ಬೆಂಗಳೂರು: ‘ಬಿಜೆಪಿ ಸರ್ಕಾರ ಅನುಮೋದಿಸಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸತ್ಯಾಗ್ರಹ ನಡೆಸಲಾಗುವುದು’ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.
ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದಲ್ಲಿ ಹಣ ಬಿಡುಗಡೆಯಾಗದೆ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಗುರುವಾರ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಇದೊಂದೇ ಕ್ಷೇತ್ರವಲ್ಲ, ರಾಜ್ಯದ ಹಲವು ಭಾಗಗಳಲ್ಲಿ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಸರ್ಕಾರ ಅಭಿವೃದ್ಧಿಗೆ ಕೊಡಲಿ ಪೆಟ್ಟು ನೀಡಿದೆ. ಸರ್ಕಾರದ ಈ ಧೋರಣೆಯನ್ನು ಖಂಡಿಸಿ ಎಲ್ಲೆಡೆ ಪ್ರತಿಭಟನೆ ನಡೆಸಲಾಗುವುದು’ ಎಂದರು.
‘ವಿಧಾನಸೌಧ ಅಥವಾ ಸ್ವಾತಂತ್ರ್ಯ ಉದ್ಯಾನದಲ್ಲಿ ಈ ತಿಂಗಳ ಕೊನೆಯ ದಿನಗಳಲ್ಲಿ ಮೂರು ದಿನ ಸತ್ಯಾಗ್ರಹ ನಡೆಸಲಾಗುತ್ತದೆ. ದಿನಾಂಕವನ್ನು ಶುಕ್ರವಾರ ತಿಳಿಸಲಾಗುವುದು. ಬೆಳಗಾವಿ ಅಧಿವೇಶನ ಪ್ರಾರಂಭವಾಗುತ್ತಿದ್ದು, ಈ ವಿಚಾರದ ಬಗ್ಗೆ ಗಮನ ಸೆಳೆದು, ಚರ್ಚೆ ನಡೆಸಲು ಶಾಸಕರಿಗೆ ತಿಳಿಸಿದ್ದೇನೆ’ ಎಂದು ಯಡಿಯೂರಪ್ಪ ಹೇಳಿದರು.
‘ಹಳೆಯ ಕೆಲಸಕ್ಕೂ ಶೇ 7.5ರಿಂದ 8ರಷ್ಟು ಕಮಿಷನ್ ಕೇಳುತ್ತಿದ್ದಾರೆ. ಹೀಗಾಗಿ, ಕೆಲಸ ಮಾಡಲು ಯಾವ ಗುತ್ತಿಗೆದಾರರೂ ಮುಂದೆ ಬರುತ್ತಿಲ್ಲ. ಈ ಸರ್ಕಾರದ ಆಡಳಿತ ವೈಖರಿಯನ್ನು ಖಂಡಿಸುತ್ತೇನೆ. ವೈಯಕ್ತಿಕ ದ್ವೇಷ ಮಾಡದೆ ಅಭಿವೃದ್ಧಿ ಕಾರ್ಯದತ್ತ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.
‘ಕಾಮಗಾರಿಗಳಲ್ಲಿ ಅಕ್ರಮವಾಗಿದ್ದರೆ ತನಿಖೆ ಮಾಡಿಸಿ ಕ್ರಮ ತೆಗೆದುಕೊಳ್ಳಬೇಕು. ಎಲ್ಲ ಕೆಲಸಗಳನ್ನು ತಡೆಹಿಡಿಯುವುದು ಸರಿಯಲ್ಲ’ ಎಂದರು
‘ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರಕ್ಕೆ ₹126 ಕೋಟಿ ಅನುದಾನ ರದ್ದುಪಡಿಸಿರುವುದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡಿದ್ದೆ. ಆಗ ಯಡಿಯೂರಪ್ಪ ಅವರು ಸಮಾಧಾನ ಪಡಿಸಿದ್ದರು. ಇಂದಿಗೂ ಆ ಅನುದಾನ ನೀಡಿಲ್ಲ. ಹೀಗಾಗಿ, ನಮ್ಮ ನಾಯಕರು ಇದೀಗ ಸ್ಥಗಿತ ಕಾಮಗಾರಿಗಳ ವೀಕ್ಷಣೆ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗದೆ ಹಣ ಬಿಡುಗಡೆ ಮಾಡಬೇಕು’ ಎಂದು ಶಾಸಕ ಮುನಿರತ್ನ ಆಗ್ರಹಿಸಿದರು.
ಸಂಸದ ಪಿ.ಸಿ. ಮೋಹನ್, ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಇದ್ದರು.
ಯಾರು ಎಲ್ಲಿಗಾದರೂ ಹೋಗಲಿ: ಬಿಎಸ್‌ವೈ
‘ಯಾರು ಎಲ್ಲಿಗೆ ಬೇಕಾದರೂ ಹೋಗಲಿ ಅದರ ಬಗ್ಗೆ ನಾನು ಚಿಂತೆ ಮಾಡುತ್ತಿಲ್ಲ’ ಎಂದು ಯಡಿಯೂರಪ್ಪ ಹೇಳಿದರು. ದೀಪಾವಳಿ ಬಳಿಕ ಬಿಜೆಪಿಯ ಒಂದಷ್ಟು ನಾಯಕರು ಕಾಂಗ್ರೆಸ್ ಸೇರುವ ಬಗ್ಗೆ ಅವರು ಹೀಗೆ ಪ್ರತಿಕ್ರಿಯಿಸಿದರು. ‘ರಾಜ್ಯ ಸರ್ಕಾರದ ವಿರುದ್ಧ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡುವ ಬಗ್ಗೆ ಯೋಚಿಸುತ್ತೇನೆ’ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.