ್ಲ ನಿಗಮ ಮಂಡಳಿಗಳ ಹಣಕಾಸಿನ ಸ್ಥಿತಿಗತಿ ಬಗ್ಗೆ ಲೆಕ್ಕಪರಿಶೋಧನೆ  ಆಡಿಟ್‌ ನಡೆಸಿ, ನಿಗಮ– ಮಂಡಳಿಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ‘ಎಕ್ಸ್‌’ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

‘ಕರ್ನಾಟಕವನ್ನು ಲೂಟಿ ಮಾಡಿ ಹೈಕಮಾಂಡ್‌ಗೆ ಟಕಾಟಕ್‌ ಅಂತ ಹಣ ವರ್ಗಾವಣೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರಕ್ಕೆ ನಿಗಮ ಮಂಡಳಿಗಳೇ ಎಟಿಎಂಗಳಾಗಿವೆ. ದಲಿತರು, ಹಿಂದುಳಿದವರು, ಗ್ರಾಮೀಣ ಜನರ ಕಲ್ಯಾಣಕ್ಕೆ ಬಳಕೆಯಾಗಬೇಕಿದ್ದ ನಿಗಮ–ಮಂಡಳಿಗಳ ಹಣ ಭ್ರಷ್ಟರ ‍ಪಾಲಾಗುತ್ತಿರುವ ವಾಸನೆ ಬರುತ್ತಿದೆ’ ಎಂದು ಹೇಳಿದ್ದಾರೆ.

ಸಿಎಂಗೆ ಕೇರ್‌ ಮಾಡದ ಅಧಿಕಾರಿಗಳು: ‘ಮುಖ್ಯಮಂತ್ರಿಯವರ ಮಾತಿಗೆ ಅಧಿಕಾರಿಗಳೂ ಕ್ಯಾರೆ ಎನ್ನುತ್ತಿಲ್ಲ. ‘ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ನೀಡಿದ್ದ ಗಡುವು ಮುಗಿದಿದೆ. 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಂದೇ ಒಂದು ರಸ್ತೆ ಗುಂಡಿಯನ್ನೂ ಸಹ ಮುಚ್ಚಿಲ್ಲ’ ಎಂದಿದ್ದಾರೆ.

₹144 ಕೋಟಿ ಸಾಲ ಪಡೆದ ಕಾರಣವೇನು?

‘ಬ್ಯಾಂಕ್‌ ಆಫ್‌ ಬರೋಡದಿಂದ ₹144 ಕೋಟಿ ಸಾಲ (ಓವರ್‌ ಡ್ರಾಫ್ಟ್‌) ಪಡೆದಿದ್ದು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಲೆಂದು ಪಡೆಯಲಾಯಿತೇ’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಪ್ರಶ್ನಿಸಿದ್ದಾರೆ. ‘ಚುನಾವಣೆ ವೇಳೆಯಲ್ಲೇ ಈ ಕಂಪನಿಗಳಿಗೆ ಏಕೆ ಹಣ ಹಾಕಿದ್ದೀರಿ? ಆ ಕಂಪನಿಗಳ ಮಾಲೀಕರು ಯಾರು? ಆ ಕಂಪನಿಗಳು ಮತ್ತು ಡಿ.ಕೆ.ಶಿವಕುಮಾರ್‌ ಸಿದ್ದರಾಮಯ್ಯ ಅವರಿಗೆ ಏನು ಸಂಬಂಧ’ ಎಂದು ಅವರು ಕೇಳಿದರು. ‘ಈ ಓವರ್‌ ಡ್ರಾಫ್ಟ್‌ ಪಡೆಯಲು ಕ್ಯಾಬಿನೆಟ್‌ ನಿರ್ಣಯ ಮಾಡಿಲ್ಲವೇಕೆ? ಇದರೊಳಗೆ ನಾಗೇಂದ್ರ ಮಾತ್ರವಲ್ಲದೆ ಅನೇಕ ಅಧಿಕಾರಿಗಳಿದ್ದಾರೆ. ತೆಲಂಗಾಣದಲ್ಲಿ ಚುನಾವಣೆಗೆ ನಿಂತ ಅನೇಕ ಅಭ್ಯರ್ಥಿಗಳೂ ಇದರಲ್ಲಿದ್ದಾರೆ. ಹಣ ಕೊಟ್ಟ ಅನೇಕ ಮಂತ್ರಿಗಳೂ ಕರ್ನಾಟಕದಲ್ಲಿದ್ದಾರೆ. ಇದೊಂದು ಅಂತರರಾಜ್ಯ ಭ್ರಷ್ಟಾಚಾರ. ಆದ್ದರಿಂದ ಸಿಬಿಐ ತನಿಖೆ ನಡೆಸಬೇಕಿದೆ’ ಎಂದು ಅವರು ಪ್ರತಿಪಾದಿಸಿದರು. ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ವಾಲ್ಮೀಕಿ ಅಭಿವೃದ್ಧಿ ನಿಗಮವು ವ್ಯಾಪಾರ ಮಾಡುವ ನಿಗಮವಾಗಿ ಪರಿವರ್ತನೆಯಾಗಿದೆ. ನಿಗಮವು ಐಟಿ ಕಂಪನಿಗೆ ಸಾಲ ಕೊಡುವ ಕೆಲಸ ಮಾಡುವುದಿಲ್ಲ. ಆದರೆ ಈ ನಿಗಮವು 15 ಕಂಪನಿಗಳಿಗೆ ಹಣ ಕೊಟ್ಟಿದೆ. ಆ ಕಂಪನಿಗಳು ಯಾವುವು? ಅವರ ಟ್ರ್ಯಾಕ್‌ ರೆಕಾರ್ಡ್‌ ಏನು? ಅವರಿಗೆ ಯಾಕೆ ಹಣ ಕೊಟ್ಟಿದ್ದೀರಿ’ ಎಂದು ರವಿಕುಮಾರ್ ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT