ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್ ಅತ್ಯಾಚಾರ, ರೇವಣ್ಣ ಲೈಂಗಿಕ ಕಿರುಕುಳ ದೃಢ:ಚಾರ್ಜ್‌ಶೀಟ್‌ ಸಲ್ಲಿಸಿದ SIT

Published 24 ಆಗಸ್ಟ್ 2024, 0:07 IST
Last Updated 24 ಆಗಸ್ಟ್ 2024, 0:07 IST
ಅಕ್ಷರ ಗಾತ್ರ

ಬೆಂಗಳೂರು: ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಮೊದಲ ಪ್ರಕರಣದ ಸಂತ್ರಸ್ತೆಗೆ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಅವರು ಲೈಂಗಿಕ ಕಿರುಕುಳ ನೀಡಿರುವುದು ಮತ್ತು ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ನಡೆಸಿ, ವಿಡಿಯೊ ಚಿತ್ರೀಕರಿಸಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಸಿಐಡಿ ವಿಶೇಷ ತನಿಖಾ ದಳ (ಎಸ್‌ಐಟಿ) ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಎಸ್‌ಐಟಿ ತನಿಖಾಧಿಕಾರಿ ಬಿ.ಸುಮಾರಾಣಿ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ 2,144 ಪುಟಗಳ ಆರೋಪ ಪಟ್ಟಿ ಸಲ್ಲಿಸಿದರು.

ರೇವಣ್ಣ ಮೇಲಿನ ದೋಷಾರೋಪ:

‘ಎಚ್‌.ಡಿ.ರೇವಣ್ಣ ಅವರು ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಕೈಹಿಡಿದು ಎಳೆದು, ಅವರ ಮೈ–ಕೈ ಮುಟ್ಟಿ ಹತ್ತಿರಕ್ಕೆ ಎಳೆದುಕೊಂಡು ಲೈಂಗಿಕ ಕಿರುಕುಳ ನೀಡಿರುವುದು ಸಾಬೀತಾಗಿದೆ’ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

‘ಹೊಳೆನರಸೀಪುರದಲ್ಲಿ ರೇವಣ್ಣ ಅವರಿಗೆ ಸೇರಿದ ಮನೆಯಿದ್ದು, ಅವರ ಪತ್ನಿ ಭವಾನಿ ರೇವಣ್ಣ ಅವರ ಅನುಮತಿ ಮೇರೆಗೆ ಹಾಸ್ಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು (2019ರಿಂದ 2020ರ ವರೆಗೆ). ಭವಾನಿ ಅವರು ಮನೆಯಲ್ಲಿ ಇಲ್ಲದಿರುವಾಗ ಸಂತ್ರಸ್ತೆಯನ್ನು ಕೊಠಡಿಗೆ ಬಾ... ಏಕೆ ಕೆಳಗೆ ಹೋಗುತ್ತೀಯಾ... ನಾನೇನು ಮಾಡಲ್ಲ’ ಎಂದು ಆಗಾಗ್ಗೆ ಕರೆಯುತ್ತಿದ್ದರು. ಅಲ್ಲದೇ ಅವರ ಮನೆಯ ಮೊದಲ ಮಹಡಿಯಲ್ಲಿದ್ದ ವಸ್ತುಗಳನ್ನು ಇಡುವ ಕೊಠಡಿಗೆ ಎಲ್ಲ ಕಾರ್ಮಿಕರನ್ನು ಕರೆಸಿಕೊಂಡು ಎಲ್ಲರಿಗೂ ಹಣ್ಣು ವಿತರಣೆ ಮಾಡುತ್ತಿದ್ದರು. ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಕೊನೆಯಲ್ಲಿ ಹಣ್ಣು ಕೊಡಲು ಕೊಠಡಿಯಲ್ಲೇ ಇರಿಸಿಕೊಳ್ಳುತ್ತಿದ್ದರು. ಇತರೆ ಕೆಲಸಗಾರರು ಹಣ್ಣು ಪಡೆದು ತೆರಳಿದ ನಂತರ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದರು’ ಎಂದು ಉಲ್ಲೇಖಿಸಲಾಗಿದೆ.

ಪ್ರಜ್ವಲ್‌ ಮೇಲಿನ ದೋಷಾರೋ‍ಪ:

‘ಬೆಂಗಳೂರಿನ ಬಸವನಗುಡಿಯ ಮನೆಯ ಸ್ವಚ್ಛತೆ ಕೆಲಸಕ್ಕೆಂದು ಭವಾನಿ ರೇವಣ್ಣ ಅವರು ಅದೇ ಸಂತ್ರಸ್ತೆಯನ್ನು ಒಮ್ಮೆ ಕರೆ ತಂದಿದ್ದರು. ಭವಾನಿ ಅವರು ಖರೀದಿಗೆಂದು ಹೊರಕ್ಕೆ ತೆರಳಿದ್ದ ವೇಳೆ, ಪ್ರಜ್ವಲ್‌ ಏಕಾಏಕಿ ಮೊಬೈಲ್‌ ಹಿಡಿದು ಕೊಠಡಿಯ ಒಳಕ್ಕೆ ಪ್ರವೇಶಿಸಿದ್ದರು. ಆಗ ಸಂತ್ರಸ್ತೆ ಹೊರಕ್ಕೆ ಬರಲು ಪ್ರಯತ್ನಿಸಿದ್ದರು.

‘ಇಷ್ಟು ದಿನ ನನ್ನಿಂದ ತಪ್ಪಿಸಿಕೊಂಡು ಓಡಾಟ ನಡೆಸಿದ್ದೀಯಾ. ಎಣ್ಣೆ ಹಚ್ಚಲು ಬಾ ಎಂದರೆ ಸಬೂಬು ಹೇಳುತ್ತೀಯಾ. ಈಗ ಒಂಟಿಯಾಗಿ ಸಿಕ್ಕಿದ್ದೀಯಾ ಎಂದು ಹೇಳಿ ಬಟ್ಟೆ ಬಿಚ್ಚಲು ಪ್ರಯತ್ನಿಸಿದ್ದರು. ಸಂತ್ರಸ್ತೆ ಬೇಡ ಅಣ್ಣ, ತಪ್ಪಾಯ್ತು ಬಿಟ್ಟುಬಿಡಿ, ಏನೂ ಮಾಡಬೇಡಿ ಎಂದು ಅಂಗಲಾಚಿದ್ದರು. ಆಗ ಆಕೆಯ ಸೀರೆ ಹರಿದು ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಅದನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದರು. ವಿಷಯನ್ನು ಬಹಿರಂಗ ಪಡಿಸಿದರೆ ನಿನ್ನ ಪತಿಯನ್ನು ಜೈಲು ಪಾಲು ಮಾಡುತ್ತೇನೆ. ನಿನ್ನ ಪುತ್ರಿಗೂ ಇದೇ ಗತಿ ಮಾಡುತ್ತೇನೆ. ಏನೇ ಕೆಲಸ ಮಾಡಿದರೂ ಪ್ರಕರಣ ಮುಚ್ಚಿ ಹಾಕಲು ನನಗೆ ಗೊತ್ತಿದೆ. ನಾನು ಸಂಸದನಾಗಿದ್ದು, ಯಾರೂ ಏನೂ ಮಾಡಲು ಆಗುವುದಿಲ್ಲ. ಬಾಯಿ ಬಿಟ್ಟರೆ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂಬುದು ಸಾಬೀತಾಗಿದೆ’ ಎಂದು ವಿವರಿಸಲಾಗಿದೆ.

‘ವಿದೇಶಕ್ಕೆ ಪಲಾಯನ: ಸಾಕ್ಷ್ಯನಾಶ’
ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪ್ರಜ್ವಲ್‌ ಅವರು ವಿದೇಶಕ್ಕೆ ಪಲಾಯನ ಮಾಡಿದ್ದರು. ಅಲ್ಲದೇ ವಿದ್ಯುನ್ಮಾನ ಸಾಕ್ಷ್ಯನಾಶದ ಉದ್ದೇಶದಿಂದ ಮೊಬೈಲ್‌ ನಾಶ ಪಡಿಸಿದ್ದರು ಎಂಬುದು ದೃಢಪಟ್ಟಿದೆ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ತಿಳಿಸಿದೆ. ‘ಸಂತ್ರಸ್ತೆಯ ಪುತ್ರಿಗೂ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಕರೆ ಮಾಡಿ ಬಟ್ಟೆ ಬಿಚ್ಚುವಂತೆ ಹೇಳಿ ಅದರ ಸ್ಕ್ರೀನ್‌ಶಾಟ್‌ ತೆಗೆದುಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.
ಫೋಟೊ ಹರಿದಾಡಲು ಕಾರಣಕರ್ತ’

‘ಪ್ರಜ್ವಲ್‌ ಅವರು ಲೈಂಗಿಕ ದೌರ್ಜನ್ಯ ಎಸಗಿ, ಸಂತ್ರಸ್ತೆಯ ಅರಿವಿಗೆ ಬಾರದಂತೆ ತನ್ನ ಮೊಬೈಲ್‌ನಲ್ಲಿ ಫೋಟೊ ತೆಗೆದುಕೊಳ್ಳುತ್ತಿದ್ದರು. ಆ ಫೋಟೊಗಳು ಸಾಮಾಜಿಕ ಜಾಲತಾಣ ಹಾಗೂ ದೃಶ್ಯಮಾಧ್ಯಮ ದಲ್ಲಿ ಹರಿದಾಡಲು ಪ್ರಜ್ವಲ್‌ ಅವರೇ ಕಾರಣಕರ್ತರಾಗಿದ್ದಾರೆ’ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT