ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ನಾರಿಯರ ಸೀರೆ ವಾಕಥಾನ್: ಬಿರುಸಿನ ನಡಿಗೆ, ಬತ್ತದ ಉತ್ಸಾಹ

Last Updated 8 ಡಿಸೆಂಬರ್ 2019, 5:23 IST
ಅಕ್ಷರ ಗಾತ್ರ

ಮೈಸೂರು: ಮೂಡಣದ ದಿಗಂತದಲ್ಲಿ ದಿನಕರ ತನ್ನ ಹೊಂಗಿರಣಗಳನ್ನು ಭುವಿಗೆ ಸ್ಪರ್ಶಿಸುವ ಮುನ್ನವೇ ನಗರದ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಮೈದಾನದಲ್ಲಿ ಮಹಿಳೆಯರ ಕಲರವ...

ಹದಿ ಹರೆಯದ ಯುವತಿಯರಿಂದ ಹಿಡಿದು 83ರ ಇಳಿಪ್ರಾಯದ ಉತ್ಸಾಹಿ ಹಿರಿಯರು ಸಹ, ಅಪ್ಪಟ ಭಾರತೀಯ ನಾರಿಯರಾಗಿ ಬಣ್ಣ ಬಣ್ಣದ ಸೀರೆಗಳನ್ನುಟ್ಟು ಕಂಗೊಳಿಸಿದರು.

ಇನ್ನರ್‌ವ್ಹೀಲ್‌ ಕ್ಲಬ್ ಮೈಸೂರು ಸೆಂಟ್ರಲ್ ವಿವಿಧ ಕಂಪನಿ, ಸಂಘ ಸಂಸ್ಥೆಗಳ ಪ್ರಾಯೋಜಕತ್ವದಡಿ, ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಸೀರೆ ವಾಕಥಾನ್’ನ ಚಿತ್ರಣವಿದು.

ಚುಮು ಚುಮು ಚಳಿಯನ್ನೂ ಲೆಕ್ಕಿಸದೆ ‘ಸೀರೆ ವಾಕಥಾನ್‌’ಗಾಗಿ ಹಲವರು ಬಣ್ಣ ಬಣ್ಣದ ರೇಷ್ಮೆ ಸೀರೆಯುಟ್ಟು ನಸುಕಿನ 6 ಗಂಟೆಗೆ ಮೈದಾನದಲ್ಲಿ ಜಮಾಯಿಸಿದ್ದರು. ವಾಕಥಾನ್ ಆರಂಭಕ್ಕೂ ಮುನ್ನವೇ ಆಯೋಜಕರು ಪ್ರಸ್ತುತ ಪಡಿಸಿದ ಸಂಗೀತಕ್ಕೆ ಬೆಳ್ಳಂಬೆಳಗ್ಗೆಯೇ ಹೆಜ್ಜೆ ಹಾಕಿ ನರ್ತಿಸಿ, ವಾಕಥಾನ್ ಸಂಭ್ರಮವನ್ನು ನೂರ್ಮಡಿ ಹೆಚ್ಚಿಸಿದರು.

310 ಸ್ಪರ್ಧಿಗಳು: ಸೀರೆ ವಾಕಥಾನ್‌ಗಾಗಿ 550ಕ್ಕೂ ಹೆಚ್ಚು ಮಹಿಳೆಯರು ₹ 100 ಶುಲ್ಕ ಪಾವತಿಸಿ ನೋಂದಾಯಿಸಿಕೊಂಡಿದ್ದರು. 310 ನಾರಿಯರು ಸ್ಪರ್ಧೆಯಲ್ಲಿ ಭಾಗಿಯಾಗಿ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು.

ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಮೈದಾನದಿಂದ ಆರಂಭಗೊಂಡ ವಾಕಥಾನ್ ಜಿಲ್ಲಾಧಿಕಾರಿ ಕಚೇರಿ, ಎಂಜಿನಿಯರ್‌ಗಳ ಸಂಸ್ಥೆ, ರೋಟರಿ ಜಾವಾ ಶಾಲೆ, ಕೃಷ್ಣ ವಿಲಾಸ ರಸ್ತೆ, ಶಿವಾಯನ ಮಠದ ರಸ್ತೆಯ ಎಡಕ್ಕೆ ತಿರುವು ಪಡೆದು, ದೇವರಾಜ ಅರಸು ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿ ರಸ್ತೆ ಮೂಲಕವೇ ಮತ್ತೆ ಬೇಡನ್ ಪೊವೆಲ್ ಪಬ್ಲಿಕ್ ಶಾಲೆಗೆ ಮರಳಿತು.

ಎರಡೂವರೆ ಕಿ.ಮೀ. ದೂರದ ಈ ಅಂತರವನ್ನು ಜಯನಗರದ ಬಿ.ಎಂ.ಸಿಂಧು 20 ನಿಮಿಷದೊಳಗೆ ಪೂರೈಸಿ 50 ವರ್ಷದೊಳಗಿನವರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. 50 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ವಿ.ವಿಜಯಲಕ್ಷ್ಮೀ 25 ನಿಮಿಷದಲ್ಲೇ ತಮ್ಮ ನಡಿಗೆ ಪೂರೈಸಿ ಮೊದಲಿಗರಾದರು.

ಉತ್ಸಾಹದಿಂದ ಹೆಜ್ಜೆ: ಎರಡೂ ವಿಭಾಗದ ಸ್ಪರ್ಧೆಗೆ ಹಸಿರು ನಿಶಾನೆ ದೊರಕುತ್ತಿದ್ದಂತೆ ನಾರಿಯರು ಉತ್ಸಾಹದಿಂದ ಹೆಜ್ಜೆ ಹಾಕಿದರು. ವಾಕಥಾನ್‌ಗಾಗಿಯೇ ವಿಶೇಷ ವಿನ್ಯಾಸದಿಂದ ಸೀರೆಯುಟ್ಟಿದ್ದು ಗೋಚರಿಸಿತು.

ಗೆಲುವಿಗಾಗಿ ಬಿರುಸಿನ ನಡಿಗೆ ನಡೆದ ವನಿತೆಯರು ಗುರಿ ತಲುಪುವ ವೇಳೆಗೆ ಚಳಿಯಲ್ಲೂ ಬೆವೆತರು. ಒಂದೇ ಉಸುರಿಗೆ ನಡೆದಿದ್ದರಿಂದ ಸುಸ್ತಾದರೂ, ನಿಗದಿತ ಗುರಿ ತಲುಪುತ್ತಿದ್ದಂತೆ ಖುಷಿಯಿಂದ ಪರಸ್ಪರರು ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ತಮ್ಮ ಮಕ್ಕಳೊಟ್ಟಿಗೆ ಸಂಭ್ರಮಿಸಿದರು. ಸಾಲಾಗಿ ಕುಳಿತು ದಣಿವಾರಿಸಿಕೊಂಡರು.

‘ಸೀರೆಯುಟ್ಟು ಬಿರುಸಿನ ನಡಿಗೆ ನಡೆಯೋದು ತುಂಬಾ ಕಷ್ಟ. ಆದರೂ ಖುಷಿಕೊಟ್ತು. ಹಿಂದಿನ ವರ್ಷವೂ ನಡೆದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದೆ’ ಎಂದು ಸುಮಾ ತಿಳಿಸಿದರೆ, ‘ಗೆಳತಿಯರ ಜತೆ ಮೊದಲ ಬಾರಿ ಭಾಗವಹಿಸಿದ್ದೆ. ಸ್ಪರ್ಧೆ ಚೆನ್ನಾಗಿತ್ತು. ಖುಷಿಯಾಯ್ತು’ ಎಂದವರು ಹಿರಿಯರಾದ ಶಾರದಾ.

‘ಕ್ಲಬ್ ಹಿಂದಿನ ವರ್ಷವೂ ಇದೇ ಸ್ಪರ್ಧೆ ಆಯೋಜಿಸಿತ್ತು. ಭಾರತೀಯ ಪರಂಪರೆ ಬಿಂಬಿಸುವ ಸೀರೆ ನಡಿಗೆ ಸ್ಪರ್ಧೆ ಒಳ್ಳೆಯ ಬೆಳವಣಿಗೆ’ ಎಂದು ಆಶಾ ರಮೇಶ್‌ ತಿಳಿಸಿದರು.

ಝುಂಬಾ ಡ್ಯಾನ್ಸ್‌..!

ವಾಕಥಾನ್ ಆರಂಭಕ್ಕೂ ಮುನ್ನವೇ ನಮ್ರತಾ, ಜಾಹ್ನವಿ ವಾರ್ಮ್‌ಅಪ್‌ಗಾಗಿ ನೆರೆದಿದ್ದ ಮಹಿಳೆಯರಿಂದ ವಿವಿಧ ಭಂಗಿಯ ನರ್ತನ ಮಾಡಿಸಿದರೆ; ಸಮಾರೋಪದಲ್ಲಿ ಮಹಿಳೆಯರ ಆರೋಗ್ಯಕ್ಕೆ ಪೂರಕವಾದ ಝುಂಬಾ ಡ್ಯಾನ್ಸ್‌ನ ಝಲಕ್‌ಗಳನ್ನು ತರಬೇತುದಾರರು ಅರ್ಧ ತಾಸಿಗೂ ಹೆಚ್ಚಿನ ಅವಧಿ ನೆರೆದಿದ್ದ ಮಹಿಳಾ ಸಮೂಹದಿಂದ ಮಾಡಿಸಿದರು.

ಹಾಲಿವುಡ್, ಬಾಲಿವುಡ್‌, ಸ್ಯಾಂಡಲ್‌ವುಡ್‌ನ ಹಾಡುಗಳಿಗೆ ವೇದಿಕೆಯಲ್ಲಿ ತರಬೇತುದಾರ್ತಿ ಹೆಜ್ಜೆ ಹಾಕಿದಂತೆ, ಕೆಳಗಿದ್ದ ಮಹಿಳೆಯರು ನರ್ತಿಸಿ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಸನಿಹದಲ್ಲೇ ತಾಲೀಮು ನಡೆಸಿದ್ದ ಗೃಹರಕ್ಷಕಿಯರು ಈ ಸಂಭ್ರಮದೊಳಗೆ ಭಾಗಿಯಾಗಿದ್ದು ವಿಶೇಷವಾಗಿತ್ತು.

ಪತಿರಾಯರ ಸಾಥ್‌...

ಸೀರೆ ವಾಕಥಾನ್‌ಗೆ ಪತಿರಾಯರು ಸಾಥ್ ನೀಡಿದರು. ತಮ್ಮ ಮನೆಗಳಿಂದ ಪತ್ನಿಯರನ್ನು ಕಾರು, ಬೈಕ್‌ಗಳಲ್ಲಿ ಮೈದಾನಕ್ಕೆ ಕರೆದುಕೊಂಡು ಬಂದಿದ್ದರು. ಮೂರು ತಾಸಿಗೂ ಹೆಚ್ಚಿನ ಸಮಯ ಸ್ಪರ್ಧೆ ಮುಗಿಯುವ ತನಕವೂ ಕಾದು ಕೂತಿದ್ದರು.

ಲಕ್ಕಿ ಡಿಪ್ ವಿಜೇತರಿಗೆ ಗಿಫ್ಟ್‌ ವೋಚರ್‌ ನೀಡಲಾಯಿತು. ಉಪಾಹಾರದ ವ್ಯವಸ್ಥೆಯೂ ಇತ್ತು. ಆರಂಭದಿಂದ ಅಂತ್ಯದವರೆಗೂ ಜಯಚಾಮರಾಜ ಒಡೆಯರ್ ಮೂರನೇ ಪುತ್ರಿ ಕಾಮಾಕ್ಷಿ ದೇವಿ ಸಮಾರಂಭದಲ್ಲಿದ್ದುದು ವಿಶೇಷ. ಇನ್ನರ್‌ವ್ಹೀಲ್‌ ಕ್ಲಬ್‌ನ ಅಧ್ಯಕ್ಷೆ ಆಶಾ ದಿವ್ಯೇಶ್‌, ಕಾರ್ಯದರ್ಶಿ ಸಂಗೀತಾ ಸತೀಶ್‌ ಸೇರಿದಂತೆ ಪದಾಧಿಕಾರಿಗಳು, ಸದಸ್ಯೆಯರು ಉತ್ಸಾಹದಿಂದ ಭಾಗಿಯಾಗಿದ್ದರು.

83 ವರ್ಷದ ಸೆಲಿನಾ ಅವರನ್ನು ಅತ್ಯಂತ ಹಿರಿಯ ಸ್ಪರ್ಧಿ ಎಂದು ಘೋಷಿಸಿ ಪ್ರಶಂಸಿಸಲಾಯಿತು.

ವಿಜೇತರ ಪಟ್ಟಿ

50 ವರ್ಷದೊಳಗಿನವರ ವಿಭಾಗ

1) ಬಿ.ಎಂ.ಸಿಂಧು

2) ಎ.ಎಲ್.ಹೇಮಾ

3) ಮಲ್ಲಿಕ್‌ರಾವ್

4) ಪ್ರಿಯದರ್ಶಿನಿ ಮಹೇಂದ್ರ

5) ಸುಷ್ಮಾ ಎನ್‌.ಗೌಡ

50 ವರ್ಷ ಮೇಲ್ಪಟ್ಟವರ ವಿಭಾಗ

1) ವಿ.ವಿಜಯಲಕ್ಷ್ಮೀ

2) ಲಕ್ಷ್ಮೀ ಅಯ್ಯಂಗಾರ್

3) ಶಾರದಾ

4) ಕಲಾ ಮೋಹನ್

5) ಕಮಲಾ ವಿಜಯ್‌ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT