ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ತಾರತಮ್ಯ’ ಖಂಡಿಸಿ ನಿರ್ಣಯ, ರಾಜ್ಯಪಾಲರಿಗೆ ಪತ್ರ?: ಸಚಿವ ಸಂಪುಟ ಸಭೆ ಇಂದು

ವಿಚಾರಣೆ ಅನುಮತಿ ಬಾಕಿ ಪ್ರಕರಣಗಳ ಚರ್ಚೆ
Published 21 ಆಗಸ್ಟ್ 2024, 23:30 IST
Last Updated 21 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾರಣಿಗಳ ವಿರುದ್ಧದ ಪ್ರಕರಣಗಳಲ್ಲಿ ವಿಚಾರಣೆಗೆ ಅನುಮತಿ ನೀಡುವ ವಿಚಾರದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ತಾರತಮ್ಯ ಮಾಡುತ್ತಿದ್ದಾರೆಂಬ ವಿಷಯ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ.

ಮುಡಾ ಪ್ರಕರಣದಲ್ಲಿ ಯಾವುದೇ ತನಿಖಾ ವರದಿ ಇಲ್ಲದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಆದರೆ, ಎಚ್‌.ಡಿ. ಕುಮಾರಸ್ವಾಮಿ, ಮುರುಗೇಶ ನಿರಾಣಿ ವಿರುದ್ಧದ ಪ್ರಕರಣಗಳು ಸೇರಿದಂತೆ ಆರು ಪ್ರಕರಣಗಳಲ್ಲಿ ವಿಚಾರಣೆಗೆ ಅನುಮತಿ ನೀಡಿಲ್ಲ. ರಾಜ್ಯಪಾಲರ ಈ ನಡೆ ತಾರತಮ್ಯದಿಂದ ಕೂಡಿದ್ದು, ಈ ವಿಷಯದ ಕುರಿತು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕೆಲವು ಸಚಿವರು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ ಎಂದು ಗೊತ್ತಾಗಿದೆ.

ರಾಜ್ಯಪಾಲರು ಅನುಮತಿ ನೀಡಲು ಬಾಕಿ ಇರುವ ಪ್ರಕರಣಗಳ ಮಾಹಿತಿ ತರಿಸಿಕೊಂಡು ಚರ್ಚಿಸಲು ತೀರ್ಮಾನಿಸಲಾಗಿದೆ. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮೇಲೆ ‍ಪ್ರಕರಣ ದಾಖಲಿಸಲು ಲೋಕಾಯುಕ್ತ ಕೇಳಿದ್ದ ಅನುಮತಿಯನ್ನು ರಾಜ್ಯಪಾಲರು ಈಗಾಗಲೇ ತಿರಸ್ಕರಿಸಿದ್ದಾರೆ. ಉಳಿದ ಕೆಲವು ಪ್ರಕರಣಗಳಲ್ಲಿ ರಾಜ್ಯಪಾಲರು ಕೇಳಿದ್ದ ಸ್ಪಷ್ಟೀಕರಣವನ್ನು ನೀಡಲಾಗಿದೆ. ಆದರೂ ಅನುಮತಿ ನೀಡದೆ ರಾಜ್ಯಪಾಲರು ತಮ್ಮ ಬಳಿ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲು ಮತ್ತು ಮುಂದೇನು ಮಾಡಬೇಕೆಂದು ತೀರ್ಮಾನಿಸಲು ಚಿಂತನೆ ನಡೆದಿದೆ ಎಂದೂ ಮೂಲಗಳು ತಿಳಿಸಿವೆ.

ಅಸ್ತಿತ್ವದಲ್ಲಿಯೇ ಇಲ್ಲದ ಸಂಸ್ಥೆಗೆ 550 ಎಕರೆ ಜಮೀನನ್ನು ಕುಮಾರಸ್ವಾಮಿ ಮಂಜೂರು ಮಾಡಿದ್ದಾರೆ. ಅದರಲ್ಲಿ ಅಕ್ರಮಗಳಾಗಿವೆ. ತನಿಖೆ ನಡೆದಿದೆ. ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ 2023ರಲ್ಲಿಯೇ ಲೋಕಾಯುಕ್ತ ಮನವಿ ಸಲ್ಲಿಸಿತ್ತು. ಮುರುಗೇಶ್‌ ನಿರಾಣಿ, ಜನಾರ್ದನ ರೆಡ್ಡಿ ಅವರ ಪ್ರಕರಣದಲ್ಲೂ ಪ್ರಕರಣ ದಾಖಲಿಸಲು ಲೋಕಾಯುಕ್ತ ಕೋರಿಕೆ ಸಲ್ಲಿಸಿದೆ. ಅದ್ಯಾವುದಕ್ಕೂ ಸಹಮತಿಸದ ರಾಜ್ಯಪಾಲರು ಏಕಾಏಕಿ ಮುಖ್ಯಮಂತ್ರಿ ಪ್ರಕರಣದಲ್ಲಿ ನಡೆದುಕೊಂಡ ರೀತಿ ಪ್ರಶ್ನಾರ್ಹ. ಈ ಪ್ರಶ್ನೆಗೆ ಉತ್ತರಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆಯುವ ಬಗ್ಗೆಯೂ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT