ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೂಟ್‌ ಔಟ್‌ ಪ್ರಕರಣ: ಇಬ್ಬರು ಅಪರಾಧಿಗಳ ಖುಲಾಸೆ

Published : 2 ಅಕ್ಟೋಬರ್ 2024, 15:30 IST
Last Updated : 2 ಅಕ್ಟೋಬರ್ 2024, 15:30 IST
ಫಾಲೋ ಮಾಡಿ
Comments

ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪದಡಿ ತ್ವರಿತ ವಿಚಾರಣಾ ನ್ಯಾಯಾಲಯದಿಂದ 10 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಅಪರಾಧಿಗಳನ್ನು ಹೈಕೋರ್ಟ್‌ ಖುಲಾಸೆಗೊಳಿಸಿದೆ.

ಈ ಸಂಬಂಧ ಪ್ರಕರಣದ ಅಪರಾಧಿಗಳಾದ ಕಮಲ್‌ ಅಲಿಯಾಸ್ ಕಮಲ್‌ ಕಣ್ಣನ್‌ ಮತ್ತು ಆರ್. ಹರೀಶ್‌ ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್‌ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಅರ್ಜಿದಾರರ ಬಿಡುಗಡೆಗೆ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್‌ ವಕೀಲ ಎಸ್‌.ಸುನಿಲ್ ಕುಮಾರ್, ‘ಪ್ರಕರಣದಲ್ಲಿ ಆರೋಪಿಯ ಗುರುತು ಪತ್ತೆಹಚ್ಚುವ ಕವಾಯತು ನಡೆದಿರಲಿಲ್ಲ. ಅರ್ಜಿದಾರರು ಒಳಸಂಚು ನಡೆಸಿದ ಆರೋಪವನ್ನು ಪ್ರಾಸಿಕ್ಯೂಷನ್‌ ಸಾಬೀತುಪಡಿಸಿಲ್ಲ. ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಸಾಕ್ಷವಿಲ್ಲದೆ ಅನ್ಯಾಯವಾಗಿ ಶಿಕ್ಷೆಗೆ ಗುರಿಪಡಿಸಲಾಗಿದ್ದು ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು’ ಎಂದು ಕೋರಿದ್ದರು. 

ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಹರೀಶ್‌ ಮತ್ತು ಕಣ್ಣನ್‌ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದೆ. ಕಮಲ್‌ ಪರ ಅಮರ್ ಕೊರಿಯಾ ವಾದ ಮಂಡಿಸಿದ್ದರು.

ಪ್ರಕರಣವೇನು?: ನಾಗಸಂದ್ರ ವ್ಯಾಪ್ತಿಯ ಬಾಗಲಗುಂಟೆಯ ಎಂಇಐ ಲೇ ಔಟ್‌ನ 14ನೇ ಮೇನ್‌ನಲ್ಲಿ 2007ರ ಫೆಬ್ರುವರಿ 1ರಂದು ಕಣ್ಣನ್‌ ನಾಯ್ಡು ಎಂಬುವವರ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿತ್ತು. ಸಾಲ ಕೊಟ್ಟಿಲ್ಲ ಎಂಬ ದ್ವೇಷದಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪದಡಿ ಒಟ್ಟು ಏಳು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಹಾಗೂ ಶಸ್ತ್ರಾಸ್ತ್ರ ಕಾಯ್ದೆ–1959ರ ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣದ 2 ಮತ್ತು 3ನೇ ಆರೋಪಿಗಳಾದ ಕ್ರಮವಾಗಿ ಕಮಲ್‌ ಕಣ್ಣನ್‌ ಮತ್ತು ಹರೀಶ್‌ ಅವರನ್ನು 2007ರ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. ನಗರದ 9ನೇ ತ್ವರಿತ ವಿಚಾರಣೆಯ ವಿಶೇಷ ನ್ಯಾಯಾಲಯ ಕಮಲ್‌ ಕಣ್ಣನ್‌ ಮತ್ತು ಹರೀಶ್‌ ಅವರನ್ನು ತಪ್ಪಿತಸ್ಥರು ಎಂದು 2011ರ ಡಿಸೆಂಬರ್ 30ರಂದು ತೀರ್ಮಾನಿಸಿತ್ತು. 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT