ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಆದಾಯದಲ್ಲಿ ಚೇತರಿಕೆ

ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ: ಕಡಿಮೆ ಬಸ್‌ಗಳ ಕಾರ್ಯಾಚರಣೆ
Last Updated 11 ಆಗಸ್ಟ್ 2020, 9:58 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್ ಭೀತಿ ನಡುವೆಯೂ ಪ್ರಯಾಣಿಕರು ಸಾರಿಗೆ ಬಸ್‌ಗಳಲ್ಲಿ ಸಂಚರಿಸಲು ಬರುತ್ತಿದ್ದು, ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ) ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗಗಳ ವರಮಾನದಲ್ಲಿ ಚೇತರಿಕೆ ಕಂಡು ಬರುತ್ತಿದೆ.

ಕೊರೊನಾ ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಯಾಗಿದ್ದ ಲಾಕ್‌ಡೌನ್‌ನಿಂದಾಗಿ ಬಸ್‌ಗಳ ಸಂಚಾರ ನಿಲ್ಲಿಸಲಾಗಿತ್ತು. ಮೇ 19ರಿಂದ ಜಿಲ್ಲೆಯೊಳಗೆ ಹಾಗೂ ಅಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಪುನರಾರಂಭಿಸಲಾಗಿದೆ. ಬೆಳಗಾವಿ ವಿಭಾಗದಲ್ಲಿ ಕೆಲವು ದಿನಗಳವರೆಗೆ ಸರಾಸರಿ ₹ 6 ಲಕ್ಷದಿಂದ ₹ 7 ಲಕ್ಷವಷ್ಟೇ ಆದಾಯ ಬರುತ್ತಿತ್ತು. ಕ್ರಮೇಣ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಆದಾಯವೂ ಜಾಸ್ತಿಯಾಗುತ್ತಿದೆ.

ಪ್ರಸ್ತುತ ಸರಾಸರಿ ₹ 14ರಿಂದ ₹ 15 ಲಕ್ಷ ಸಂಗ್ರಹವಾಗುತ್ತಿದೆ. ಎಲ್ಲ ಮಾರ್ಗಗಳಿಗೂ ಬಸ್‌ಗಳ ಕಾರ್ಯಾಚರಣೆ ಇಲ್ಲದಿದ್ದರೂ ಪ್ರತಿಕ್ರಿಯೆ ಸಿಗುತ್ತಿರುವುದು ವಿಶೇಷ. ಹಿಂದೆ ಸಾಮಾನ್ಯ ದಿನಗಳಲ್ಲಿ ವಿಭಾಗದ ನಿತ್ಯದ ಆದಾಯ ಸರಾಸರಿ ₹ 75 ಲಕ್ಷ ಇರುತ್ತಿತ್ತು. ಆಗ, ಒಟ್ಟು 691 ಮಾರ್ಗಗಳ ಕಾರ್ಯಾಚರಣೆ ನಡೆಯುತ್ತಿತ್ತು.

ರಾಜ್ಯದೊಳಗೆ ಮಾತ್ರ:ಪ್ರಸ್ತುತ ರಾಜ್ಯದ ಒಳಗಡೆ ಮಾತ್ರವೇ ಬಸ್‌ಗಳು ಓಡಾಡುತ್ತಿವೆ. ಸರಾಸರಿ 300 ಕಾರ್ಯಾಚರಣೆ ಇದೆ. ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ಸೇರಿದಂತೆ ಅಂತರರಾಜ್ಯಗಳಿಗೆ ಸಂಚರಿಸುತ್ತಿಲ್ಲ.

ಲಾಕ್‌ಡೌನ್‌ಗಿಂತ ಪೂರ್ವದಲ್ಲಿ ಚಿಕ್ಕೋಡಿ ವಿಭಾಗದಲ್ಲಿ ನಿತ್ಯ ಸರಾಸರಿ 630 ಬಸ್‌ಗಳ ಕಾರ್ಯಾಚರಣೆ ಹಾಗೂ ₹ 60 ಲಕ್ಷ ವರಮಾನ ಇರುತ್ತಿತ್ತು. ಪ್ರಸ್ತುತ 260 ಬಸ್‌ಗಳು ಓಡಾಡುತ್ತಿದ್ದು, ವರಮಾನವು ಸರಾಸರಿ ₹ 12ರಿಂದ ₹ 15 ಲಕ್ಷ ಇದೆ.

ಇಲ್ಲಿಂದ ಮೈಸೂರು, ಬೆಂಗಳೂರು ಮೊದಲಾದ ದೂರದ ನಗರಗಳಿಗೂ ಬಸ್‌ಗಳು ಸಂಚರಿಸುತ್ತಿವೆ. ರಾತ್ರಿ ಕಾರ್ಯಾಚರಣೆಗೂ ಅವಕಾಶ ಕೊಡಲಾಗಿದೆ. ಪ್ರಸ್ತುತ ರೈಲುಗಳ ಸಂಚಾರ ಇಲ್ಲ. ಹೀಗಾಗಿ, ತುರ್ತು ಕೆಲಸಗಳಿಗೆ ಪ್ರಯಾಣ ಮಾಡಬೇಕಾದವರು ಸಾರಿಗೆ ಬಸ್‌ಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ.

ಶಾಲಾ–ಕಾಲೇಜು ಶುರುವಾದರೆ:‘ಬೆಂಗಳೂರಿಗೆ ಬಸ್‌ಗಳು ಓಡಾಡುತ್ತಿವೆ. ಆದರೆ, ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿರುತ್ತಾರೆ. ಕೊರೊನಾ ಸೋಂಕಿನ ಭೀತಿಯಿಂದಾಗಿ ಜನರು ಅಲ್ಲಿಗೆ ಹೋಗಲು ಹಿಂದೇಟು ಹಾಕುವುದನ್ನು ಗಮನಿಸಲಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.

‘ಪ್ರಮುಖ ಧಾರ್ಮಿಕ ಕೇಂದ್ರಗಳಾದ ಸವದತ್ತಿಯ ರೇಣುಕಾ ಯಲ್ಲಮ್ಮದೇವಿ ಹಾಗೂ ಜೋಗುಳಬಾವಿ ಸತ್ತೆಮ್ಮದೇವಿ ಮತ್ತು ರಾಯಬಾಗದ ಚಿಂಚಲಿ ಮಾಯಕ್ಕದೇವಿ ದೇವಸ್ಥಾನಗಳಲ್ಲಿ ಸಾರ್ವಜನಿಕ ದರ್ಶನವನ್ನು ನಿಷೇಧಿಸಲಾಗಿದೆ. ಶಾಲಾ–ಕಾಲೇಜುಗಳು ನಡೆಯುತ್ತಿಲ್ಲ. ಮದುವೆ ಮೊದಲಾದ ಸಮಾರಂಭಗಳು ಕಡಿಮೆ ಆಗಿವೆ. ಇದು ಸಂಸ್ಥೆಯ ಆದಾಯದ ಮೇಲೆ ಪರಿಣಾಮ ಬೀರಿದೆ. ಶಾಲಾ–ಕಾಲೇಜುಗಳು ಪುನರಾರಂಭವಾದರೆ ಮತ್ತು ಅಂತರರಾಜ್ಯ ಕಾರ್ಯಾಚರಣೆಗೆ ಅವಕಾಶ ಸಿಕ್ಕರೆ ಪರಿ‌ಸ್ಥಿತಿ ಸುಧಾರಿಸಬಹುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT