ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡದಲ್ಲಿ ಮಳೆ ಮತ್ತೆ ಚುರುಕು: ಹುಬ್ಬಳ್ಳಿಯಲ್ಲೂ ವರ್ಷಧಾರ

ರಾಮನಗರ ಸುತ್ತಮುತ್ತ ಧಾರಾಕಾರ ಮಳೆ
Published 20 ಜೂನ್ 2024, 14:17 IST
Last Updated 20 ಜೂನ್ 2024, 14:17 IST
ಅಕ್ಷರ ಗಾತ್ರ

ಮಂಗಳೂರು/ರಾಮನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರದಿಂದ ಈಚೆಗೆ ತುಸು ಕಡಿಮೆಯಾಗಿದ್ದ ಮಳೆ ಮತ್ತೆ ಚುರುಕಾಗಿದೆ. ಜಿಲ್ಲೆಯಾದ್ಯಂತ ಗುರುವಾರ ಮಧ್ಯಾಹ್ನದವರೆಗೆ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಯಿತು.

ರಾಮನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲೂ  ಧಾರಾಕಾರ ಮಳೆ ಸುರಿಯಿತು. ಮಧ್ಯಾಹ್ನ 2.15ಕ್ಕೆ ಸಣ್ಣದಾಗಿ ಹನಿಯತೊಡಗಿದ ಮಳೆ ನಂತರ ಜೋರಾಯಿತು. ಮಧ್ಯಾಹ್ನ 3 ಗಂಟೆಯವರೆಗೂ ಒಂದೇಸಮನೆ ಮಳೆ ಸುರಿಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾನೆಯಿಂದಲೇ ಶುರುವಾದ ಮಳೆ ಹೊತ್ತೇರುವವರೆಗೂ ಮುಂದುವರಿದಿತ್ತು. ಮಧ್ಯಾಹ್ನದ ಬಳಿಕ ಕಡಿಮೆಯಾಯಿತು. ಬುಧವಾರ ರಾತ್ರಿಯೂ ‌ಬಿರುಸಿನ ಮಳೆಯಾಗಿತ್ತು. ಗುರುವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಅರಸಿನಮಕ್ಕಿಯಲ್ಲಿ 4.9 ಸೆಂ.ಮೀ, ಮೂಲ್ಕಿ ತಾಲ್ಲೂಕಿನ ಕೆಮ್ರಾಲ್‌ನಲ್ಲಿ 4.35, ಪಡುಪಣಂಬೂರಿನಲ್ಲಿ 3.8, ಬಂಟ್ವಾಳ ತಾಲ್ಲೂಕಿನ ಚೆನ್ನೈ ತೋಡಿಯಲ್ಲಿ 4.10 ಸೆಂ.ಮೀ ಮಳೆಯಾಗಿದೆ.

ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇದೇ 23 ಮತ್ತು 24ರಂದು ಗುಡುಗು, ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು, ಭಾರತೀಯ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಈ ದಿನಗಳಲ್ಲಿ ಸರಾಸರಿ 20 ಸೆಂ ಮೀಗೂ
ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.

ಚಿಕ್ಕಮಗಳೂರು ನಗರ ಹಾಗೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಯಿತು.

ರಾಮನಗರದ ಕೆಲವೆಡೆ ಚರಂಡಿ ಹಾಗೂ ಒಳ ಚರಂಡಿಗಳು ಕಟ್ಟಿಕೊಂಡಿದ್ದರಿಂದ ರಸ್ತೆಯಲ್ಲಿ ಮಳೆ ನೀರು
ಸಂಗ್ರಹವಾಗಿತ್ತು. ನಗರದ ರೈಲು ನಿಲ್ದಾಣ ಬಳಿಯ ರೈಲ್ವೆ ಕೆಳ ಸೇತುವೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.

ಉರುಳಿದ ಮರ, ವಿದ್ಯುತ್‌ ಕಂಬ: ತುಮಕೂರು ನಗರದಲ್ಲಿ ಗುರುವಾರ ಸಂಜೆ ಸುರಿದ ಗಾಳಿ ಸಹಿತ ಮಳೆಗೆ ಮರ, ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ.  ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಮರವೊಂದು ವಿದ್ಯುತ್‌ ತಂತಿ ಮೇಲೆ ಬಿದ್ದಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಆದರೆ, ಯಾವುದೇ ಹಾನಿಯಾಗಿಲ್ಲ.

(ಹುಬ್ಬಳ್ಳಿ ವರದಿ): ಕೆಲ ದಿನಗಳಿಂದ ಬಿಸಿಲಿನ ವಾತಾವರಣವಿದ್ದ ಹುಬ್ಬಳ್ಳಿಯಲ್ಲಿ ಗುರುವಾರ ಸಂಜೆ ರಭಸದ ಮಳೆಯಾಗಿದೆ.

ಧಾರವಾಡ ಜಿಲ್ಲೆಯ ಧಾರವಾಡ, ಅಳ್ನಾವರ, ನವಲಗುಂದ ಭಾಗದಲ್ಲಿ ಸಂಜೆ ಸುಮಾರು ಅರ್ಧ ‌ಗಂಟೆ ಸಾಧಾರಣ ಮಳೆಯಾಗಿದೆ. ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿಯಿತು.

ಮಡಿಕೇರಿ/ ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಗುರುವಾರ ಸಾಧಾರಣ ಮಳೆ ಸುರಿಯಿತು. ಗಾಳಿಯ ವೇಗ ಹೆಚ್ಚಿದ್ದು, ದಿನವಿಡೀ ಶೀತ ವಾತಾವರಣ ಇತ್ತು. ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದರೂ ಉತ್ತಮ ಮಳೆಯಾಗುತ್ತಿಲ್ಲ. ಬಿತ್ತನೆ ಮಾಡಿರುವ ರೈತರು ಆಕಾಶದತ್ತ ಮುಖಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT