ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿ ಬಿಜೆಪಿ ಸೇರಿರುವುದು ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ: ರಮೇಶ್‌ ಬಾಬು

Published 27 ಮಾರ್ಚ್ 2024, 16:19 IST
Last Updated 27 ಮಾರ್ಚ್ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಸಕ ಜನಾರ್ದನ ರೆಡ್ಡಿಯವರು ಏಕಾಏಕಿ ಬಿಜೆಪಿಗೆ ಸೇರಿ, ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು (ಕೆಆರ್‌ಪಿಪಿ) ಬಿಜೆಪಿ ಜತೆ ವಿಲೀನ ಮಾಡಿರುವುದಾಗಿ ಹೇಳಿರುವುದು ಪಕ್ಷಾಂತರ ನಿಷೇಧ ಕಾಯ್ದೆಯ ಉಲ್ಲಂಘನೆಯಾಗಿದೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸೇರಿ ತಮ್ಮ ಪಕ್ಷದ ಸದಸ್ಯತ್ವವನ್ನು ತ್ಯಜಿಸಿರುವುದರಿಂದ ಸಂವಿಧಾನದ 10ನೇ ವಿಧಿ ಅನ್ವಯ ರೆಡ್ಡಿ ಅವರ ಸದಸ್ಯತ್ವವನ್ನು ಅಸಿಂಧುಗೊಳಿಸಿ, ಶೋಕಾಸ್ ನೊಟೀಸ್ ಜಾರಿ ಮಾಡುವಂತೆ ಸಭಾಧ್ಯಕ್ಷರಿಗೆ ದೂರು ಸಲ್ಲಿಸಿದ್ದೇವೆ’ ಎಂದರು.

‘ಒಂದು ಪಕ್ಷ ಮತ್ತೊಂದು ಪಕ್ಷದ ಜತೆ ವಿಲೀನವಾಗಲು ಅದರದೇ ಆದ ಪ್ರಕ್ರಿಯೆಗಳಿವೆ. ಚುನಾವಣಾ ಆಯೋಗಕ್ಕೆ ಕೊಟ್ಟಿರುವ ಮಾಹಿತಿ ಪ್ರಕಾರ ಜನಾರ್ದನ ರೆಡ್ಡಿ ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಪದಾಧಿಕಾರಿಯಲ್ಲ. ಇದು ನೋಂದಾಯಿತ ರಾಜಕೀಯ ಪಕ್ಷ. ಇದರ ರಾಷ್ಟ್ರೀಯ ಅಧ್ಯಕ್ಷರು ಜೆ. ರಾಮಣ್ಣ. ಇದರಲ್ಲಿ ಅನೇಕ ಪದಾಧಿಕಾರಿಗಳಿದ್ದಾರೆ’ ಎಂದರು.

‘2023ರ ಮಾರ್ಚ್ 30ರಂದು ಚುನಾವಣಾ ಆಯೋಗಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಲ್ಲಿಸಿರುವ ಲೆಕ್ಕಪರಿಶೋಧನಾ ವರದಿ ಪ್ರಕಾರ ಆ ಪಕ್ಷದಲ್ಲಿರುವ ಮೊತ್ತ ₹ 1,320 ಮಾತ್ರ. ಗಣಿ ಖ್ಯಾತಿ ಜನಾರ್ದನ ರೆಡ್ಡಿ ಅವರು ಬೇನಾಮಿ ಹೆಸರಲ್ಲಿ ಪಕ್ಷ ಹುಟ್ಟು ಹಾಕಿ, ಈಗ ಬಿಜೆಪಿ ಜತೆ ವಿಲೀನಗೊಳಿಸಿದ್ದಾರೆ. ಈ ವಿಚಾರದಲ್ಲೂ ರೆಡ್ಡಿ ಬೇನಾಮಿ ವ್ಯವಹಾರ ನಡೆಸಿರುವುದು ಸ್ಪಷ್ಟವಾಗಿದೆ’ ಎಂದರು. 

‘ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿಯವರು ಭ್ರಷ್ಟಾಚಾರಕ್ಕೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಮೋದಿ ಅವರು ತಮ್ಮದ ಸ್ವಚ್ಛ ನಾಯಕತ್ವ ಎಂದು ಹೇಳುತ್ತಾರೆ. ಅದಕ್ಕೆ ವ್ಯತಿರಿಕ್ತವಾಗಿ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಆ ಮೂಲಕ, ತಮಗೆ ತಾವೇ ಮಸಿ ಬಳಿದುಕೊಂಡಿದ್ದಾರೆ. ಈ ವಿಚಾರವಾಗಿ ಬಿಜೆಪಿ ನಾಯಕರು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು’ ಎಂದು ರಮೇಶ್‌ ಬಾಬು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT