ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಗಾದಿಗೆ ಸಿಗದ ‘ಗ್ಯಾರಂಟಿ’: ಸಿದ್ದರಾಮಯ್ಯಗೆ ಪಟ್ಟ ಬಿಡಲು ಡಿಕೆಶಿ ನಕಾರ

ವಿಫಲವಾದ ರಾಹುಲ್ ಸೂತ್ರ
Published 17 ಮೇ 2023, 21:01 IST
Last Updated 17 ಮೇ 2023, 21:01 IST
ಅಕ್ಷರ ಗಾತ್ರ

––ಮಂಜುನಾಥ ಹೆಬ್ಬಾರ್‌

ನವದೆಹಲಿ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ವರೆಗೆ ‘ಜೋಡೆತ್ತು‘ಗಳಂತೆ ಪದೇ ಪದೇ ಬಿಂಬಿಸಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್‌ನ ಹಿರಿಯ ಶಾಸಕ ಸಿದ್ದರಾಮಯ್ಯ ‘ಮುಖ್ಯಮಂತ್ರಿ ಕುರ್ಚಿ’ಗಾಗಿ ನೊಗ ಕಿತ್ತೆಸೆದು ಸಂಘರ್ಷದ ಹಾದಿ ತುಳಿದಿದ್ದಾರೆ. ಮತ ಸೆಳೆಯಲು ಐದು ‘ಗ್ಯಾರಂಟಿ’ಗಳನ್ನು ಯಾವುದೇ ತಕರಾರು ಇಲ್ಲದೇ ಪ್ರಕಟಿಸಿದ್ದ ‘ಕೈ’ಪಾಳಯಕ್ಕೆ ಉಭಯ ನಾಯಕರ ಕಚ್ಚಾಟದಿಂದಾಗಿ ಮುಖ್ಯಮಂತ್ರಿ ಗಾದಿಯ ‘ಭರವಸೆ’ ನೀಡಲು ಸಾಧ್ಯವಾಗಲಿಲ್ಲ. 

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಬುಧವಾರ ಸುಮಾರು ಅರ್ಧ ಗಂಟೆ ಸಮಾಲೋಚನೆ ನಡೆಸಿದ ಬಳಿಕ ಸಿದ್ದರಾಮಯ್ಯ ಮೌನಕ್ಕೆ ಶರಣಾದರು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಗಳು ಹರಡಿದ ಕೂಡಲೇ ಶಿವಕುಮಾರ್ ಬಣ ಚುರುಕಾಯಿತು. ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಹೈಕಮಾಂಡ್‌ ಘೋಷಿಸದಂತೆ ತಡೆಯುವಲ್ಲಿ ಅವರ ಬಣ ಯಶಸ್ವಿಯಾಯಿತು. ಇನ್ನಷ್ಟು ಶಾಸಕರ ‘ಬಹಿರಂಗ’ ಬೆಂಬಲ ಗಳಿಸಿತು. ಆ ಮೂಲಕ ಮೇಲುಗೈಯನ್ನೂ ಸಾಧಿಸಿತು. ಈ ನಡುವೆ, ಆದಾಯ ಮೀರಿ ಆಸ್ತಿ ಗಳಿಸಿರುವ ಪ್ರಕರಣದಲ್ಲಿ ಶಿವಕುಮಾರ್ ವಿರುದ್ಧ ತನಿಖೆ ನಡೆಸುವುದಕ್ಕೆ ಮಧ್ಯಂತರ ತಡೆ ನೀಡಿರುವ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ, ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಂದೂಡಿತು. ಈ ಬೆಳವಣಿಗೆ ಸಹ ಶಿವಕುಮಾರ್‌ ಬಣಕ್ಕೆ ‘ಕುರ್ಚಿಯ ಹೋರಾಟ’ಕ್ಕೆ ಉತ್ಸಾಹ ತಂದುಕೊಟ್ಟಿತು. 

ಶಿವಕುಮಾರ್ ಜತೆ ಸುಮಾರು ಒಂದೂವರೆ ಗಂಟೆ ಚರ್ಚಿಸಿದ ರಾಹುಲ್‌ ಗಾಂಧಿ, ಅಧಿಕಾರ ಹಂಚಿಕೆಯ ಸೂತ್ರವನ್ನು (ತಲಾ ಎರಡೂವರೆ ವರ್ಷ ಮುಖ್ಯಮಂತ್ರಿ) ಮುಂದಿಟ್ಟರು. ‘ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆಯನ್ನು ನಮಗೆ ವಹಿಸಲಾಗಿತ್ತು. ನಾವು ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ನಾವು ಈಗ ಕೂಲಿ ಕೇಳುತ್ತಿದ್ದೇವೆ’ ಎಂದು ಶಿವಕುಮಾರ್ ಬಲವಾಗಿ ಪ್ರತಿಪಾದಿಸಿದರು. ಜತೆಗೆ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡುವುದನ್ನು ಖಡಾಖಂಡಿತವಾಗಿ ವಿರೋಧಿಸಿದರು. ಅವರು ಬಿಗಿ ಪಟ್ಟು ಸಡಿಲಿಸದೆ ಇದ್ದಾಗ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವಂತೆ ರಾಹುಲ್ ಸೂಚಿಸಿದರು.

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು. ‘ಫೈನಲ್‌, ಫೈನಲ್‌, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಈ ಎಲ್ಲ ಬೆಳವಣಿಗೆಗಳಿಂದ ಶಿವಕುಮಾರ್ ಹಾಗೂ ಸಹೋದರ ಡಿ.ಕೆ. ಸುರೇಶ್‌ ಮತ್ತಷ್ಟು ಕೆರಳಿದರು. ಖರ್ಗೆ ನಿವಾಸಕ್ಕೆ ಅಸಮಾಧಾನದಿಂದಲೇ ಬಂದ ಸಹೋದರರು, ಬೆಂಗಳೂರಿನಲ್ಲಿ ಆಗುತ್ತಿರುವ ಬೆಳವಣಿಗೆಗಳ ಕುರಿತು ಅಧ್ಯಕ್ಷರ ಗಮನಕ್ಕೆ ತಂದರು. ‘ಮುಖ್ಯಮಂತ್ರಿ ಹೆಸರನ್ನು ಹೈಕಮಾಂಡ್‌ ಪ್ರಕಟಿಸುವ ಮುನ್ನವೇ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸಮಾರಂಭಕ್ಕೆ ಸಿದ್ಧತೆಗಳು ನಡೆದಿವೆ. ಈ ಸೂಚನೆಗಳನ್ನು ನೀಡಿದವರು ಯಾರು’ ಎಂದು ಕೋಪದಿಂದ ಪ್ರಶ್ನಿಸಿದರು. ಸಹೋದರರ ರೋಷಾವೇಶ ನೋಡಿದ ಖರ್ಗೆ ಅವರು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡುವಂತೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಅವರಿಗೆ ಸೂಚಿಸಿದರು. ‘ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿಲ್ಲ. ಊಹಾಪೋಹದ ಸುದ್ದಿಗಳನ್ನು ಯಾರೂ ನಂಬಬಾರದು’ ಎಂದು ಸುರ್ಜೇವಾಲಾ ಸ್ಪಷ್ಟಪಡಿಸಿದರು.

ಡಿ.ಕೆ. ಸಹೋದರರನ್ನು ಮನವೊಲಿಸಲು ಖರ್ಗೆ ಪ್ರಯತ್ನಿಸಿದರು. ಆದರೆ, ಸಹೋದರರು ಪಟ್ಟು ಸಡಿಲಿಸಲಿಲ್ಲ. ‘ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಯನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಡುವುದಿಲ್ಲ. ನೀವು (ಖರ್ಗೆ) ಮುಖ್ಯಮಂತ್ರಿಯಾದರೆ ಕೈ ಕೆಳಗೆ ಕೆಲಸ ಮಾಡಲು ಸಿದ್ಧ’ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು. ಈ ಪ್ರಸ್ತಾವಕ್ಕೆ ಖರ್ಗೆ ಒಪ್ಪಲಿಲ್ಲ ಎಂದು ಮೂಲಗಳು ಹೇಳಿವೆ. 

ಸುಮಾರು ಎರಡು ಗಂಟೆ ಕಾಲ ಮಾತುಕತೆ ನಡೆಸಿ ಹೊರಬಂದ ಕೆಪಿಸಿಸಿ ಅಧ್ಯಕ್ಷರು, ಮಾಧ್ಯಮಗಳ ಮೇಲೂ ಅಸಮಾಧಾನ ಹೊರ ಹಾಕಿದರು. ‘ಫ್ರಾಡ್‌ಗಳ ಮಾತು ಕೇಳಿಕೊಂಡು ಸುದ್ದಿ ಪ್ರಕಟಿಸುತ್ತೀರಲ್ಲ’ ಎಂದು ಅಸಹನೆ ವ್ಯಕ್ತಪಡಿಸಿದರು. ಬಳಿಕ ಡಿ.ಕೆ. ಸುರೇಶ್‌ ನಿವಾಸಕ್ಕೆ ತೆರಳಿದರು. ಈ ವೇಳೆ, ಅವರ ಜತೆಗೆ ಶಾಸಕರಾದ ಕುಣಿಗಲ್‌ನ ಡಾ.ರಂಗನಾಥ್‌, ಮಾಗಡಿಯ ಎಚ್‌.ಸಿ.ಬಾಲಕೃಷ್ಣ ಮತ್ತಿತರರು ಇದ್ದರು. ಮುಂದಿನ ನಡೆಗಳ ಕುರಿತು ಸುಮಾರು ಒಂದು ಗಂಟೆ ರಣತಂತ್ರ ಹೆಣೆದರು.

ಈ ವೇಳೆ, ಶಿವಕುಮಾರ್ ಆಪ್ತರೊಬ್ಬರು ಹೊರಕ್ಕೆ ಬಂದು, ‘ಕೆಪಿಸಿಸಿ ಅಧ್ಯಕ್ಷರು 12 ಶಾಸಕರ ಜತೆಗೆ ಚರ್ಚಿಸುತ್ತಿದ್ದಾರೆ’ ಎಂದು ಹೇಳಿ ಹೋದರು. ನಂತರ, ಶಾಸಕರಾದ ಎನ್‌.ಎ. ಹ್ಯಾರಿಸ್‌, ಚಲುವರಾಯಸ್ವಾಮಿ, ವಿನಯ್‌ ಕುಲಕರ್ಣಿ, ಪಿ.ಎಂ. ನರೇಂದ್ರಸ್ವಾಮಿ ಮತ್ತಿತರರು ಸೇರಿಕೊಂಡರು. ಆ ನಂತರ ಶಿವಕುಮಾರ್ ಅವರು ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಈ ನಡುವೆ, ಖರ್ಗೆ ಅವರನ್ನು ಶಾಸಕರಾದ ಎಂ.ಬಿ.ಪಾಟೀಲ, ಶರಣ ಪ್ರಕಾಶ ಪಾಟೀಲ, ವಿಜಯಾನಂದ ಕಾಶಪ್ಪನವರ ಮತ್ತಿತರರು ಭೇಟಿ ಮಾಡಿದರು. 

ಸಹೋದರರ ರೋಷಾವೇಶ ನೋಡಿದ ಖರ್ಗೆ ಅವರು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡುವಂತೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಅವರಿಗೆ ಸೂಚಿಸಿದರು. ‘ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿಲ್ಲ. ಊಹಾಪೋಹದ ಸುದ್ದಿಗಳನ್ನು ಯಾರೂ ನಂಬಬಾರದು’ ಎಂದು ಸುರ್ಜೇವಾಲಾ ಸ್ಪಷ್ಟಪಡಿಸಿದರು.

ಡಿ.ಕೆ. ಸಹೋದರರನ್ನು ಮನವೊಲಿಸಲು ಖರ್ಗೆ ಪ್ರಯತ್ನಿಸಿದರು. ಆದರೆ, ಸಹೋದರರು ಪಟ್ಟು ಸಡಿಲಿಸಲಿಲ್ಲ. ‘ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಯನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಡುವುದಿಲ್ಲ. ನೀವು (ಖರ್ಗೆ) ಮುಖ್ಯಮಂತ್ರಿಯಾದರೆ ಕೈ ಕೆಳಗೆ ಕೆಲಸ ಮಾಡಲು ಸಿದ್ಧ’ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು. ಈ ಪ್ರಸ್ತಾವಕ್ಕೆ ಖರ್ಗೆ ಒಪ್ಪಲಿಲ್ಲ ಎಂದು ಮೂಲಗಳು ಹೇಳಿವೆ. 

ಸುಮಾರು ಎರಡು ಗಂಟೆ ಕಾಲ ಮಾತುಕತೆ ನಡೆಸಿ ಹೊರಬಂದ ಕೆಪಿಸಿಸಿ ಅಧ್ಯಕ್ಷರು, ಮಾಧ್ಯಮಗಳ ಮೇಲೂ ಅಸಮಾಧಾನ ಹೊರ ಹಾಕಿದರು. ‘ಫ್ರಾಡ್‌ಗಳ ಮಾತು ಕೇಳಿಕೊಂಡು ಸುದ್ದಿ ಪ್ರಕಟಿಸುತ್ತೀರಲ್ಲ’ ಎಂದು ಅಸಹನೆ ವ್ಯಕ್ತಪಡಿಸಿದರು. ಬಳಿಕ ಡಿ.ಕೆ. ಸುರೇಶ್‌ ನಿವಾಸಕ್ಕೆ ತೆರಳಿದರು. ಈ ವೇಳೆ, ಅವರ ಜತೆಗೆ ಶಾಸಕರಾದ ಕುಣಿಗಲ್‌ನ ಡಾ.ರಂಗನಾಥ್‌, ಮಾಗಡಿಯ ಎಚ್‌.ಸಿ.ಬಾಲಕೃಷ್ಣ ಮತ್ತಿತರರು ಇದ್ದರು. ಮುಂದಿನ ನಡೆಗಳ ಕುರಿತು ಸುಮಾರು ಒಂದು ಗಂಟೆ ರಣತಂತ್ರ ಹೆಣೆದರು.

ಈ ವೇಳೆ, ಶಿವಕುಮಾರ್ ಆಪ್ತರೊಬ್ಬರು ಹೊರಕ್ಕೆ ಬಂದು, ‘ಕೆಪಿಸಿಸಿ ಅಧ್ಯಕ್ಷರು 12 ಶಾಸಕರ ಜತೆಗೆ ಚರ್ಚಿಸುತ್ತಿದ್ದಾರೆ’ ಎಂದು ಹೇಳಿ ಹೋದರು. ನಂತರ, ಶಾಸಕರಾದ ಎನ್‌.ಎ. ಹ್ಯಾರಿಸ್‌, ಚಲುವರಾಯಸ್ವಾಮಿ, ವಿನಯ್‌ ಕುಲಕರ್ಣಿ, ಪಿ.ಎಂ. ನರೇಂದ್ರಸ್ವಾಮಿ ಮತ್ತಿತರರು ಸೇರಿಕೊಂಡರು. ಆ ನಂತರ ಶಿವಕುಮಾರ್ ಅವರು ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಈ ನಡುವೆ, ಖರ್ಗೆ ಅವರನ್ನು ಶಾಸಕರಾದ ಎಂ.ಬಿ.ಪಾಟೀಲ, ಶರಣ ಪ್ರಕಾಶ ಪಾಟೀಲ, ವಿಜಯಾನಂದ ಕಾಶಪ್ಪನವರ ಮತ್ತಿತರರು ಭೇಟಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT