ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯರಿಗಿಲ್ಲ ಎಸ್‌ಸಿ – ಎಸ್‌ಟಿ ನಿಧಿ

Published 5 ಡಿಸೆಂಬರ್ 2023, 0:10 IST
Last Updated 5 ಡಿಸೆಂಬರ್ 2023, 0:10 IST
ಅಕ್ಷರ ಗಾತ್ರ

ಬೆಳಗಾವಿ: ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಯ (ಟಿಎಸ್‌ಪಿ) ₹11 ಸಾವಿರ ಕೋಟಿಯನ್ನು ‘ಗ್ಯಾರಂಟಿ’ಗೆ ಬಳಕೆಗೆ ಮಾಡಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ, ಕಾಯ್ದೆಯಡಿ ಮೀಸಲಿಡುವ ಮೊತ್ತವನ್ನು ಇನ್ನು ಮುಂದೆ ಅನ್ಯ ಉದ್ದೇಶಕ್ಕೆ ಬಳಸದಂತೆ ಕಡಿವಾಣ ಹಾಕಲು ಮುಂದಾಗಿದೆ.

ಕರ್ನಾಟಕ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಉಪ ಯೋಜನೆ (ಯೋಜನೆ, ಹಂಚಿಕೆ, ಮತ್ತು ಆರ್ಥಿಕ ಸಂಪನ್ಮೂಲಗಳ ಬಳಕೆ) ಕಾಯ್ದೆ–2013ರ ಅನ್ವಯ, ಬಜೆಟ್‌ನ ಒಟ್ಟು ಮೊತ್ತದ ಶೇ 24.1ರಷ್ಟನ್ನು ಪರಿಶಿಷ್ಟ ಸಮುದಾಯದ ಹಿತಕ್ಕೆ ಬಳಸುವುದು ಕಡ್ಡಾಯ. ಈ ಕಾಯ್ದೆಯ ‘ಸೆಕ್ಷನ್ 7 ಡಿ’ ಬಳಸಿಕೊಂಡು ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಬಹುದಾದ ಅವಕಾಶ ಇತ್ತು.

ಈ ದಾರಿಯನ್ನು ಉಪಯೋಗಿಸಿಕೊಂಡು ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಅನುದಾನವನ್ನು ರಸ್ತೆ, ಹೆದ್ದಾರಿ, ಮೆಟ್ರೊ ಯೋಜನೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ‘ಗ್ಯಾರಂಟಿ’ ಯೋಜನೆಗಳಿಗೆ ಬಳಸಿಕೊಂಡಿತ್ತು. 

ಮುಂದಿನ ದಿನಗಳಲ್ಲಿ ಅನ್ಯ ಉದ್ದೇಶಕ್ಕೆ ಬಳಕೆ ಆಗದಂತೆ ನಿರ್ಬಂಧಿಸುವ ಉದ್ದೇಶದಿಂದ ಈ ಕಾಯ್ದೆಯ ‘ಸೆಕ್ಷನ್‌ 7 ಡಿ’ ರದ್ದುಪಡಿಸಲು ಮುಂದಾಗಿರುವ ಸರ್ಕಾರ, ತಿದ್ದುಪಡಿ ಮಸೂದೆ ಮಂಡಿಸಲು ನಿರ್ಧರಿಸಿದೆ. ‌ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಗುರುವಾರ (ಡಿ. 7) ನಡೆಯಲಿರುವ ಸಚಿವ ಸಂಪುಟ ಸಭೆಯ ಮುಂದೆ ಸಮಾಜ ಕಲ್ಯಾಣ ಇಲಾಖೆ ಪ್ರಸ್ತಾವವನ್ನು ಮಂಡಿಸಲಿದೆ. ಇದೇ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಜ್ಯ ಪರಿಷತ್‌ಗೆ ಉಪ ಮುಖ್ಯಮಂತ್ರಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಿಸಲು ಮತ್ತು ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಹಂಚಿಕೆಯ ನೋಡಲ್‌ ಏಜೆನ್ಸಿಗೆ ಪರಿಶಿಷ್ಟ ಪಂಗಡಗಳ ಸಚಿವರನ್ನು ಉಪಾಧ್ಯಕ್ಷರನ್ನಾಗಿ ಮಾಡಲು ಈ ತಿದ್ದುಪಡಿಯ ಮೂಲಕ ಅವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

2013ರಲ್ಲಿ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟರ ಜನಸಂಖ್ಯೆ ಆಧರಿಸಿ ಅನುದಾನ ನೀಡುವುದಕ್ಕಾಗಿ ಈ ಉಪ ಹಂಚಿಕೆ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದರ ಅನ್ವಯ ಎಲ್ಲ ಇಲಾಖೆಗಳಲ್ಲಿ ಶೇ 24.1ರಷ್ಟು ಹಣವನ್ನು ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕೆ ಮೀಸಲಿಡಬೇಕು. ಆರಂಭದಲ್ಲಿ ₹ 8,908 ಕೋಟಿ ಇದ್ದ ಅನುದಾನ 2023–24ನೇ ಸಾಲಿನಲ್ಲಿ ₹ 34,294 ಕೋಟಿಗೆ ಹೆಚ್ಚಳವಾಗಿದೆ. 

‘ಎಸ್‌ಸಿಪಿ, ಟಿಎಸ್‌ಪಿ ಅನುದಾಯ ದಲಿತ ಸಮುದಾಯದ ಒಳಿತಿಗೆ ಬಳಕೆಯಾಗಬೇಕು. ಆದರೆ, 7ಡಿ ಹೆಸರಲ್ಲಿ ದುರುಪಯೋಗವಾಗುತ್ತಿದ್ದು ಅದನ್ನು ತಡೆಯಬೇಕು ಎಂದು ದಲಿತ ಸಂಘಟನೆಗಳು ಮತ್ತು ಚಿಂತಕರು ಒತ್ತಾಯಿಸಿದ್ದರು. ಸೆಕ್ಷನ್ 7 ಡಿಯನ್ನು ಕೈಬಿಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಪರಿಶಿಷ್ಟ ಸಮುದಾಯದ ಮುಖಂಡರಿಗೆ ಭರವಸೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT