ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಪಿ ಜಾರಿಗಾಗಿ ದೇಶದಾದ್ಯಂತ ಪ್ರತಿಭಟನೆ: ಯೋಗೇಂದ್ರ ಯಾದವ್‌ ಘೋಷಣೆ

Last Updated 21 ಮಾರ್ಚ್ 2022, 13:47 IST
ಅಕ್ಷರ ಗಾತ್ರ

ಬೆಂಗಳೂರು:‘ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿ ಸಂಬಂಧ ಸಮಿತಿ ರಚಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಅದನ್ನು ಮರೆತಿದೆ. ಎಂಎಸ್‌ಪಿ ನಮ್ಮ ಹಕ್ಕು. ಅದರ ಅನುಷ್ಠಾನಕ್ಕೆ ಒತ್ತಾಯಿಸಿ ಏಪ್ರಿಲ್‌ 11 ರಿಂದ 17ರವರೆಗೆದೇಶದಾದ್ಯಂತ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕ ಯೋಗೇಂದ್ರ ಯಾದವ್‌ ತಿಳಿಸಿದರು.

ಸಂಯುಕ್ತ ಹೋರಾಟ–ಕರ್ನಾಟಕವುಸ್ವಾತಂತ್ರ್ಯಉದ್ಯಾನದಲ್ಲಿ ಹಮ್ಮಿಕೊಂಡಿದ್ದ ‘ಜನ ಪರ್ಯಾಯ ಬಜೆಟ್‌ ಅಧಿವೇಶನ’ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.

‘ಎಂಎಸ್‌ಪಿಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಹಾಗಾದರೆ ಅದು ಎಲ್ಲಿದೆ. ಕರ್ನಾಟಕದ ಮಾರುಕಟ್ಟೆಯಲ್ಲಿ ರಾಗಿ, ಭತ್ತದ ಬೆಲೆ ಎಷ್ಟಿದೆ ಎಂಬುದು ಮೋದಿಯವರಿಗೆ ಗೊತ್ತಿದೆಯೇ’ ಎಂದು ಪ್ರಶ್ನಿಸಿದರು.

‘ಸಣ್ಣ ಮತ್ತು ಅತಿ ಸಣ್ಣ ರೈತರು ನೆಮ್ಮದಿಯ ಬದುಕು ನಡೆಸಬೇಕು. ಅದಕ್ಕೆ ಪೂರಕ ವಾತಾವರಣ ಸೃಷ್ಟಿಸುವ ಅಗತ್ಯವಿದೆ. ಸಂಘಟನೆಗಳು ಕೇವಲ ಆರ್ಥಿಕ ವಾದಕ್ಕೆ ಕಟ್ಟುಬೀಳದೆ, ಭವಿಷ್ಯ ರೂಪಿಸಲು ಅಗತ್ಯವಿರುವ ಪರ್ಯಾಯ ಕಣ್ಣೋಟ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ದೆಹಲಿಯ ರೈತ ಚಳವಳಿ ದೇಶದ ರೈತರಲ್ಲಿ ಸ್ವಾಭಿಮಾನ ಬೆಳೆಸಿದೆ. ನಮ್ಮ ನಡುವೆ ಒಗ್ಗಟ್ಟು ಮೂಡಿಸಿದೆ. ಇದನ್ನು ಕಾಪಾಡಿಕೊಂಡು ಹೋಗಬೇಕು. ರಾಜಕೀಯ ಅಧಿಕಾರವು ರೈತರ ಬಹುದೊಡ್ಡ ಅಸ್ತ್ರ. ಅದನ್ನು ಹೇಗೆ ಚಲಾಯಿಸಬೇಕು ಎಂಬುದನ್ನು ಎಲ್ಲರೂ ಕಲಿಯಬೇಕು. ರೈತ ಚಳವಳಿ ಮೂಲಕ ನಾವು ಸಾಧಿಸಿರುವ ಯಶಸ್ಸು ಎಲ್ಲಾ ರಾಜಕೀಯ ಪಕ್ಷಗಳಿಗೂ ಪಾಠವಾಗಿದೆ’ ಎಂದು ತಿಳಿಸಿದರು.

‘ಕೆಲ ಸ್ನೇಹಿತರು ನಮ್ಮ ಸಲಹೆ ಧಿಕ್ಕರಿಸಿ ಪಂಜಾಬ್‌ ಹಾಗೂ ಉತ್ತರ ಪ್ರದೇಶ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಒಬ್ಬ ಶಾಸಕ, ಮುಖ್ಯಮಂತ್ರಿಯ ಆಯ್ಕೆಯಷ್ಟೇ ನಮ್ಮ ಗುರಿಯಾಗಬಾರದು. 2024ರಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವಂತಾಗಬೇಕು. ಆ ರೀತಿ ದೇಶದ ರಾಜಕೀಯವನ್ನು ರೈತರು ಪ್ರಭಾವಿಸಬೇಕು’ ಎಂದು ಹೇಳಿದರು.

‘ರೈತರ ತಾಳ್ಮೆ ಪರೀಕ್ಷಿಸದಿರಿ’

‘ರಾಜ್ಯ ಬಿಜೆಪಿ ಸರ್ಕಾರ ರೈತರ ತಾಳ್ಮೆ ಪರೀಕ್ಷಿಸಬಾರದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃಷಿ ಕಾಯ್ದೆಗಳನ್ನು ಕೂಡಲೇ ರದ್ದು ಮಾಡಬೇಕು. ರೈತ ವಿರೋಧಿ ಎ‍ಪಿಎಂಸಿ ತಿದ್ದುಪಡಿ ಕಾಯ್ದೆ ಕೈಬಿಡುವ ನಿರ್ಣಯ ಪ್ರಸ್ತುತ ಅಧಿವೇಶನದಲ್ಲೇ ಕೈಗೊಳ್ಳಬೇಕು’ ಎಂದುಸಂಯುಕ್ತ ಕಿಸಾನ್‌ ಮೋರ್ಚಾ ನಾಯಕಿ ಕವಿತಾ ಕುರಗುಂಟಿ ಒತ್ತಾಯಿಸಿದರು.

‘ಉತ್ತರ ಪ್ರದೇಶದಲ್ಲಿ ಬಿಡಾಡಿ ದನಗಳಿಂದ ರೈತರು ತುಂಬಾ ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ಧರ್ಮದ ಹೆಸರಿನಲ್ಲಿ ರಾ‌ಜಕೀಯ ಮಾಡುವುದನ್ನು ಬಿಟ್ಟು ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದು‍ಪಡಿಸಬೇಕು.ಜನವಿರೋಧಿ ನೀತಿ ರದ್ದು‍ಪಡಿಸುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದರು.

ಇತರ ಬೇಡಿಕೆಗಳು

*ಉದ್ಯೋಗ ಭದ್ರತೆ ಹಾಗೂ ಕನಿಷ್ಠ ₹21 ಸಾವಿರ ವೇತನ ಸಾರ್ವತ್ರಿಕಗೊಳಿಸಬೇಕು.

*ಮಹಿಳೆಯರು ಹಾಗೂ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಬೇಕು.

*ಎಸ್‌.ಸಿ.ಪಿ–ಟಿ.ಎಸ್‌.ಪಿ.ಅಭಿವೃದ್ಧಿ ನಿಧಿಯ ದುರ್ಬಳಕೆ ತಡೆಯಬೇಕು.

*ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿ ಉಳುಮೆ ಅಥವಾ ವಾಸವಿರುವ ಬಡವರಿಗೆ ಭೂಮಿ ಅಥವಾ ವಸತಿ ಮಂಜೂರು ಮಾಡಬೇಕು.

*ವಿದ್ಯಾರ್ಥಿ ವಿರೋಧಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಹಿಂಪಡೆಯಬೇಕು.

*ಉದ್ಯೋಗ ಸೃಷ್ಟಿ ಕುರಿತ ಸಮಗ್ರ ಯೋಜನೆ ಜಾರಿಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT