ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ. ಪ್ರಕರಣ: ಎಫ್‌ಐಆರ್ ದಾಖಲಾದ ಬೆನ್ನಲ್ಲೇ ವಿಡಿಯೊ ಹರಿಬಿಟ್ಟ ಯುವತಿ

Last Updated 14 ಮಾರ್ಚ್ 2021, 1:41 IST
ಅಕ್ಷರ ಗಾತ್ರ

ಬೆಂಗಳೂರು: ‘ತಮ್ಮ ತೇಜೋವಧೆ ಮಾಡಲು ಸಿ.ಡಿ ಷಡ್ಯಂತ್ರ ರೂಪಿಸಿರುವವರ ಬಗ್ಗೆ ತನಿಖೆ ನಡೆಸಬೇಕು’ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ದೂರು ನೀಡಿರುವ ಬೆನ್ನಲ್ಲೇ, ಸಂತ್ರಸ್ತೆ ಎನ್ನಲಾಗಿರುವ ಯುವತಿ ರಕ್ಷಣೆ ಕೋರಿ ವಿಡಿಯೊ ಬಿಡುಗಡೆ ಮಾಡಿದ್ದಾರೆ.

‘ತಮ್ಮನ್ನು ರಾಜಕೀಯವಾಗಿ ಮುಗಿಸಲು ‘ಮಹಾನಾಯಕ’ ಷಡ್ಯಂತ್ರ ರೂಪಿಸಿದ್ದಾರೆ. ದೂರಿನಲ್ಲಿ ಎಲ್ಲ ವಿವರ ನೀಡುವೆ’ ಎಂದು ಹೇಳಿದ್ದ ರಮೇಶ ಜಾರಕಿಹೊಳಿ, ದೂರಿನಲ್ಲಿ ಯಾವುದನ್ನೂ ಉಲ್ಲೇಖಿಸಿಲ್ಲ. ಇದರ ಹಿಂದೆ ಹಲವರಿದ್ದಾರೆ ಎಂದಷ್ಟೇ ಹೇಳಿದ್ದಾರೆ. ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ.

ಈ ಬೆಳವಣಿಗೆ ಮಧ್ಯೆಯೇ 34 ಸೆಕೆಂಡ್ ಅವಧಿಯ ವಿಡಿಯೊ ಬಿಡುಗಡೆ ಮಾಡಿರುವ ಸಂತ್ರಸ್ತೆ, ತನಗೆ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕೋರಿದ್ದಾರೆ.

‘ರಮೇಶ ಜಾರಕಿಹೊಳಿ ಅವರೇ ನನಗೆ ಕೆಲಸ ಕೊಡಿಸುತ್ತೇನೆ ಎಂದರು. ಅದೆಲ್ಲ ಮಾಡಿ ಈಗ ವಿಡಿಯೊವನ್ನು ಹೊರಗಡೆ ಬಿಡುತ್ತಿದ್ದಾರೆ. ನನಗೆ ಯಾವುದೇ ರಕ್ಷಣೆ ಇಲ್ಲ’ ಎಂದೂ ಯುವತಿ ಹೇಳಿದ್ದಾರೆ.

‘ಬೊಮ್ಮಾಯಿ ಅವರೇ ನನಗೆ ರಕ್ಷಣೆ ಕೊಡಿ. ಈ ವಿಡಿಯೊ ಹೇಗೆ ಮಾಡಿದರು ಎಂಬುದು ನನಗೆ ಗೊತ್ತಿಲ್ಲ. ಈಗಾಗಲೇ ನನ್ನ ಮಾನ, ಮರ್ಯಾದೆ ಹರಾಜು ಆಗಿಬಿಟ್ಟಿದೆ. ನನ್ನ ಮನೆ ಹತ್ತಿರ ಜನ ಬಂದು ಕೇಳಿಕೊಂಡು ಹೋಗುತ್ತಿದ್ದಾರೆ. ಅಪ್ಪ– ಅಮ್ಮ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನು ಸಹ ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನಮಗೆ ರಾಜಕೀಯ ಬೆಂಬಲವೂ ಇಲ್ಲ' ಎಂದು ಯುವತಿ ವಿವರಿಸಿದ್ದಾರೆ.

ಆಪ್ತನ ಮೂಲಕ ರಮೇಶ ದೂರು
ರಮೇಶ ಜಾರಕಿಹೊಳಿ ತಮ್ಮ ಆಪ್ತರಾದ ಮಾಜಿ ಶಾಸಕ ಎಂ.ವಿ. ನಾಗರಾಜು ಮೂಲಕ ಸಲ್ಲಿಸಲಾಗಿರುವ ದೂರಿನ ಅನ್ವಯ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ದೂರಿನ ಪರಿಶೀಲನೆ ನಡೆಸಿದ ಇನ್‌ಸ್ಪೆಕ್ಟರ್, ಅಪರಾಧ ಸಂಚು (ಐಪಿಸಿ 34), ಕ್ರಿಮಿನಲ್ ಪಿತೂರಿ (ಐಪಿಸಿ 120ಬಿ), ಬೆದರಿಸಿ ಸುಲಿಗೆಗೆ ಯತ್ನ (ಐಪಿಸಿ 385), ಸಹಿ ನಕಲು ಮಾಡಿದ (ಐಪಿಸಿ 465) ಹಾಗೂ ಗೌರವ ಹಾಳು ಮಾಡಲು ನಕಲು ಮಾಡಿದ (ಐಪಿಸಿ 469) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ದೂರಿನ ವಿವರ: ‘ನನ್ನನ್ನು ರಾಜಕೀಯವಾಗಿ ತೇಜೋವಧೆ ಮಾಡಲು, ರಾಜಕೀಯವಾಗಿ ಮುಗಿಸಲು ಹಾಗೂ ಹಣ ವಸೂಲಿ ಮಾಡಲು ಷಡ್ಯಂತ್ರವನ್ನು ರೂಪಿಸುತ್ತಿದ್ದಾರೆ’ ಎಂದು ರಮೇಶ ಜಾರಕಿಹೊಳಿ ದೂರಿನಲ್ಲಿ ತಿಳಿಸಿದ್ದಾರೆ.

‘ಸುಮಾರು 3 ತಿಂಗಳಿನಿಂದ ಸದಾಶಿವನಗರದಲ್ಲಿ ನನ್ನ ವಿರುದ್ಧ ಮಸಲತ್ತು ಹಾಗೂ ಮೋಸ ಮಾಡಿ ಒಂದು ನಕಲಿ ಸಿ.ಡಿ.ಯನ್ನು ಸೃಷ್ಟಿಸಿ ಮಾನಸಿಕವಾಗಿ ಹಿಂಸಿಸಿ, ರಾಜಕೀಯವಾಗಿ ಮಾನಹಾನಿ ಮಾಡಿ ನನ್ನಿಂದ ಹಣ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದರ ಹಿಂದೆ ಹಲವಾರು ಜನರು ಇದ್ದು, ಕೆಲವರು ಷಡ್ಯಂತ್ರ ರಚಿಸಿ ಇನ್ನು ಕೆಲವರು ನಕಲಿ ಸಿ.ಡಿ ತಯಾರಿಸಲು ಭಾಗಿಯಾಗಿ ಹಾಗೂ ಇತರರನ್ನು ಬಳಸಿಕೊಂಡು ಅಂತರ್ಜಾಲ ವಾಹಿನಿಯಲ್ಲಿ ಬಿಡುಗಡೆ ಮಾಡಿ ರಾಜಕೀಯ ಅಸ್ಥಿರತೆ ಉಂಟು ಮಾಡುತ್ತಿದ್ದಾರೆ. ಅವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಲವೆಡೆ ಎಸ್‌ಐಟಿ ಪರಿಶೀಲನೆ
ವರದಿಗಾರರು, ಸರ್ಕಾರಿಶಿಕ್ಷಕಿ ಸೇರಿ ಹಲವರನ್ನು ವಿಚಾರಣೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು, ಬೆಂಗಳೂರು, ಬೀದರ್, ದೇವನಹಳ್ಳಿ, ತುಮಕೂರು ಸೇರಿದಂತೆ ಹಲವೆಡೆ ಶನಿವಾರ ಪರಿಶೀಲನೆ ನಡೆಸಿದರು.

ವಿಚಾರಣೆಗೆ ಒಳಪಡಿಸಿದ್ದ ವ್ಯಕ್ತಿಗಳ ಮನೆ ಹಾಗೂ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದರು. ಕಂಪ್ಯೂಟರ್, ಹಾರ್ಡ್‌ಡಿಸ್ಕ್ ಸೇರಿದಂತೆ ಹಲವು ವಸ್ತುಗಳನ್ನು ತಮ್ಮ ಸುಪರ್ದಿಗೆ ಪಡೆದರು ಎಂಬುದಾಗಿ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT