ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಕ್ತಚಂದನ’ ಕಳ್ಳ ಸಾಗಣೆಯ ‘ಕಿಂಗ್‌ಪಿನ್‌’ ಬಲೆಗೆ

ಬೆಂಗಳೂರು ಪೊಲೀಸರ ಕಾರ್ಯಾಚರಣೆ * ₹ 3.50 ಕೋಟಿ ಮೌಲ್ಯದ ತುಂಡುಗಳು ಜಪ್ತಿ
Last Updated 19 ಮೇ 2019, 4:09 IST
ಅಕ್ಷರ ಗಾತ್ರ

ಬೆಂಗಳೂರು: ‘ರಕ್ತಚಂದನ’ದ ತುಂಡುಗಳನ್ನು ವಿದೇಶಗಳಿಗೆ ಕಳ್ಳ ಸಾಗಣೆ ಮಾಡುತ್ತಿದ್ದ ಅಂತರರಾಷ್ಟ್ರೀಯ ಮಟ್ಟದ ಜಾಲವನ್ನು ಭೇದಿಸಿರುವ ಬೆಂಗಳೂರು ಪೊಲೀಸರು, ಜಾಲದ ‘ಕಿಂಗ್‌ಪಿನ್‌’ ಅಬ್ದುಲ್ ರಷೀದ್ ಅಲಿಯಾಸ್‌ ಪುತ್ತು ಬಾಯಾರ್‌ನನ್ನು (48) ಸೆರೆ ಹಿಡಿದಿದ್ದಾರೆ.

‘ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅಬ್ದುಲ್, ತನ್ನದೇ ಗ್ಯಾಂಗ್‌ ಕಟ್ಟಿಕೊಂಡು ರಕ್ತಚಂದನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ. ಆತನಿಗಾಗಿ ಪೊಲೀಸರು 10 ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದರು. ಆತ ಸೇರಿದಂತೆ 13 ಮಂದಿ ಸ್ಮಗ್ಲರ್‌ಗಳು ಇದೀಗ ಸಿಕ್ಕಿಬಿದ್ದಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಸಿಗುವ ರಕ್ತಚಂದನ ಮರಗಳನ್ನು ಕಡಿಸುತ್ತಿದ್ದ ಆರೋಪಿಗಳು, ಅವುಗಳ ತುಂಡುಗಳನ್ನು ಹೊರ ರಾಜ್ಯ ಹಾಗೂ ವಿದೇಶಕ್ಕೆ ಕಳುಹಿಸಿ ಹಣ ಸಂಪಾದನೆ ಮಾಡುತ್ತಿದ್ದರು. ಸದ್ಯ ಆರೋಪಿಗಳಿಂದ ₹ 3.50 ಕೋಟಿ ಮೌಲ್ಯದ 4,000 ಕೆ.ಜಿ ರಕ್ತಚಂದನದ ತುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

ಗೋದಾಮಿನಲ್ಲಿ ಸಂಗ್ರಹ: ‘ಬೆಂಗಳೂರಿನ ಸುಬ್ರಹ್ಮಣ್ಯಪುರ, ಎಲೆಕ್ಟ್ರಾನಿಕ್ ಸಿಟಿ, ವಿನಾಯಕ ನಗರ ಸೇರಿದಂತೆ ಕೆಲ ಪ್ರದೇಶಗಳ ಗೋದಾಮಿನಲ್ಲಿ ತುಂಡುಗಳನ್ನು ಸಂಗ್ರಹಿಸಿಡಲಾಗುತ್ತಿತ್ತು. ಬೇಡಿಕೆಗೆ ತಕ್ಕಂತೆ ಚೆನ್ನೈ ಹಾಗೂ ಮುಂಬೈಗೆ ಸಾಗಿಸಿ, ಅಲ್ಲಿಂದ ಹಾಂಕಾಂಗ್, ಮಲೇಷ್ಯಾ, ವಿಯೆಟ್ನಾಂ ಹಾಗೂ ಚೀನಾಕ್ಕೆ ಕಳುಹಿಸಲಾಗುತ್ತಿತ್ತು’ ಎಂದು ಸುನೀಲ್‌ಕುಮಾರ್ ತಿಳಿಸಿದರು.

‘ಕಳ್ಳ ಸಾಗಣೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಇನ್‌ಸ್ಪೆಕ್ಟರ್ ಎಸ್‌.ಕೆ.ಮಾಲ್ತೇಶ್‌, ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದರ ತನಿಖೆ ಕೈಗೊಂಡಾಗಲೇ ಅಂತರರಾಷ್ಟ್ರೀಯ ಮಟ್ಟದ ಜಾಲದ ಸುಳಿವು ಸಿಕ್ಕಿತು. ಅದನ್ನು ಭೇದಿಸಲು ಪೊಲೀಸರ ವಿಶೇಷ ತಂಡಗಳನ್ನು ರಚಿಸಲಾಗಿತ್ತು’ ಎಂದರು.

‘ವಿನಾಯಕನಗರ ಬಳಿಯ ನ್ಯಾಷನಲ್ ಟ್ರಾವೆಲ್ಸ್‌ಗೆ ಸೇರಿದ್ದ ಗೋದಾಮು ಸಮೀಪದಲ್ಲಿ ಶುಕ್ರವಾರ ರಾತ್ರಿ ನಿಂತಿದ್ದ ಟಾಟಾ ಏಸ್ ವಾಹನದ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಎಂ.ಎಸ್‌.ಬಾಷಾ ಎಂಬಾತನನ್ನು ಬಂಧಿಸಿದ್ದರು. 7 ಬಾಕ್ಸ್‌ಗಳಲ್ಲಿ ಶೇಖರಿಸಿದ್ದ 500 ಕೆ.ಜಿ ರಕ್ತಚಂದನದ ತುಂಡುಗಳನ್ನು ಜಪ್ತಿ ಮಾಡಿದ್ದರು’.

‘ಬಾಷಾ ನೀಡಿದ್ದ ಮಾಹಿತಿಯಂತೆ ಕಾರ್ಯಾಚರಣೆ ಮುಂದುವರಿಸಿದ್ದ ಪೊಲೀಸರು, ಎಲೆಕ್ಟ್ರಾನಿಕ್ ಸಿಟಿ ಸಮೀಪದ ನಾಗಮಂಗಲದಲ್ಲಿರುವ ಗೋದಾಮಿನ ಮೇಲೆ ದಾಳಿ ಮಾಡಿ 3,500 ಕೆ.ಜಿ ತೂಕದ ತುಂಡುಗಳನ್ನು ಸಹ ವಶಕ್ಕೆ ಪಡೆದಿದ್ದರು’ ಎಂದರು.

ಮನೆಯಲ್ಲೇ ಕಿಂಗ್‌ಪಿನ್ ಬಂಧನ: ‘ಅಬ್ದುಲ್ ರಷೀದ್‌ನ 12 ಸಹಚರರನ್ನು ಬಂಧಿಸಿದ್ದ ಪೊಲೀಸರಿಗೆ, ಆತ ಮಾತ್ರ ಸಿಕ್ಕಿರಲಿಲ್ಲ. ಆತನ ಬಗ್ಗೆ ಮಾಹಿತಿ ಕಲೆ ಹಾಕಲು ವಿಶೇಷ ತಂಡ ರಚಿಸಲಾಗಿತ್ತು. ಆ ತಂಡವೇ ಪುತ್ತೂರಿನಲ್ಲಿರುವ ಮನೆಯಲ್ಲೇ ಆತನನ್ನು ಬಂಧಿಸಿದೆ’ ಎಂದು ಸುನೀಲ್‌ಕುಮಾರ್ ವಿವರಿಸಿದರು.

‘ಖೋಟಾನೋಟು ಚಲಾವಣೆಯಲ್ಲೂ ಭಾಗಿಯಾಗಿದ್ದ ಅಬ್ದುಲ್‌ ರಷೀದ್‌ನನ್ನು 2009ರಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಆತ ತಲೆಮರೆಸಿಕೊಂಡು ಓಡಾಡುತ್ತಿದ್ದ. ರಕ್ತಚಂದನ ಕಳ್ಳ ಸಾಗಣೆ ದಂಧೆಯಲ್ಲೂ ತೊಡಗಿಸಿದ್ದ. ಆಂಧ್ರಪ್ರದೇಶ, ಕೇರಳ ಹಾಗೂ ಕರ್ನಾಟಕದಲ್ಲಿ (ಬೆಂಗಳೂರು, ಮಂಗಳೂರು) ಆತನ ವಿರುದ್ಧ 9 ಪ್ರಕರಣಗಳು ದಾಖಲಾಗಿದ್ದವು. ‘ಮೋಸ್ಟ್‌ ವಾಟೆಂಡ್‌ ಸ್ಮಗ್ಲರ್’ ಆಗಿದ್ದ ಈತನಿಗಾಗಿ ಐದು ರಾಜ್ಯಗಳ ಪೊಲೀಸರು ಶೋಧ ನಡೆಸುತ್ತಿದ್ದರು’ ಎಂದರು.

ಕಟ್ಟಿಗೇಹಳ್ಳಿಯಲ್ಲೂ ಗೋದಾಮು: ‘ಜಾಲದ ಸದಸ್ಯನಾಗಿದ್ದ ಜುಬೇರ್‌ಖಾನ್, ಹೊಸಕೋಟೆಯ ಕಟ್ಟಿಗೇಹಳ್ಳಿ ನಿವಾಸಿ. ತನ್ನ ಗೋದಾಮಿನಲ್ಲೇ ಆತ ರಕ್ತ ಚಂದನದ ತುಂಡುಗಳನ್ನು ಸಂಗ್ರಹಿಸಿಟ್ಟುಕೊಂಡು ಸಾಗಣೆ ಮಾಡುತ್ತಿದ್ದ. ಆತನ ವಿರುದ್ಧ ಆಂಧ್ರಪ್ರದೇಶದಲ್ಲಿ 4 ಪ್ರಕರಣಗಳು ದಾಖಲಾಗಿದ್ದವು. ಈಗ ಆತನನ್ನೂ ಬಂಧಿಸಲಾಗಿದೆ’ ಎಂದು ಸುನೀಲ್‌ಕುಮಾರ್ ಮಾಹಿತಿ ನೀಡಿದರು.

‘ಅಬ್ದುಲ್‌ ರಷೀದ್‌ನ ಕೆಲ ಸಹಚರರು ಗೋದಾಮಗಳಲ್ಲಿ ಕಾವಲು ಕಾಯುತ್ತಿದ್ದರು. ಹಲವರು ಸಾಗಣೆ ಮಾಡಲು ಸಹಾಯ ಮಾಡುತ್ತಿದ್ದರು. ಜಾಲದಲ್ಲಿ ಮತ್ತಷ್ಟು ಮಂದಿ ಇರುವ ಮಾಹಿತಿ ಇದೆ’ ಎಂದು ಹೇಳಿದರು.

ಚುನಾವಣೆಯಿಂದ ಭಯಗೊಂಡಿದ್ದ ಸ್ಮಗ್ಲರ್‌ಗಳು
‘ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ದೇಶದಾದ್ಯಂತ ಪೊಲೀಸರು, ವಾಹನಗಳ ತಪಾಸಣೆ ಹೆಚ್ಚಿಸಿದ್ದರು. ಅದರಿಂದ ಭಯಗೊಂಡಿದ್ದ ಸ್ಮಗ್ಲರ್‌ಗಳು, ರಕ್ತಚಂದನ ಸಾಗಣೆಯನ್ನೇ ಕೆಲ ದಿನ ಸ್ಥಗಿತಗೊಳಿಸಿದ್ದರು’ ಎಂದು ಸಿಸಿಬಿಯ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಅಲೋಕ್‌ಕುಮಾರ್ ಹೇಳಿದರು.

‘ಖಾಸಗಿ ಬಸ್‌ ಹಾಗೂ ಲಾರಿಗಳಲ್ಲಿ ರಕ್ತಚಂದನ ಸಾಗಿಸಿದರೆ ಸಿಕ್ಕಿಬೀಳುತ್ತೇವೆ ಎಂಬ ಭಯ ಆರೋಪಿಗಳಿಗೆ ಇತ್ತು. ಚುನಾವಣೆ ಮುಗಿಯುವುದನ್ನೇ ಅವರೆಲ್ಲ ಕಾಯುತ್ತಿದ್ದರು. ಐದು ರಾಜ್ಯಗಳಲ್ಲಿ ಚುನಾವಣೆಗಳು ಮುಗಿದಿದ್ದರಿಂದ, ಶುಕ್ರವಾರದಿಂದ ಪುನಃ ಕಳ್ಳಸಾಗಣೆ ಆರಂಭಿಸಿದ್ದರು. ಮೊದಲ ಪ್ರಯತ್ನದಲ್ಲೇ ನಮಗೆ ಸಿಕ್ಕಿಬಿದ್ದರು’ ಎಂದು ವಿವರಿಸಿದರು.

ನ್ಯಾಷನಲ್‌ ಟ್ರಾವೆಲ್ಸ್‌ ಸಿಬ್ಬಂದಿಯೂ ಭಾಗಿ
‘ಬೆಂಗಳೂರಿನಿಂದ ವಿವಿಧ ನಗರಗಳಿಗೆ ಹೋಗುತ್ತಿದ್ದ ಖಾಸಗಿ ಬಸ್‌ಗಳಲ್ಲಿ ರಕ್ತಚಂದನದ ತುಂಡುಗಳನ್ನು ಆರೋಪಿಗಳು ಸಾಗಿಸುತ್ತಿದ್ದರು. ಆ ಬಗ್ಗೆ ಯಾವುದೇ ಅನುಮಾನ ಸಹ ಬರುತ್ತಿರಲಿಲ್ಲ’ ಎಂದು ಅಲೋಕ್‌ಕುಮಾರ್ ಹೇಳಿದರು.

‘ಬಂಧಿತ ಆರೋಪಿ ಕೋಣನಕುಂಟೆಯ ಮುಬಾರಕ್, ‘ನ್ಯಾಷನಲ್‌ ಟ್ರಾವೆಲ್ಸ್’ ಕಂಪನಿಯ ಪಾರ್ಸಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಆತನೇ ರಕ್ತಚಂದನವನ್ನು ಬಸ್‌ನ ಡಿಕ್ಕಿಯಲ್ಲಿಟ್ಟು ಸಾಗಿಸುತ್ತಿದ್ದ’ ಎಂದರು.

‘ನಾಲ್ಕೈದು ತುಂಡುಗಳನ್ನು ಒಟ್ಟುಗೂಡಿಸಿ ಅದರ ಸುತ್ತಲೂ ಬಿಳಿ ಬಣ್ಣದ ಚೀಲದ ಹೊದಿಕೆ ಹಾಕಿ ಪಾರ್ಸಲ್‌ ರೀತಿಯಲ್ಲೇ ಸಿದ್ಧಪಡಿಸಲಾಗುತ್ತಿತ್ತು. ಪ್ರಯಾಣಿಕರನ್ನು ಕರೆದೊಯ್ಯುವ ಬಸ್‌ಗಳಲ್ಲೇ ಪಾರ್ಸಲ್‌ ಇಟ್ಟು ಸಾಗಿಸಲಾಗುತ್ತಿತ್ತು’ ಎಂದು ಹೇಳಿದರು.

‘ಚೆನ್ನೈ ಹಾಗೂ ಮುಂಬೈನಿಂದ ಹಡಗು ಹಾಗೂ ವಿಮಾನಗಳಲ್ಲಿ ‘ಕಾರ್ಗೊ’ ಮುಖಾಂತರ ರಕ್ತಚಂದನದ ತುಂಡುಗಳು ಹಾಂಕಾಂಗ್, ಮಲೇಷ್ಯಾ, ವಿಯೆಟ್ನಾಂ ಮತ್ತು ಚೀನಾ ತಲುಪುತ್ತಿದ್ದವು. ಅಂತರರಾಷ್ಟ್ರೀಯ ಸ್ಮಗ್ಲರ್‌ ಜೊತೆ ಈ ಜಾಲದ ಸದಸ್ಯರು ಒಡನಾಟವಿಟ್ಟುಕೊಂಡಿದ್ದರು’ ಎಂದು ಅಲೋಕ್‌ಕುಮಾರ್ ತಿಳಿಸಿದರು.

ಕಟ್ಟಿಗೇಹಳ್ಳಿಯ ಗೋದಾಮುಗಳ ಮೇಲೂ ದಾಳಿ
ಅಂತರರಾಷ್ಟ್ರೀಯ ಜಾಲ ಭೇದಿಸುತ್ತಿದ್ದಂತೆ 150ಕ್ಕೂ ಹೆಚ್ಚು ಪೊಲೀಸರು,ಹೊಸಕೋಟೆಯ ಕಟ್ಟಿಗೇಹಳ್ಳಿಯಲ್ಲಿರುವ ಗೋದಾಮುಗಳ ಮೇಲೂ ಶನಿವಾರ ನಸುಕಿನಲ್ಲಿ ದಿಢೀರ್ ದಾಳಿ ಮಾಡಿದರು.

‘ರಕ್ತಚಂದನ ಸಂಗ್ರಹಿಸಿಟ್ಟಿದ್ದ ಮಾಹಿತಿ ಬಂದಿದ್ದರಿಂದ ದಾಳಿ ಮಾಡಲಾಯಿತು. ವ್ಯಾಪಾರಿಯೊಬ್ಬರ ಮನೆಯಲ್ಲಿ ಶೋಧ ನಡೆಸಿ ಎಚ್ಚರಿಕೆ ನೀಡಲಾಯಿತು’ ಎಂದು ಟಿ.ಸುನೀಲ್‌ಕುಮಾರ್‌ ಹೇಳಿದರು.

‘ಅಬ್ದುಲ್ ರಷೀದ್ ಹಾಗೂ ಆತನ ಸಹಚರರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದವು. ಅದರಿಂದ ಕಟ್ಟಿಗೇಹಳ್ಳಿಯ ವ್ಯಾಪಾರಿಗಳು ಎಚ್ಚೆತ್ತುಕೊಂಡಿದ್ದರಿಂದ ಗೋದಾಮುಗಳಲ್ಲಿ ಏನು ಸಿಕ್ಕಿಲ್ಲ. ಆದರೆ, ಕಟ್ಟಿಗೇಹಳ್ಳಿ ಮೇಲೆ ಪೊಲೀಸರು ಸದಾ ಕಣ್ಣಿಡಲಿದ್ದಾರೆ’ ಎಂದು ಹೇಳಿದರು.

‘ಸ್ಥಳೀಯರು ಕಲ್ಲು ತೂರಾಟ ನಡೆಸಬಹುದು ಎಂಬ ಮಾಹಿತಿ ಇತ್ತು. ಅದೇ ಕಾರಣಕ್ಕೆ ಹೆಚ್ಚಿನ ಪೊಲೀಸರನ್ನು ದಾಳಿ ವೇಳೆ ಬಳಸಿಕೊಳ್ಳಲಾಯಿತು’ ಎಂದರು.

ಸಿಸಿಬಿಯ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ನೇತೃತ್ವದಲ್ಲಿ ನಡೆದ ದಾಳಿ ವೇಳೆ ಡಿಸಿಪಿಗಳಾದ ಎಸ್‌.ಗಿರೀಶ್, ದೇವರಾಜ್, ಅಬ್ದುಲ್ ಅಹದ್ ಇದ್ದರು.

ಬಂಧಿತ ಆರೋಪಿಗಳು
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಅಬ್ದುಲ್ ರಷೀದ್ ಅಲಿಯಾಸ್ ಪುತ್ತು, ಬೆಂಗಳೂರು ಎಚ್‌ಎಎಲ್‌ನ ಜುಬೇರ್‌ಖಾನ್,ಸಲೀಂಖಾನ್, ತಾಹೀರ್‌ಖಾನ್, ವಿಜಯನಗರದ ಆಲಿ ಖಾನ್‌ ಅಲಿಯಾಸ್ ಮಹಮ್ಮದ್ ರಹೀಂಖಾನ್, ಕೋಣನಕುಂಟೆಯ ಮುಬಾರಕ್, ಬಂಟ್ವಾಳದ ಎಂ.ಎಸ್.ಬಾಷಾ, ಶಫಿ, ಮುನ್ನಾ ಅಲಿಯಾಸ್ ಮಹಮ್ಮದ್ ಶಬೀರ್, ಇಬ್ರಾಹಿಂ, ಅನ್ನು ಅಲಿಯಾಸ್ ಮಹಮ್ಮದ್ ಅನ್ವರ್, ಕಾಸರಗೋಡಿನ ನೌಷಾದ್, ಸಿದ್ಧೀಕ್ ಅಲಿಯಾಸ್ ಅಬೂಬಕ್ಕರ್‌.

*
ಜಾಲವನ್ನು ಭೇದಿಸಿದ ಪೊಲೀಸರಿಗೆ ₹ 2 ಲಕ್ಷ ಬಹುಮಾನ ಘೋಷಿಸಲಾಗಿದೆ
–ಟಿ.ಸುನೀಲ್‌ಕುಮಾರ್,ನಗರ ಪೊಲೀಸ್ ಕಮಿಷನರ್

ಅಬ್ದುಲ್ ರಷೀದ್
ಅಬ್ದುಲ್ ರಷೀದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT