ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ದೌರ್ಜನ್ಯ: ರೇವಣ್ಣ ವಿರುದ್ಧ ನ್ಯಾಯಿಕ ಪ್ರಕ್ರಿಯೆ ಮುಂದುವರಿಕೆಗೆ ತಡೆ

Published : 30 ಆಗಸ್ಟ್ 2024, 14:31 IST
Last Updated : 30 ಆಗಸ್ಟ್ 2024, 14:31 IST
ಫಾಲೋ ಮಾಡಿ
Comments

ಬೆಂಗಳೂರು: ‘ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ವಿರುದ್ಧ ವಿಚಾರಣಾ ನ್ಯಾಯಾಲಯ ಯಾವುದೇ ಪ್ರಕ್ರಿಯೆಗೆ ಮುಂದಾಗಬಾರದು’ ಎಂದು ಹೈಕೋರ್ಟ್ ನಿರ್ದೇಶಿಸಿದೆ.

‘ನನ್ನ ವಿರುದ್ಧ ಹಾಸನ ಜಿಲ್ಲೆ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಎಚ್.ಡಿ.ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು  ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರೇವಣ್ಣ ಪರ ‌ಹಿರಿಯ ವಕೀಲ ಸಿ.ವಿ.ನಾಗೇಶ್, ‘ಸಂತ್ರಸ್ತೆಯು ನಾಲ್ಕು ವರ್ಷಗಳ ಹಿಂದೆಯೇ ರೇವಣ್ಣ ಅವರ ಮನೆಯನ್ನು ತೊರೆದಿದ್ದಾರೆ. ಆದರೆ, 2024ರ ಏಪ್ರಿಲ್ 28ರಂದು ಭಾರತೀಯ ದಂಡ ಸಂಹಿತೆ–1860ರ ಕಲಂ (ಐಪಿಸಿ) ಕಲಂ 354ಎ ಮತ್ತು 354ಡಿ (ಹಿಂಬಾಲಿಸುವುದು) ಅಡಿ ಈ ಪ್ರಕರಣ ದಾಖಲಿಸಲಾಗಿದೆ. ದೂರಿನಲ್ಲಿ ಹೇಳಿರುವಂತೆ, ಹಿಂಬಾಲಿಸುವ ಆರೋಪ ಎಲ್ಲಿದೆ? ಈ ಎರಡೂ ಅಪರಾಧಗಳಿಗೆ ಗರಿಷ್ಠ 3 ವರ್ಷ ಶಿಕ್ಷೆ ಇದೆ. ಐಪಿಸಿ ಕಲಂಗಳನ್ನು ಅನ್ವಯಿಸಿದ ಮಾತ್ರಕ್ಕೆ ಸಾಲದು. ಅಲ್ಲಿ ಆರೋಪವೂ ಇರಬೇಕಾಗುತ್ತದೆ’ ಎಂದು ಪ್ರತಿಪಾದಿಸಿದರು.

ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್‌ ರವಿವರ್ಮ ಕುಮಾರ್, ‘ಆಗಸ್ಟ್ 23ರಂದು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇದರಲ್ಲಿ ಐಪಿಸಿ ಕಲಂ 354ಎ ಜೊತೆಗೆ, ಕಲಂ 506 (ಕ್ರಿಮಿನಲ್ ಬೆದರಿಕೆ), 509 (ಮಹಿಳೆಯ ಘನತೆಗೆ ಚ್ಯುತಿ) ಆಡಿಯೂ ಅಪರಾಧ ದಾಖಲಾಗಿದೆ. ಇಲ್ಲಿ ಎಸಗಿರುವ ಅಪರಾಧವು ಹೀನ ಕೃತ್ಯವಾಗಿದೆ‘ ಎಂದರು.

ಕೆಲಕಾಲ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಮುಂದಿನ ವಿಚಾರಣೆವರೆಗೆ ಸಂಬಂಧಿತ ನ್ಯಾಯಾಲಯವು ಯಾವುದೇ ಪ್ರಕ್ರಿಯೆ ದಾಖಲಿಸಬಾರದು’ ಎಂದು ಆದೇಶಿಸಿ  ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿತು.

ಎಫ್ಐಆರ್ ರದ್ದು ಕೋರಿರುವ ಅರ್ಜಿಯ ವಿಚಾರಣೆ ಮುಂದೂಡಿಕೆ: ಸಂತ್ರಸ್ತೆ ಅಪಹರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 19ಕ್ಕೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT