ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಅಗತ್ಯ ಬಿದ್ದರೆ ಮಾತ್ರ ಎನ್‌ಐಎಗೆ– ಸಿದ್ದರಾಮಯ್ಯ

Published 3 ಮಾರ್ಚ್ 2024, 8:27 IST
Last Updated 3 ಮಾರ್ಚ್ 2024, 8:27 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಸ್ಫೋಟ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅಗತ್ಯ ಬಿದ್ದರೆ ಎನ್‌ಐಎ ತನಿಖೆ ವಹಿಸಲಾಗುವುದು. ಇದರಲ್ಲಿ ಬಿಜೆಪಿ ರಾಜಕೀಯ ಮಾಡಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಸ್ಫೋಟ ಪ್ರಕರಣವನ್ನು ಸರ್ಕಾರ ಹಗುರವಾಗಿ ಪರಿಗಣಿಸಿಲ್ಲ. ಇದು ಗಂಭೀರವಾದ ವಿಷಯ. ಜನರ ಸುರಕ್ಷತೆ ಮುಖ್ಯ. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಆರೋಪಿಗಳು ಸಿಕ್ಕಿಲ್ಲ. ಅಗತ್ಯ ಎನಿಸಿದರೆ ಮಾತ್ರ ಎನ್‌ಐಎಗೆ ವಹಿಸುವ ಬಗ್ಗೆ ಆಲೋಚನೆ ಮಾಡಲಾಗುವುದು’ ಎಂದು ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯಿಸಿದರು.

‘ಬ್ರ್ಯಾಂಡ್ ಬೆಂಗಳೂರು ಅಲ್ಲ, ಬಾಂಬ್ ಬೆಂಗಳೂರು ಎಂಬ ಬಿಜೆಪಿಯವರ ಟೀಕೆ ಸರಿಯಲ್ಲ. ಅವರು ಅಧಿಕಾರದಲ್ಲಿ ಇದ್ದಾಗ ನಾಲ್ಕು ಬಾರಿ ಬಾಂಬ್ ಸ್ಫೋಟ ಆಗಿದೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ, ಮಲ್ಲೇಶ್ವರದಲ್ಲಿ ಬಿಜೆಪಿ ಕಚೇರಿ ಎದುರೇ ಸ್ಫೋಟವಾಗಿತ್ತು. ಆಗ ಅಧಿಕಾರದಲ್ಲಿ ಇದ್ದವರು ಯಾರು? ಅದನ್ನು ಏನಂತ ಕರೆಯಬೇಕು’ ಎಂದು ಪ್ರಶ್ನಿಸಿದರು.

‘ಎನ್‌ಐಎ, ಗುಪ್ತಚರ ಇಲಾಖೆ(ಐ.ಬಿ), ಗೂಢಚಾರ ಸಂಸ್ಥೆ ‘ರಾ’ (ಆರ್‌ಎಡಬ್ಲ್ಯೂ) ಯಾರ ಅಧೀನದಲ್ಲಿವೆ. ಸ್ಫೋಟ ನಡೆದಿದೆ ಎಂದರೆ ಆ ಸಂಸ್ಥೆಗಳ ವೈಫಲ್ಯವೂ ಕಾರಣ ಅಲ್ಲವೇ? ಹಾಗೆಂದ ಮಾತ್ರಕ್ಕೆ ಸ್ಫೋಟ ಪ್ರಕರಣವನ್ನು ನಾನು ಸಮರ್ಥನೆ ಮಾಡುತ್ತಿಲ್ಲ. ಬಲವಾಗಿ ಖಂಡಿಸುತ್ತೇನೆ’ ಎಂದರು.

‘ಲೋಕಸಭೆ ಚುನಾವಣೆಗೆ ತಯಾರಿ ನಡೆಯುತ್ತಿದ್ದು, ಇನ್ನೂ ತೀವ್ರಗೊಳಿಸುತ್ತೇವೆ. ಕನಿಷ್ಠ 20 ಸ್ಥಾನಗಳಲ್ಲಿ ಗೆಲ್ಲುತ್ತೇವೆ’ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

‘ಏನಾದರೂ ಮಾಡಿಕೊಳ್ಳಿ, ನಮಗೆ ಮತ ಹಾಕಿ ಎಂದು ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿಯವರಿಗೆ ಕಾಂಗ್ರೆಸ್ ಹೇಳಿದೆ ಎಂಬ ಬಿಜೆಪಿ ಮುಖಂಡರ ಹೇಳಿಕೆ ಸರಿಯಲ್ಲ. ಏನಾದರೂ ಮಾಡಿ ಮತ ಹಾಕಿ ಎಂದು ಯಾರದರೂ ಹೇಳುತ್ತಾರೆಯೇ, ನಾವಂತೂ ಹಾಗೆ ಹೇಳಿಲ್ಲ. ಹೇಳುವುದೂ ಇಲ್ಲ’ ಎಂದು ಸ್ಪಷ್ಟಪಡಿಸಿದರು. 

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಕಾರಣ. ಬರಗಾಲ ಬಂದಿದೆ ನಿಜ. ಆದರೆ, ಅಧಿಕಾರ ಹಂಚಿಕೆ ಮಾಡಬಾರದೆ? ₹3.71 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದೇವೆ. ನಿಗಮ– ಮಂಡಳಿ ಅಧ್ಯಕ್ಷರಿಗೆ ಅಧಿಕಾರ ನೀಡಲು ಹೆಚ್ಚು ಹಣ ವೆಚ್ಚವಾಗುವುದಿಲ್ಲ’ ಎಂದರು.

‘ಚಿಕ್ಕಮಗಳೂರು ತಾಲ್ಲೂಕು ಬರಪಟ್ಟಿಗೆ ಸೇರಿಸಲು ಹಲವು ಮಾನದಂಡಗಳಿವೆ. ಅವುಗಳ ಅನುಸಾರ 17 ತಾಲ್ಲೂಕುಗಳು ಬರ ಪಟ್ಟಿಯಿಂದ ಹೊರಗಿವೆ. ಅದರಲ್ಲಿ ಚಿಕ್ಕಮಗಳೂರು ಕೂಡ ಒಂದು. ಸಾಧ್ಯತೆ ಇದ್ದರೆ ಎಲ್ಲಾ ತಾಲ್ಲೂಕುಗಳನ್ನು ಬರಪಟ್ಟಿಗೆ ಸೇರಿಸುತ್ತಿದ್ದೆವು’ ಎಂದು ಸ್ಪಷ್ಟಪಡಿಸಿದರು.

‘ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಾಗಿರುವ ಮಂಗನ ಕಾಯಿಲೆ ತಡೆಗೆ ಕ್ರಮ ಕೈಗೊಳ್ಳುವ ಬಗ್ಗೆ ಆರೋಗ್ಯ ಸಚಿವರೊಂದಿಗೆ ಮಾತನಾಡುತ್ತೇನೆ. ಅಕ್ರಮ ಭೂಮಂಜೂರಾತಿ ಬಗ್ಗೆ ತಹಶೀಲ್ದಾರ್‌ಗಳ ತಂಡ ನಡೆಸಿರುವ ತನಿಖಾ ವರದಿ ಕಂದಾಯ ಸಚಿವರ ಬಳಿ ಇದ್ದು, ಅವರೊಂದಿಗೂ ಈ ಬಗ್ಗೆ ಚರ್ಚಿಸುತ್ತೇನೆ’ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT