ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಚುನಾವಣೆಗೆ ರಾಜ್ಯದಲ್ಲಿ ಪ್ರಚಾರ

ಸಮುದಾಯದ ಮತ ಸೆಳೆಯುಲು ಮುಂದಾಗುತ್ತಿರುವ ಬಿಜೆಪಿ ಮುಖಂಡರು
Last Updated 24 ಅಕ್ಟೋಬರ್ 2018, 16:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಮುದಾಯದವರ ಮತ ಸೆಳೆಯಲು ದೂರದ ರಾಜಸ್ಥಾನದಿಂದ ಅಲ್ಲಿನ ಕೆಲ ಸಚಿವರು, ಶಾಸಕರು ಕರ್ನಾಟಕಕ್ಕೂ ಬಂದಿದ್ದು, ಚಿತ್ರದುರ್ಗಕ್ಕೆ ಅಲ್ಲಿನ ಶಾಸಕರೊಬ್ಬರು ಬುಧವಾರ ಭೇಟಿ ನೀಡಿ ಮತಯಾಚಿಸಿದರು.

ಇಲ್ಲಿನ ತೇರಾಪಂಥ್ ಭವನದಲ್ಲಿ ರಾಜಸ್ಥಾನ ಸಂಘದಿಂದ ಹಮ್ಮಿಕೊಂಡಿದ್ದಜೈನ್ ಸಮುದಾಯದ (ಶ್ವೇತಾಂಬರ) ಸಭೆಯಲ್ಲಿ ಮತಯಾಚನೆ ಕಾರ್ಯಕ್ರಮ ನಡೆಯಿತು.

ಕರ್ನಾಟಕದಲ್ಲಿ ಮತದಾರರಿದ್ದಾರಾ? ರಾಜಸ್ಥಾನ ರಾಜ್ಯದ ಚುನಾವಣೆಗೂ ಈ ರಾಜ್ಯಕ್ಕೂ ಏನು ಸಂಬಂಧ. ಅವರೇಕೆ ಇಲ್ಲಿ ಮತಯಾಚಿಸಲು ಬಂದಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಉದ್ಯೋಗ ಅರಸಿ ಕರ್ನಾಟಕಕ್ಕೆ ಬಂದ ಕೆಲವರ ಮತಗಳು ಹಾಗೂ ರಾಜಸ್ಥಾನದಲ್ಲಿಯೇ ಇರುವ ಅವರ ಕುಟುಂಬದವರ ಮತ ವಿಭಜನೆ ಆಗಬಾರದು ಎಂಬ ಉದ್ದೇಶವಿಟ್ಟುಕೊಂಡುಆಯಾ ಸಮುದಾಯಕ್ಕೆ ಸೇರಿದ ಅಲ್ಲಿನ ಬಿಜೆಪಿ ಸಚಿವರು, ಶಾಸಕರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.

‘ಕೆಲವೇ ವಾರಗಳಲ್ಲಿ ನಾವು ಚುನಾವಣೆ ಎದುರಿಸುತ್ತಿದ್ದೇವೆ. ಈ ಬಾರಿಯೂ ನಿಮ್ಮೆಲ್ಲರ ಸಹಕಾರ ನಮಗೆ ಅಗತ್ಯ’ ಎಂದು ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಲೂಣಿ ವಿಧಾನಸಭಾ ಕ್ಷೇತ್ರದ ಶಾಸಕ ಜೋಗಾರಾಮ್ ಪಟೇಲ್ ಮನವಿ ಮಾಡಿಕೊಂಡರು.

‘ರಾಜಸ್ಥಾನ, ಛತ್ತೀಸಗಡ, ಮಧ್ಯಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆ ಬಿಜೆಪಿಗೆ ಸೆಮಿಫೈನಲ್‌ ಇದ್ದಂತೆ. ಇವೆಲ್ಲದರಲ್ಲಿ ನಾವು ಗೆದ್ದರೆ ಮುಂಬರುವ ಲೋಕಸಭಾ ಚುನಾವಣೆಯ ಫೈನಲ್‌ನಲ್ಲೂ ಬಹುಮತದೊಂದಿಗೆ ಜಯ ಸಾಧಿಸುತ್ತೇವೆ. ಅದಕ್ಕಾಗಿ ನಿಮ್ಮ ಕುಟುಂಬದ ಪ್ರತಿ ಮತವನ್ನು ನಮ್ಮ ಪಕ್ಷಕ್ಕೆ ಹಾಕುವಂತೆ ಮಾಡಿ. ಮೋದಿ ಅವರ ಕೈ ಬಲಪಡಿಸಿ’ ಎಂದು ಕೋರಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಮತಯಾಚಿಸಲು ಮುಂದಾಗುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡಲಿಕ್ಕೂ ಸಮಯವಿಲ್ಲ. ಹೀಗಿದ್ದರೂ ಇಲ್ಲಿಗೆ ಬಂದಿದ್ದೇವೆ. ರಾಜಸ್ಥಾನದಲ್ಲಿ ಇರುವ ನಿಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆ ತಪ್ಪದೇ ಈ ಬಾರಿ ಬಿಜೆಪಿಗೆ ಮತ ಹಾಕುವಂತೆ ದೂರವಾಣಿ ಮೂಲಕ ಮನವೊಲಿಸಬೇಕು’ ಎಂದು ಸಮುದಾಯದವರ ಬಳಿ ರಾಜಸ್ಥಾನದ ರಾಜಕಾರಣಿಗಳು ಕೇಳಿಕೊಳ್ಳುತ್ತಿದ್ದಾರೆ.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ರಾಜಸ್ಥಾನ ಸಂಘ ಹಾಗೂ ಜೈನ್ ಸಮುದಾಯದ ಮುಖಂಡರಾದ ಸೂಜಾ ರಾಮ್‌ಜೀ, ಗೋಪಾಲ್‌ಸಿಂಗ್, ಸುರೇಶ್, ಪೃಥ್ವಿರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT