ಬೆಂಗಳೂರು: ರಾಜ್ಯಸಭೆ ಚುನಾವಣಾ ಫಲಿತಾಂಶದ ಸಂಭ್ರಮಾಚರಣೆ ವೇಳೆ ವಿಧಾನಸೌಧ ಕಾರಿಡಾರ್‌ನಲ್ಲಿ ಕಿಡಿಗೇಡಿಯೊಬ್ಬ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಸೈಯದ್ ನಾಸಿರ್ ಹುಸೇನ್ ಅವರ ಫಲಿತಾಂಶ ಹೊರಬೀಳುತ್ತಿದ್ದಂತೆ ಅವರ ಅಭಿಪ್ರಾಯ ತೆಗೆದುಕೊಳ್ಳಲು ವಿದ್ಯುನ್ಮಾನ ಮಾಧ್ಯಮದವರು ಕ್ಯಾಮೆರಾ ಹಿಡಿದಿದ್ದರು. ಆಗ ನಾಸಿರ್ ಅವರ ಹಿಂದಿದ್ದ ಕೆಲವರು ‘ನಾಸೀರ್ ಸಾಬ್ ಜಿಂದಾಬಾದ್’ ಎಂದು ಎರಡು ಬಾರಿ ಘೋಷಣೆ ಕೂಗಿದರು. ಅದರ ಬೆನ್ನಲ್ಲೇ, ಜೋರಾಗಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಯೂ ಕೇಳಿಸಿತು. ಹೀಗೆ ಕೂಗಿದಾತ, ಆ ಕ್ಷಣವೇ ಅಲ್ಲಿಂದ ನಾಪತ್ತೆಯಾದ ಎಂದು ದೂರಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೈಯದ್ ನಾಸಿರ್ ಹುಸೇನ್, ‘ಕರ್ನಾಟಕ ಜಿಂದಾಬಾದ್, ನಾಸಿರ್ ಹುಸೇನ್ ಜಿಂದಾಬಾದ್ ಎಂಬ ಘೋಷಣೆಯನ್ನಷ್ಟೇ ನಾನು ಕೇಳಿದ್ದೇನೆ. ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ನಾನು ಕೇಳಿಲ್ಲ’ ಎಂದರು.
‘ಆ ರೀತಿ ಕೂಗಿರುವುದು ನನಗೆ ಕೇಳಿಸಿಲ್ಲ. ಹಾಗೆ ಯಾರಾದರೂ ಘೋಷಣೆ ಕೂಗಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಿ’ ಎಂದೂ ಹೇಳಿದರು.
ಈ ಪ್ರಕರಣದ ಬೆನ್ನಲ್ಲೇ, ರಾತ್ರಿ ಎಂಟರ ಸುಮಾರಿಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ನೇತೃತ್ವದಲ್ಲಿ ವಿಧಾನಸೌಧ ಠಾಣೆಗೆ ತೆರಳಿದ ಬಿಜೆಪಿ ನಾಯಕರು, ಪ್ರತಿಭಟನೆ ನಡೆಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ನಾಸಿರ್ ಸಾಬ್ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆಯೇ ವಿನಾ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿಲ್ಲ’ ಎಂದೂ ಪ್ರತಿಪಾದಿಸಿದೆ.
ಸ್ವಯಂಪ್ರೇರಿತ ದೂರು: ‘ವಿಡಿಯೊ ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಘೋಷಣೆ ಕೂಗಿದ ನಂತರ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ’ ಎಂದು ವಿಧಾನ ಸೌಧ ಠಾಣೆಯ ಪೊಲೀಸರು ಹೇಳಿದರು.