ಬೆಂಗಳೂರು: ಬಿಜೆಪಿ ಮತ್ತು ಅದರ ನೇತೃತ್ವದ ಸರ್ಕಾರದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತದ ಬಗ್ಗೆ ಆರ್‌ಎಸ್‌ಎಸ್ ಶಾಖೆಯಲ್ಲಿ ತರಬೇತಿ ನೀಡಲಾಯಿತೆ? ಆಪರೇಷನ್ ಕಮಲದಂತಹ ಅನೈತಿಕ, ನಿರ್ಲಜ್ಜ, ನೀಚ ರಾಜಕೀಯವನ್ನೂ ಅಲ್ಲಿಯೇ ಕಲಿಸಲಾಯಿತೆ ಎಂಬುದನ್ನು ಜನರಿಗೆ ಹೇಳಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಸವಾಲು ಹಾಕಿದ್ದಾರೆ.

‘ಮನೆಯಲ್ಲಿ ಕುಳಿತು ಪುಸ್ತಕ ಓದಿದರೆ ಸಾಲದು. ಆರ್‌ಎಸ್‌ಎಸ್ ಕುರಿತು ಅರಿಯಲು ಸಂಘದ ಶಾಖೆಗೆ ಬನ್ನಿ’ ಎಂಬ ರವಿ ಹೇಳಿಕೆಗೆ ಬುಧವಾರ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದೀರಿ. ನಿಮ್ಮ ಪಕ್ಷ ಮತ್ತು ಸರ್ಕಾರದಲ್ಲಿ ತಾಂಡವವಾಡುತ್ತಿರುವ ಈ ಸಮಸ್ಯೆಗಳ ಬಗ್ಗೆಯೂ ನೀವು ಹೇಳಬೇಕು’ ಎಂದಿದ್ದಾರೆ.

‘ಸಂಘದ ಶಾಖೆಗೆ ಬನ್ನಿ ಎಂದು ಆಹ್ವಾನ ನೀಡಿದ್ದೀರಿ. ನಿಮ್ಮ ಸಂಘದೊಳಗಿನ ವಾಸ್ತವಾಂಶಗಳನ್ನು ಪ್ರತ್ಯಕ್ಷವಾಗಿ ನೋಡಿದವರೇ ಬರೆದ ಪುಸ್ತಕ ಓದಿ ನನಗೆ ಅಲ್ಲಿನ ವ್ಯವಹಾರಗಳ ವಿರಾಟ್ ದರ್ಶನ ಆಗಿದೆ. ಇನ್ನು ಶಾಖೆಯನ್ನೇ ಸೇರಿಕೊಂಡರೆ ಇನ್ನೆಷ್ಟು ಸತ್ಯ ಸಂಗತಿಗಳು ಗೊತ್ತಾಗಬಹುದು? ನೀವೇ ಒಮ್ಮೆ ಊಹಿಸಿ’ ಎಂದು ಸರಣಿ ಟ್ವೀಟ್‌ನಲ್ಲಿ ಸವಾಲು ಹಾಕಿದ್ದಾರೆ.

‘ಬದುಕು ಕಸಿದ ಕೋವಿಡ್’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ ಬುಧವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಬದುಕು ಸಾಕೆನಿಸಿದೆ– ಭಗವಂತನಿಗೂ ಕರುಣೆ ಇಲ್ಲ’ ಎಂಬ ವಿಶೇಷ ವರದಿಯನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ಕುಮಾರಸ್ವಾಮಿ, ‘ಶ್ರೀನಿವಾಸನಗರದ ಬಿ.ಆರ್. ವಾಸುದೇವ ಎಂಬ ಬೀದಿಬದಿ ವ್ಯಾಪಾರಿ ಹೇಳಿರುವ ಮಾತುಗಳನ್ನು ಒಮ್ಮೆ ಓದಿ. ಆಗಲಾದರೂ ನಿಮ್ಮ ಕಲ್ಲು ಹೃದಯ ಕರಗಬಹುದು’ ಎಂದು ಹೇಳಿದ್ದಾರೆ.

‘ಶಿವಮೊಗ್ಗದಲ್ಲಿ ₹ 2,000 ಪರಿಹಾರ ನೀಡಲು ₹ 100 ಲಂಚ ಕೇಳಿದ ವರದಿಗಳು ಬಂದಿವೆ. ಇದಾ ನಿಮ್ಮ ಸಮಾಜ ಸೇವೆ? ಛಿದ್ರವಾದ ಬದುಕುಗಳನ್ನು ಒಮ್ಮೆ ನೋಡಿ. ಜನರ ಬವಣೆಗಳ ಬಗ್ಗೆ ಆರ್‌ಎಸ್‌ಎಸ್ ಶಾಖೆಗಳಲ್ಲಿ ಏನನ್ನೂ ಹೇಳಿಕೊಡುವುದಿಲ್ಲವೆ’ ಎಂದು ಪ್ರಶ್ನಿಸಿದ್ದಾರೆ.

ಸೇವೆಯ ಸೋಗಿನಲ್ಲಿ ಸಂಸ್ಥೆಗಳು ರಾಜಕೀಯ ಮಾಡಬಾರದು. ಜನರ ಬವಣೆ ನಿವಾರಿಸಲು ದುಡಿಯಬೇಕೆ ಹೊರು ಬದುಕಿಗೇ ಬೆಂಕಿ ಇಡಬಾರದು. ಸಮಾಜದ ಶಾಂತಿ ಕಾಯಬೇಕು. ಅದಕ್ಕೆ ಕೊಳ್ಳಿ ಇಡಬಾರದು. ಆರ್‌ಎಸ್‌ಎಸ್ ಹುಟ್ಟಿದಾಗಿನಿಂದಲೂ ಏನೆಲ್ಲ ಮಾಡಿಕೊಂಡು ಬಂದಿದೆ ಎಂಬುದು ಜಗತ್ತಿಗೇ ಗೊತ್ತಿರುವ ಸಂಗತಿ ಎಂದಿದ್ದಾರೆ.

‘ಜನ ಪ್ರತಿನಿಧಿಗಳನ್ನು, ಸರ್ಕಾರಗಳನ್ನು, ಆಡಳಿತ ಯಂತ್ರಾಂಗವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಪರಿಪಾಠ ದೇಶಕ್ಕೆ ಒಳ್ಳೆಯದಲ್ಲ. ಅರ್ಥ ಮಾಡಿಕೊಳ್ಳಿ, ನಾನು ಸತ್ಯದ ಪರ’ ಎಂದು ರವಿ ಅವರನ್ನುದ್ದೇಶಿಸಿ ಹೇಳಿದ್ದಾರೆ.

ಬೆಲೆ ಏರಿಕೆ ಬಗ್ಗೆ ಮಾತನಾಡಲಿ

‘ಸೇವೆ ಎಂದು ಸೋಗಲಾಡಿತನ ತೋರಿಸುವ ಆರ್‌ಎಸ್‌ಎಸ್ ಬೆಲೆ ಏರಿಕೆ ಕುರಿತು ಮಾತನಾಡಬೇಕು. ಬಡವರ ಮತ್ತು ಶ್ರೀಮಂತರ ಭಾರತದ ಬಗ್ಗೆ ಹೇಳಬೇಕು. ಅದಕ್ಕೆ ಕಾರಣವಾದ ಏಳು ವರ್ಷಗಳ ಆಡಳಿತದ ವಿರುದ್ಧ ಧ್ವನಿ ಎತ್ತಬೇಕು. ಇಲ್ಲವಾದರೆ ನೀವು ಬಡವರ ಭಾರತದ ಆಕ್ರೋಶಕ್ಕೆ ತುತ್ತಾಗುತ್ತೀರಿ’ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳಕ್ಕೆ ಟ್ವಿಟರ್‌ನಲ್ಲಿ ಪ್ರತ್ಯೇಕವಾಗಿ ಪ್ರತಿಕ್ರಿಯಿಸಿರುವ ಅವರು, ‘ಸಿಲಿಂಡರ್ ದರ ₹ 900ರ ಗಡಿಯಲ್ಲಿದೆ. ಅಚ್ಛೇ ದಿನದ ಭ್ರಮೆಯಲ್ಲಿ ಜನರ ಬದುಕು ಬೆಂಕಿಯಲ್ಲಿ ಬೇಯುತ್ತಿದೆ’ ಎಂದಿದ್ದಾರೆ.

ಶ್ರೀಮಂತ ಭಾರತದ ಸಾರಥ್ಯ ವಹಿಸಿರುವವರು ಒಂದಿಬ್ಬರು ಉದ್ಯಮಿಗಳ ಜೋಳಿಗೆ ತುಂಬಿ ಜನರ ಬಾಳಿಗೆ ಕೊಳ್ಳಿ ಇಡುತ್ತಿದ್ದಾರೆ. ಬೆಲೆ ಏರಿಕೆ ಮಾಫಿಯಾ ಹಿಂದೆ ಇರುವ ಶಕ್ತಿಗಳ ಕುರಿತು ಬಿಜೆಪಿ ನಾಯಕರು ಮಾತನಾಡಲಿ ಎಂದು ಆಗ್ರಹಿಸಿದ್ದಾರೆ.

ಕಾಮಾಲೆ ಕಣ್ಣು: ಕುಮಾರಸ್ವಾಮಿಗೆ ಕಟೀಲ್ ತಿರುಗೇಟು

ಶಿವಮೊಗ್ಗ: ‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರ್‌ಎಸ್‌ಎಸ್ ಶಾಖೆಗೆ ಬಂದು ವಿಚಾರಧಾರೆ ತಿಳಿದುಕೊಳ್ಳಲಿ. ಕಾಮಾಲೆ ಕಣ್ಣಿಗೆ ಊರೆಲ್ಲ ಹಳದಿ ಎನ್ನುವಂತೆ ವರ್ತಿಸಬಾರದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಿರುಗೇಟು ನೀಡಿದರು.

ನಗರದಲ್ಲಿ ಬುಧವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಆರ್‌ಎಸ್‌ಎಸ್ ದೇಶದ ಜನರಲ್ಲಿ ರಾಷ್ಟ್ರಭಕ್ತಿ ಮೂಡಿಸುತ್ತಿದೆ. ಟೀಕಿಸುವವರು ಮೊದಲು ಸಂಘದ ಶಿಕ್ಷಣ ಪಡೆಯಲಿ. ಅಧಿಕಾರದಲ್ಲಿ ಇದ್ದಾಗ ಜಾತಿ, ಕುಟುಂಬ ರಾಜಕಾರಣ ಮಾಡಿದರು. ಕುಟುಂಬದವರಿಗೆ ಎಲ್ಲಾ ಅಧಿಕಾರ ಕೊಟ್ಟರು. ಇಂತಹವರಿಂದ ಬೇರೆ ನಿರೀಕ್ಷೆ ಹೇಗೆ ಸಾಧ್ಯ’ ಎಂದು ಕುಟುಕಿದರು.

‘ಸಂಘದ ಶಿಕ್ಷಣ ಪಡೆದವರು ಐಎಎಸ್, ಐಪಿಎಸ್ ಅಧಿಕಾರಿಗಳಾದರೆ ಒಳ್ಳೆಯದು. ಸರ್ಕಾರದ ಹುದ್ದೆಯಲ್ಲಿ ಇರಬಾರದು ಎಂದು ನಿಯಮವಿದೆಯೇ’ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ, ಎಚ್‌ಡಿಕೆ ವಿರುದ್ಧ ಕಾರಜೋಳ ಕಿಡಿ

ಬೆಳಗಾವಿ: ‘ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಮಾತನಾಡುವುದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಯಾರನ್ನೋ ಖುಷಿಪಡಿಸಲು ಏನೇನೋ ಹೇಳಿಕೆ ಕೊಟ್ಟರೆ ಅದಕ್ಕೆ ಅರ್ಥ ಇರುವುದಿಲ್ಲ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪ್ರಮುಖ ನಾಯಕರು. ಅವರು ಎಲ್ಲರಿಗೂ ಆದರ್ಶ ವ್ಯಕ್ತಿಗಳಾಗಿರಬೇಕು. ಕೀಳು ಮಟ್ಟದ ಜನಪ್ರಿಯತೆಗಾಗಿ ಆರ್‌ಎಸ್‍ಎಸ್ ಸಂಸ್ಕೃತಿ ಬಗ್ಗೆ ಗೊತ್ತಿಲ್ಲದವರು ಏನೇನೋ ಹೇಳುತ್ತಾರೆ’ ಎಂದು ಅವರು ಟೀಕಿಸಿದರು.

‘ಆರ್‌ಎಸ್‍ಎಸ್‍ನವರು ದೇಶಭಕ್ತರು. ಬೇರೆ ರೀತಿ ಕಳಂಕ ಹಚ್ಚಲು ಪ್ರಯತ್ನಿಸಿದರೆ ಅದು ಸಫಲವಾಗುವುದಿಲ್ಲ. ದೇಶದಾದ್ಯಂತ ಯುವಜನರಲ್ಲಿ ರಾಷ್ಟ್ರಪ್ರೇಮ ಬೆಳೆಸುವ ಕಾರ್ಯದಲ್ಲಿ ಆರ್‌ಎಸ್‌ಎಸ್ ತೊಡಗಿದೆ. ಭಾರತೀಯ ಸಂಸ್ಕೃತಿಯಂತೆ ನಮ್ಮ ಯುವಕರು ಬದುಕಬೇಕು ಎಂಬ ಉದ್ದೇಶದಿಂದ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಕೇಶವಕೃಪದಲ್ಲಿ ಯಾವ್ಯಾವ ಜಾತಿಯವರು ಇದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅಲ್ಲಿ ಜಾತಿ, ಧರ್ಮ, ಮತ, ಪಂಥ, ಬಡವ-ಬಲ್ಲಿದ ಎಂಬ ಯಾವುದೇ ತಾರತಮ್ಯವಿಲ್ಲ. ದೇಶಕ್ಕಾಗಿ ಪ್ರಾಣ ಬಲಿ ಕೊಟ್ಟ ದೇಶಭಕ್ತರ ಸಂಸ್ಥೆಯದು’ ಎಂದು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.