ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಪರೀಕ್ಷೆ: ಸುರೇಶ್‌ ಕುಮಾರ್‌ ಸಮರ್ಥನೆ ನಂಬುವ ಮೊದಲು ಇದಿಷ್ಟು ತಿಳಿದಿರಲಿ

ಆರ್‌ಆರ್‌ಬಿ ಅಧಿಸೂಚನೆಯಲ್ಲಿದೆ ಪುರಾವೆ
Last Updated 2 ಏಪ್ರಿಲ್ 2019, 8:34 IST
ಅಕ್ಷರ ಗಾತ್ರ

ಬೆಂಗಳೂರು:‘ಚುನಾವಣಾ ಸುಳ್ಳು’ ಪ್ರಚಾರವನ್ನು ಸಮರ್ಥಿಸಿಕೊಳ್ಳಲು ಶಾಸಕಸುರೇಶ್‌ ಕುಮಾರ್‌ ನಾಲ್ಕೈದು ಸುದ್ದಿ ಲಿಂಕ್‌ಗಳನ್ನು ಮಂಗಳವಾರ ಫೇಸ್‌ಬುಕ್‌ನಲ್ಲಿಪ್ರಕಟಿಸಿಕೊಂಡಿದ್ದಾರೆ. ಆದರೆ, ‘ಮೋದಿ ಸರ್ಕಾರದಿಂದಲೇ ಕನ್ನಡಿಗರು ಕನ್ನಡದಲ್ಲಿಯೇ ಪರೀಕ್ಷೆ ಬರೆಯುವ ಅವಕಾಶ ದೊರೆತಿದೆ’ ಸುಳ್ಳು ಎಂಬುದುಮತ್ತೆ ಸಾಬೀತಾಗಿದೆ.ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರುವುದಕ್ಕೂ ಮುನ್ನವೇ ಕನ್ನಡಿಗರಿಗೆ ಕನ್ನಡದಲ್ಲಿಯೇ ರೈಲ್ವೆ ಪರೀಕ್ಷೆ ಬರೆಯಲು ಅವಕಾಶವಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ..

‘ಹಲವು ದಶಕಗಳ ಕನ್ನಡಿಗರ ಕನಸು ನನಸು’ ಶೀರ್ಷಿಕೆಯಡಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ರೂಪಿಸಿರುವ ಪೋಸ್ಟರ್‌ ಒಂದನ್ನು ಸುರೇಶ್‌ ಕುಮಾರ್‌ ಮಾರ್ಚ್‌ 31ರಂದು ಪ್ರಕಟಿಸಿಕೊಂಡಿದ್ದಾರೆ. ಅದರಲ್ಲಿ ‘ಕನ್ನಡಿಗರಿಗೆ ಇದೇ ಮೊದಲ ಬಾರಿಗೆ ರೈಲ್ವೆ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ಕಲ್ಪಿಸಿದೆ ಮೋದಿ ಸರ್ಕಾರ!’ ಎಂದಿದೆ. ಈ ಕುರಿತು ನೆಟ್ಟಿಗರು ಟೀಕಾ ಪ್ರಹಾರ ನಡೆಸಿ, ರೈಲ್ವೆ ಸಚಿವೆಯಾಗಿದ್ದಾಗ ಮಮತಾ ಬ್ಯಾನರ್ಜಿ ಮಾಡಿದ ಘೋಷಣೆಯನ್ನು ಮೋದಿ ಸಾಧನೆಯೆಂದು ಹೊಗಳುತ್ತಿರುವ ನೀವೂ ಸಹ ಸುಳ್ಳು ರಾಜಕಾರಣಿಗಳಸಾಲಿಗೆ ಸೇರಿ ಹೋದಿರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಕುರಿತು ಪ್ರಜಾವಾಣಿ ಏಪ್ರಿಲ್‌ 1ರಂದುಪ್ರಕಟಿಸಿದ್ದಸುದ್ದಿಗೆ, ಪ್ರತಿಕ್ರಿಯೆ ಎನ್ನುವಂತೆಫೇಸ್‌ಬುಕ್‌ನಲ್ಲಿಸುರೇಶ್‌ ಕುಮಾರ್‌ ಮತ್ತೊಂದು ಪೋಸ್ಟ್‌ ಪ್ರಕಟಿಸಿಕೊಂಡಿದ್ದಾರೆ.‘ರೈಲ್ವೆ ನೇಮಕಾತಿ ಮಂಡಳಿ’(ಆರ್‌ಆರ್‌ಬಿ)ಯ ಪರೀಕ್ಷೆಗೆ ಸಂಬಂಧಿಸಿದವಿಷಯಗಳನ್ನು ಒಳಗೊಂಡ ವಿವಿಧ ಮಾಧ್ಯಮಗಳ ಸುದ್ದಿಗಳ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ. ’ರೈಲ್ವೇ ರಿಕ್ರೂಟ್ ಮೆಂಟ್ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಕೊಟ್ಟಿದ್ದರ ಕುರಿತು ನಾನು ನನ್ನ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಮಾಹಿತಿ ಬಗ್ಗೆ ಇಂದಿನ ಪ್ರಜಾವಾಣಿಯಲ್ಲಿ ಬಂದಿರುವ "ಆಕ್ಷೇಪಣೆ" ಗೆ ಉತ್ತರವಾಗಿ ಕೆಲವು ಆಧಾರಗಳು...’ ಎಂದು ಲಿಂಕ್‌ಗಳನ್ನು ನೀಡಿದ್ದಾರೆ.

ಈ ಲಿಂಕ್‌ಗಳಲ್ಲಿ ಏನಿದೆ?

ಸುರೇಶ್‌ ಕುಮಾರ್‌ ನಾಲ್ಕು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಿಸಿರುವ ಸುದ್ದಿಗಳ ಲಿಂಕ್‌ ಪ್ರಕಟಿಸಿಕೊಂಡಿದ್ದಾರೆ.2018ರ ಫೆಬ್ರುವರಿಯಲ್ಲಿ ಪ್ರಕಟಗೊಂಡಿರುವ ಸುದ್ದಿಗಳಲ್ಲಿ ‘ಆರ್‌ಆರ್‌ಬಿ ಪರೀಕ್ಷೆಗಳು ಕನ್ನಡ, ಮಲಯಾಳಂ, ತಮಿಳು ಸೇರಿದಂತೆ ಆರು ಪ್ರಾದೇಶಿಕ ಭಾಷೆಗಳು ಹಾಗೂ ಇತರೆ ಭಾಷೆಗಳಲ್ಲಿ ನಡೆಯಲಿವೆ’ ಎಂದಿದೆ. ಮಲಯಾಳಂ ಭಾಷೆಯನ್ನು ಸೇರಿಸಲಾಗಿದೆ ಎಂಬುದು ಮತ್ತೊಂದರ ಪ್ರಮುಖಾಂಶ. ಉಳಿದಂತೆವಯೋಮಿತಿ ಹೆಚ್ಚಿಸಿರುವ ಕುರಿತು, ವಯೋಮಿತಿಯಲ್ಲಿ ಆಗಿರುವ ಬದಲಾವಣೆ ಬಗ್ಗೆ ವಿವರ ನೀಡಲಾಗಿದೆ. ಕೇರಳ ಮತ್ತು ಬಿಹಾರದ ಅಭ್ಯರ್ಥಿಗಳ ಒತ್ತಡಕ್ಕೆ ಮಣಿದು, ಪರೀಕ್ಷೆ ಬರೆಯುವ ಅಭ್ಯರ್ಥಿಯ ವಯೋಮಿತಿ ಏರಿಕೆ ಮಾಡಲಾಗಿದೆ ಎಂಬುದು ಪ್ರಮುಖ ಸುದ್ದಿ.

ಈ ಯಾವುದೇ ಸುದ್ದಿಗಳಲ್ಲಿಯೂ ‘ಕನ್ನಡದಲ್ಲಿ ಮೊದಲ ಬಾರಿಗೆ’ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಅಥವಾ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಪರೀಕ್ಷೆ ನಡೆಯುತ್ತಿದೆ ಎಂಬುದಿಲ್ಲ. ‘ಹಲವು ದಶಕಗಳ ಕನ್ನಡಿಗರ ಕನಸು’ 2018ರಲ್ಲಿ ಈಡೇರಿರುವ ಬಗ್ಗೆಯೂ ಪ್ರಸ್ತಾಪವಿಲ್ಲ. ಅಂದರೆ, ಇದಕ್ಕೂ ಮುನ್ನವೇ ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿತ್ತು!

ಆರ್‌ಆರ್‌ಬಿ ನೋಟಿಫಿಕೇಷನ್‌ ನೋಡಿ..

ರೈಲ್ವೆ ನೇಮಕಾತಿ ಮಂಡಳಿ ವಿವಿಧ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡಲು ಹೊರಡಿಸಿರುವ ಅಧಿಸೂಚನೆಗಳನ್ನು ಗಮನಿಸಿದರೆ, ಕನ್ನಡ ಸೇರಿದಂತೆ ಯಾವೆಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ ಹಾಗೂ ಎಂದಿನಿಂದ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟವಾಗುತ್ತದೆ.2010ರ ರೈಲ್ವೆ ಬಜೆಟ್‌ ಸಾರಾಂಶವನ್ನು ಭಾರತ ಸರ್ಕಾರ ಅಧೀನದಲ್ಲಿರುವಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೋ(ಪಿಐಬಿ)ಪ್ರಕಟಿಸಿತ್ತು.ಅಂದಿನ ರೈಲ್ವೆ ಸಚಿವೆ ಮಮತಾ ಮ್ಯಾನರ್ಜಿ ಅವರು ಪ್ರಾದೇಶಿಕ ಭಾಷೆಗಳಲ್ಲಿ ರೈಲ್ವೆ ಪರೀಕ್ಷೆ ಕುರಿತು ಭಾಷಣದಲ್ಲಿನ ಪ್ರಸ್ತಾಪವನ್ನು ಪ್ರಕಟಿಸಿತ್ತು.

ಆರ್‌ಆರ್‌ಬಿ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿಯೇ ಬರೆಯಲು ಅವಕಾಶ ಕಲ್ಪಿಸಿರುವುದಾಗಿ 2009ರಲ್ಲಿಯೇ ಮಮತಾ ಬ್ಯಾನರ್ಜಿ ಘೋಷಿಸಿದ್ದರು. ಈ ಮಾಹಿತಿಯನ್ನು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.ರೈಲ್ವೆ ಇಲಾಖೆ ಹುದ್ದೆಗಳ ಆಕಾಂಕ್ಷಿಗಳಿಗೆ ಅನುಕೂಲವಾಗಲು ಪ್ರಜಾವಾಣಿ 2012ರಲ್ಲಿಯೇ ರೈಲ್ವೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯುವ ಕುರಿತು ವಿವರವಾಗಿ ಲೇಖನ ಪ್ರಕಟಿಸಿತ್ತು.–ರೈಲ್ವೆ: ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ

(ಅಧಿಸೂಚನೆ: 10.03.2012)

2012ರಿಂದ ಆರ್‌ಆರ್‌ಬಿ ಹೊರಡಿಸಿರುವ ಅಧಿಸೂಚನೆಗಳನ್ನು ಗಮನಿಸಿದರೆ, ಅಲ್ಲಿ ಕನ್ನಡ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವುದನ್ನು ಕಾಣಬಹುದು.

(ಅಧಿಸೂಚನೆ: 12.05.2012)

ಅಂದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮುಂಚಿನಿಂದಲೂ ರೈಲ್ವೆ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶವಿತ್ತು. 2014, 2015ರ ಅಧಿಸೂಚನೆಗಳಲ್ಲಿಯೂ ಈ ಅಂಶ ಗಮನಿಸಬಹುದು.

(ಅಧಿಸೂಚನೆ: 20.09.2014)

(ಅಧಿಸೂಚನೆ: 27.06.2015)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT